ಬೆಂಗಳೂರು: ರಾಜ್ಯದಲ್ಲಿ ಹಳದಿ ಜ್ವರದ ಭೀತಿ ಎದುರಾಗಿದ್ದು, ಸುಡಾನ್‌ನಿಂದ ಬೆಂಗಳೂರಿಗೆ ಬಂದ 78 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ದೇಶದಲ್ಲಿ ಕೋವಿಡ್ ಆತಂಕ ದೂರವಾದ ಬೆನ್ನಲ್ಲೇ ಇದೀಗ ಮತ್ತೆ ಹಳದಿ ಜ್ವರದ ಭೀತಿ ಆತಂಕಕ್ಕೀಡು ಮಾಡಿದೆ. ಸುಡಾನ್‌ನಿಂದ ಬಂದವರ ಪೈಕಿ 78 ಮಂದಿ ಹಳದಿ ಜ್ವರಕ್ಕೆ ಲಸಿಕೆ ತೆಗೆದುಕೊಂಡಿರಲಿಲ್ಲ. ಈ ಪೈಕಿ ಕೇರಳ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕರ್ನಾಟಕ, ತೆಲಂಗಾಣ, ತಮಿಳುನಾಡಿನವರು ನಂತರದ ಸ್ಥಾನದಲ್ಲಿದ್ದಾರೆ. ಹೀಗಾಗಿ ಲಸಿಕೆ ಪಡೆಯದವರನ್ನು 6 ದಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ.
ಕ್ವಾರಂಟೈನ್‌ಗೆ ಒಳಗಾದವರಲ್ಲಿ ಯಾವುದೇ ಗುಣಲಕ್ಷಣ ಕಂಡು ಬಾರದಿದ್ದರೆ ಬಿಟ್ಟು ಕಳುಹಿಸಲಾಗುವುದು. ನಿಯಮಾನುಸಾರ ಕ್ವಾರಂಟೈನ್ ಮಾಡಿರುವುದಾಗಿ ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
229 ಮಂದಿ ಆಗಮನ: ಸುಡಾನ್‌ನಲ್ಲಿ ಸಿಲುಕಿಕೊಂಡಿದ್ದ 229 ಮಂದಿ ಭಾನುವಾರ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದು, ಈ ಪೈಕಿ 31 ಮಂದಿ ಲಸಿಕೆ ಹಾಕಿಸಿಕೊಳ್ಳದವರನ್ನು ಕ್ವಾರಂಟೈನ್ ಮಾಡಲಾಗಿದೆ. ಆಪರೇಷನ್ ಕಾವೇರಿ ಕಾರ್ಯಾಚರಣೆಯಡಿ ಒಟ್ಟು ದೇಶದ ವಿವಿಧ ರಾಜ್ಯಗಳ 582 ಮಂದಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಭಾರತದಲ್ಲಿ ಇದುವರೆಗೆ ಹಳದಿ ಜ್ವರದ ಪ್ರಕರಣ ಪತ್ತೆಯಾಗಿಲ್ಲ. ಕಣ್ಣು ಉರಿ, ಹಳದಿ ಕಣ್ಣು, ಜ್ವರ, ಶೀತ, ಸುಸ್ತು, ಮೈ ಕೈ ನೋವು ಇವುಗಳು ಹಳದಿ ಜ್ವರದ ಗುಣ ಲಕ್ಷಣಗಳಾಗಿವೆ. ಮುಂಜಾಗ್ರತಾ ಕ್ರಮವಾಗಿ ಈ ನಿಯಮ ವಿಧಿಸಲಾಗಿದೆ.
ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕಾ, ಉಗಾಂಡ, ನೈಜೀರಿಯಾ, ಕೀನ್ಯಾ ಸೇರಿ ಕೆಲ ದೇಶಗಳಲ್ಲಿ ಹಳದಿ ಜ್ವರ ಹೆಚ್ಚಳವಾಗಿದೆ. ಹೀಗಾಗಿ ಹಳದಿಜ್ವರ ಕಾಣಿಸಿಕೊಂಡ ದೇಶಗಳಿಂದ ಬರುವವರು ಕಡ್ಡಾಯವಾಗಿ ಎಲ್ಲೋ ಫೀವರ್ ವ್ಯಾಕ್ಸಿನ್ ಮಾಡಿಸಿಕೊಂಡು ಅದಕ್ಕೆ ಸಂಬಂಧಿಸಿದ ದಾಖಲಾತಿ ತೋರಿಸಿದರಷ್ಟೆ ಅವರನ್ನು ಬಿಡಲಾಗುತ್ತದೆ. ಇಲ್ಲದಿದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಮಾಡಿ ರೋಗಗಳ ಗುಣ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೆ ಬಿಟ್ಟು ಕಳುಹಿಸಲಾಗುತ್ತದೆ.