Advertisement

8 ಡಯಟ್‌ಗಳ ವಿಭಾಗ, 6 ಟಿಟಿಐ ಮುಚ್ಚಲು ಆದೇಶ

02:34 AM May 13, 2019 | sudhir |

ಮಂಗಳೂರು: ವಿದ್ಯಾರ್ಥಿಗಳ ಕೊರತೆ ಮತ್ತು ಸಿಬಂದಿ ವೇತನ ಹೆಚ್ಚಳ ಕಾರಣ ಮುಂದಿಟ್ಟು ಸರಕಾರ ರಾಜ್ಯದ 8 ಡಯಟ್‌ಗಳಲ್ಲಿರುವ ಡಿಎಲ್‌ಇಡಿ ವಿಭಾಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಮತ್ತು ಆರು ಶಿಕ್ಷಕ ತರಬೇತಿ ಸಂಸ್ಥೆ (ಟಿಟಿಐ)ಗಳನ್ನು ಶಾಶ್ವತವಾಗಿ ಮುಚ್ಚುವಂತೆ ಆದೇಶಿಸಿದೆ. ಆದರೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಎಸ್‌ಇಆರ್‌ಟಿ)ಯ ನಿರ್ದೇಶಕರು ಎಂಟು ಡಯಟ್‌ಗಳ ಪೈಕಿ ಮೂರರಲ್ಲಿ ಮಾತ್ರ ಡಿಎಲ್‌ಇಡಿ ವಿಭಾಗ ಮುಚ್ಚಿ, ಐದರಲ್ಲಿ ದಾಖಲಾತಿಗೆ ಅವಕಾಶ ನೀಡುವಂತೆ ವಿನಂತಿಸಿದ್ದು, ಈ ಬಗ್ಗೆ ಸರಕಾರ ಇನ್ನಷ್ಟೇ ನಿರ್ದೇಶನ ನೀಡಬೇಕಿದೆ.

Advertisement

ರಾಜ್ಯದ 8 ಡಯಟ್‌ (ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ)ಗಳಲ್ಲಿನ ಸೇವಾಪೂರ್ವ ಶಿಕ್ಷಕ ಶಿಕ್ಷಣ ವಿಭಾಗ (ಡಿಎಲ್‌ಇಡಿ) ಗಳನ್ನು ತಾತ್ಕಾಲಿಕವಾಗಿ
ಮುಚ್ಚಲು ಸೂಚಿಸಲಾಗಿದ್ದು, ಇವುಗಳಲ್ಲಿ ದ.ಕ., ಬೆಳಗಾವಿ, ಮಂಡ್ಯ, ಧಾರವಾಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಬಾಗಲಕೋಟೆ ಜಿಲ್ಲೆಯವು ಸೇರಿವೆ.

ಅನುದಾನಿತ ಡಿಎಲ್‌ಇಡಿ ಕಾಲೇಜುಗಳು ಇರುವುದರಿಂದ ಸಮಸ್ಯೆ ಆಗದು ಎಂದು ಸರಕಾರ ತಿಳಿಸಿದೆ.

ವಿನಾಯಿತಿ: ಎಸ್‌ಇಆರ್‌ಟಿ ನಿರ್ದೇಶಕರ ಪತ್ರ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ 8 ಡಯಟ್‌ ವಿಭಾಗಗಳಲ್ಲಿ ವ್ಯಾಸಂಗ ಮಾಡಲಿಚ್ಛಿಸುವ ವಿದ್ಯಾರ್ಥಿಗಳಿಗೆ ಆಯಾ ಜಿಲ್ಲೆಯಲ್ಲಿಯೇ ಅವಕಾಶ ಕಲ್ಪಿಸಿಕೊಡಬೇಕಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ (ದಕ್ಷಿಣ) ಬೆಳಗಾವಿ ಮತ್ತು ಬಾಗಲಕೋಟೆ ಸಂಸ್ಥೆಗಳನ್ನು ಮಾತ್ರ ತಾತ್ಕಾಲಿಕವಾಗಿ ಮುಚ್ಚುವಂತೆ ಹಾಗೂ ಉಳಿದ ಐದರಲ್ಲಿ (ದ.ಕ., ಮಂಡ್ಯ, ಧಾರವಾಡ, ಬೆಂಗಳೂರು ಗ್ರಾಮಾಂತರ, ತುಮಕೂರು) ಪಿಎಸ್‌ಟಿಇ ವಿಭಾಗದಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಪ್ರಥಮ ಡಿಎಲ್‌ಇಡಿಗೆ ದಾಖಲಾತಿಗೆ ಈ ಬಾರಿ ಅವಕಾಶ ಕಲ್ಪಿಸುವುದು ಸೂಕ್ತ ಎಂದು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ನಿರ್ದೇಶಕರು ಎ. 27ರಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಕಲಬುರಗಿಯ ಪುರುಷರ ಟಿಟಿಐ ಯನ್ನು ಅಲ್ಲೇ ಇರುವ ಸ್ತ್ರೀಯರ ಟಿಟಿಐಯೊಂದಿಗೆ 2016ರಲ್ಲಿ ವಿಲೀನ ಗೊಳಿಸಲಾಗಿತ್ತು. ಇಲ್ಲಿ ಸಹವ್ಯಾಸಂಗ ಇರುವುದರಿಂದ 2019-20ರಲ್ಲಿ ದಾಖಲಾತಿಗೆ ಅವಕಾಶ ನೀಡುವಂತೆ ಪತ್ರದಲ್ಲಿ ಕೋರಲಾಗಿದೆ.

Advertisement

ಡಯಟ್‌ ಅಂದರೇನು?
1986ರ ರಾಷ್ಟ್ರೀಯ ಶಿಕ್ಷಣ ನೀತಿ ಯ ಶಿಫಾರಸಿನಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣದ ಗುಣಮಟ್ಟ ಸುಧಾರಿಸಲು ಜಿಲ್ಲಾ ಶಿಕ್ಷಣ ಮತ್ತು ತರಬೇತಿ (ಡಯಟ್‌) ಸಂಸ್ಥೆಗಳನ್ನು 1993ರಲ್ಲಿ 8 ಜಿಲ್ಲೆಗಳಲ್ಲಿ, 1995ರಲ್ಲಿ 12, 2006ರಲ್ಲಿ 7, 2009ರಲ್ಲಿ 2 ಮತ್ತು 2010ರಲ್ಲಿ 1 ಸೇರಿದಂತೆ ಒಟ್ಟು 30 ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿತ್ತು.

ರಾಜ್ಯದಲ್ಲಿ ಪ್ರಸ್ತುತ 7 ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆಗಳು ಮತ್ತು 23 ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳಲ್ಲಿ ಸೇವಾಪೂರ್ವ ಶಿಕ್ಷಕ ಶಿಕ್ಷಣ (ಡಿಎಲ್‌ಇಡಿ) ನೀಡಲಾಗುತ್ತಿದೆ. ಜತೆಗೆ  26 ಅನುದಾನಿತ ಶಿಕ್ಷಕ ತರಬೇತಿ ಕೇಂದ್ರಗಳಿವೆ. ಈ ಸಂಸ್ಥೆಗಳಲ್ಲಿ ಅಭ್ಯರ್ಥಿಗಳ ಸಂಖ್ಯೆ ಗಣನೀಯ ಇಳಿಕೆ ಆಗುತ್ತಿದೆ. ಕೆಲವು ಸಂಸ್ಥೆಗಳಲ್ಲಿ ಶೂನ್ಯ ದಾಖಲಾತಿ ಯಿದೆ ಎಂಬುದು ಸರಕಾರದ ವಾದ.

ವೆಚ್ಚ ಹೆಚ್ಚಳ
7 ಸರಕಾರಿ ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿ 96 ಬೋಧಕ ಮತ್ತು 57 ಬೋಧಕೇತರ ಸೇರಿ ಒಟ್ಟು 153 ಹುದ್ದೆ ಗಳು ಮಂಜೂರಾಗಿವೆ. ಈ ಸಿಬಂದಿಗೆ ವಾರ್ಷಿಕ 15.51 ಕೋ.ರೂ. ವೇತನ ಪಾವತಿಸಲಾಗುತ್ತಿದೆ. ಇದಕ್ಕೆ 2015- 2016ರಲ್ಲಿ ಮಹಾಲೇಖಪಾಲರು ಆಕ್ಷೇಪ ಎತ್ತಿದ್ದರು.

ವಿದ್ಯಾರ್ಥಿಗಳಿದ್ದರೂ ಅಡಕತ್ತರಿಯಲ್ಲಿ ಮಂಗಳೂರು!
ಮಂಗಳೂರಿನ ಕೊಡಿಯಾಲ್‌ಬೈಲ್‌ ಸಮೀಪದಲ್ಲಿ ಡಯಟ್‌ ಇದ್ದು 7
ವಿಭಾಗಗಳಲ್ಲಿ 250ಕ್ಕೂ ಅಧಿಕ ಮಂದಿ ತರಬೇತಿ ಪಡೆಯುತ್ತಿದ್ದಾರೆ. ಈ ಪೈಕಿ ಡಿಎಡ್‌ ಪ್ರಥಮ ವರ್ಷದಲ್ಲಿ 18 ಮತ್ತು ದ್ವಿತೀಯ ವರ್ಷದಲ್ಲಿ 15 ವಿದ್ಯಾರ್ಥಿ ಗಳಿದ್ದಾರೆ. ಆರಂಭದಲ್ಲಿ ಈ ವಿಭಾಗಕ್ಕೆ ಉತ್ತಮ ಸ್ಪಂದನೆ ಇದ್ದರೂ 2002ರಿಂದ ಕೆಲವು ವರ್ಷ ಕಡಿಮೆ ದಾಖಲಾತಿ ಆಗಿತ್ತು. 2016ರಲ್ಲಿ ಬಲ್ಮಠದ ಸರಕಾರಿ ಮಹಿಳಾ ಶಿಕ್ಷಣ ತರಬೇತಿ ಸಂಸ್ಥೆಯು ಡಯಟ್‌ ಜತೆಗೆ ವಿಲೀನವಾದ ಅನಂತರ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆದರೂ ಮಂಗಳೂರು ಕೇಂದ್ರದ ವಿಭಾಗವನ್ನು ತಾತ್ಕಾಲಿಕವಾಗಿ ಮುಚ್ಚಲು ಸರಕಾರ ಉದ್ದೇಶಿಸಿದ್ದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಉಡುಪಿ ಕೇಂದ್ರದ ವಿಭಾಗವನ್ನು ಮುಂದುವರಿಸುವಂತೆ ಆದೇಶಿಸಿದೆ. ಎರಡೂ ಜಿಲ್ಲೆಯಲ್ಲಿ ಅನುದಾನಿತ ಡಿಎಲ್‌ಇಡಿ ಕಾಲೇಜುಗಳು ಇರುವುದರಿಂದ ವಿದ್ಯಾರ್ಥಿಗಳಿಗೆ ಸದ್ಯಕ್ಕೆ ಸಮಸ್ಯೆ ಇಲ್ಲ.

ಎಂಟು ತರಬೇತಿ ಕೇಂದ್ರದ ಪೈಕಿ ಐದರಲ್ಲಿ ಈ ವರ್ಷ ಪ್ರವೇಶಾವಕಾಶ ನೀಡಬೇಕು ಎಂದು ಸರಕಾರಕ್ಕೆ ಪತ್ರ ಬರೆಯಲಾಗಿದೆ. ಸರಕಾರದ ಮುಂದಿನ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು.
– ಎಚ್‌.ಎನ್‌. ಗೋಪಾಲಕೃಷ್ಣ
ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಬೆಂಗಳೂರು

ಮುಚ್ಚಿದ ಟಿಟಿಐಗಳು
1. ಸ.ಶಿ.ತ. ಸಂಸ್ಥೆ (ಪುರುಷ) ಕಲಬುರಗಿ
2 ಸ.ಶಿ.ತ. ಸಂಸ್ಥೆ ಹೊಸದುರ್ಗ, ಚಿತ್ರದುರ್ಗ
3. ಸ.ಶಿ.ತ. ಸಂಸ್ಥೆ (ಮಹಿಳೆ) ಧಾರವಾಡ
4. ಸ.ಶಿ.ತ. ಸಂಸ್ಥೆ ಮಹಾರಾಣಿ ಮೈಸೂರು
5. ಸ.ಶಿ.ತ. ಸಂಸ್ಥೆ ಸಿಂಧನೂರು ರಾಯಚೂರು
6. ಸ.ಶಿ.ತ. ಸಂಸ್ಥೆ ಚಿಕ್ಕನಹಳ್ಳಿ ಶಿರಾ

Advertisement

Udayavani is now on Telegram. Click here to join our channel and stay updated with the latest news.

Next