ಕಾಂಞಂಗಾಡು: ಪೆರಿಯ ಜವಾಹರ್ ನವೋದಯ ವಿದ್ಯಾಲಯ ದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಎಚ್1 ಎನ್ 1 ಸೋಂಕು ಪತ್ತೆಯಾಗಿರುವ ಹಿನ್ನೆಲೆ ಯಲ್ಲಿ ಚಿಕಿತ್ಸೆಗಾಗಿ ವಿದ್ಯಾಲಯದಲ್ಲೇ ವಿಶೇಷ ವಾರ್ಡ್ ಸ್ಥಾಪಿಸಲಾಗಿದೆ.
ಜಿಲ್ಲಾ ಉಪ ವೈದ್ಯಾಧಿಕಾರಿ ಡಾ| ಮನೋಜ್ ಕುಮಾರ್, ಡಾ| ರಜೀಶ್ ಮತ್ತು ಪೆರಿಯ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬಂದಿ ಈ ವಿಶೇಷ ವಾರ್ಡ್‌ನಲ್ಲಿ ಶಿಬಿರ ಹೂಡಿ ಚಿಕಿತ್ಸೆ ನೀಡುತ್ತಿದ್ದಾರೆ. ಐವರು ವಿದ್ಯಾರ್ಥಿಗಳಲ್ಲಿ ಈಗಾಗಲೇ ರೋಗ ಖಚಿತಪಡಿಸಲಾಗಿದೆ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ.
ಒಟ್ಟು 76 ಮಂದಿ ವಿದ್ಯಾರ್ಥಿಗಳಲ್ಲಿ ರೋಗ ಲಕ್ಷಣ ಕಂಡುಬಂದಿದೆ. ಇದರಲ್ಲಿ ಉತ್ತರ ಪ್ರದೇಶದ 18 ಮಂದಿ ಹಾಗೂ ಉಳಿದವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಕಾಸರಗೋಡು ಜಿಲ್ಲೆಯವರು. ನವೋದಯ ವಿದ್ಯಾಲಯದಲ್ಲಿ ಒಟ್ಟು 520 ಮಂದಿ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಇತರ ಸಿಬಂದಿ ಸೇರಿ ಒಟ್ಟು 700 ಮಂದಿ ಇಲ್ಲಿದ್ದಾರೆ.
ಚಿಕಿತ್ಸೆ ಮತ್ತು ರೋಗ ಹರಡದಿರಲು ಅಗತ್ಯ ಎಲ್ಲ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಳ್ಳುತ್ತಿದೆ. ಆದರೂ ಜನರು ಗರಿಷ್ಠ ಜಾಗ್ರತೆ ಪಾಲಿಸಬೇಕು ಎಂದು ಅವರು ಮುನ್ನೆಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಕಂದಾಯ ಮತ್ತು ವಸತಿ ನಿರ್ಮಾಣ ಖಾತೆ ಸಚಿವ ಇ. ಚಂದ್ರಶೇಖರನ್ ಪೆರಿಯ ನವೋದಯ ಶಾಲೆಗೆ ಭೇಟಿ ನೀಡಿ ಸ್ಥಿತಿಗತಿಗಳ ಬಗ್ಗೆ ಅವಲೋಕನ ನಡೆಸಿದ್ದಾರೆ.
Related Articles
ಆತಂಕ ಬೇಡ
ಪೆರಿಯ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡ ಎಚ್1 ಎನ್1 ನಿಯಂತ್ರಣ ದಲ್ಲಿದೆ. ಆತಂಕ ಅಗತ್ಯವಿಲ್ಲ ಎಂದು ರಾಜ್ಯ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಟೀಚರ್ ತಿಳಿಸಿದ್ದಾರೆ.