ಮಂಗಳೂರು: ಡೈರೆಕ್ಟರೆಟ್ ಜನರಲ್ ಆಫ್ ಸೆಂಟ್ರಲ್ ಎಕ್ಸೈಸ್ ಇಂಟೆಲಿಜೆನ್ಸ್ (ಡಿಜಿಸಿಇಐ) ಮಂಗಳೂರು ಘಟಕ 2016-17ನೇ ಸಾಲಿನಲ್ಲಿ 76 ಕೋಟಿ ರೂ. ಮೊತ್ತದ ಕೇಂದ್ರೀಯ ಅಬಕಾರಿ ಮತ್ತು ಸೇವಾ ತೆರಿಗೆ ಕಳ್ಳತನ ಪತ್ತೆ ಹಚ್ಚಿದ್ದು, ಈ ಪೈಕಿ 50 ಕೋ. ರೂ. ವಸೂಲಿ ಮಾಡಿದೆ.
ಕಳೆದ ವರ್ಷದ ಸಾಧನೆಗೆ ಹೋಲಿಸಿದರೆ ಈ ವರ್ಷ ಶೇ 300ರಷ್ಟು ಹೆಚ್ಚು ಸಾಧನೆಯಾಗಿದೆ.ಪತ್ತೆಯಾದ ತೆರಿಗೆ ಕಳ್ಳತನದಲ್ಲಿ ವಸೂಲಾದ ತೆರಿಗೆ ಮೊತ್ತ ಶೇ. 65ರಷ್ಟಿದ್ದು, ಇದು ದೇಶದಲ್ಲಿಯೇ ಅತ್ಯಧಿಕವಾಗಿದೆ ಎಂದು ಪ್ರಕಟನೆ ತಿಳಿಸಿದೆ.ತೆರಿಗೆ ಪಾವತಿಸದೆ ತಪ್ಪಿಸಿಕೊಳ್ಳಲು ಹಲವು ದಾರಿ ಕಂಡು ಕೊಂಡವರು ತಮ್ಮ ಕೃತ್ಯವನ್ನು ಅಧಿಕಾರಿಗಳು ಪತ್ತೆ ಹಚ್ಚಿದ ಕೂಡಲೇ ಅದನ್ನು ಸಂಪೂರ್ಣವಾಗಿ ಮರು ಪಾವತಿಸಿದ್ದಾರೆ.
ಮಂಗಳೂರು ಘಟಕ 2016-17ರಲ್ಲಿ ಒಟ್ಟು 14 ಪ್ರಕರಣಗಳಲ್ಲಿ 26.23 ಕೋ. ರೂ. ಕೇಂದ್ರೀಯ ಅಬ್ಕಾರಿ ಸುಂಕ ಪಾವತಿಸದಿರುವ ಪ್ರಕರಣಗಳನ್ನು ಪತ್ತೆ ಹಚ್ಚಿದೆ. ಈ ಪೈಕಿ 6.47 ಕೋ. ರೂ. ವಸೂಲಾಗಿದೆ. ಸೇವಾ ತೆರಿಗೆ ಪಾವತಿ ಮಾಡದ 71 ಪ್ರಕರಣಗಳನ್ನು ಪತ್ತೆ ಮಾಡಿದೆ. ಒಟ್ಟು ಮೊತ್ತ 50.63 ಕೋ. ರೂ. ಆಗಿದ್ದು, ಅದರಲ್ಲಿ 43.57 ಕೋ. ರೂ. ವಸೂಲು ಮಾಡಿದೆ.
ಕೆಲವು ಹೈ ಪ್ರೊಫೈಲ್ ಪ್ರಕರಣ ಪತ್ತೆ ಹಚ್ಚಿದ್ದು, 117 ಮಂದಿ ತಪ್ಪಿತಸ್ಥರು ಕೇಂದ್ರೀಯ ಅಬಕಾರಿ ಮತ್ತು ಸೇವಾ ತೆರಿಗೆ ಪಾವತಿಸಲು ಮುಂದೆ ಬಂದಿದ್ದಾರೆ. ಘಟಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡ ಫಲವಾಗಿ ಇದು ಸಾಧ್ಯವಾಗಿದೆ ಎಂದು ಪ್ರಕಟನೆ ತಿಳಿಸಿದೆ.
Related Articles
ತೆರಿಗೆ ಪಾವತಿ ಮಾಡದೆ ಸರಕಾರಕ್ಕೆ ವಂಚಿಸುವ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಕೂಡ ಇಲಾಖೆಗೆ ಮಾಹಿತಿ ನೀಡುತ್ತಿದ್ದಾರೆ. ಹಾಗೆ ಮಾಹಿತಿ ನೀಡುವವರಿಗೆ ಸರಕಾರದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಪತ್ತೆಯಾಗುವ ತೆರಿಗೆ ಕಳ್ಳತನ ಮೊತ್ತದ ಶೇ. 20ರಷ್ಟನ್ನು ಸಂಭಾವನೆಯಾಗಿ ನೀಡಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ತೆರಿಗೆ ಕಳ್ಳತನ ಪ್ರಕರಣಗಳ ಪತ್ತೆಗೆ ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಸಾರ್ವಜನಿಕ ಮಾಹಿತಿದಾರರು ಮಂಗಳೂರಿನ ಮಣ್ಣಗುಡ್ಡ ಗಾಂಧಿ ಪಾರ್ಕ್ ಬಳಿಯ ಭಾರತ್ ನಿವಾಸ್ ಕಟ್ಟಡದಲ್ಲಿರುವ ಡೈರೆಕ್ಟರೆಟ್ ಜನರಲ್ ಆಫ್ ಸೆಂಟ್ರಲ್ ಎಕ್ಸೈಸ್ ಇಂಟೆಲಿಜೆನ್ಸ್ ಅಧಿಕಾರಿಗಳನ್ನು ಸಂಪರ್ಕಿಸ ಬಹುದು. ಮಾಹಿತಿದಾರರ ಬಗ್ಗೆ ಗೌಪ್ಯತೆ ಕಾಯ್ದು ಕೊಳ್ಳಲಾಗುವುದು ಎಂದು ಪ್ರಕಟನೆ ತಿಳಿಸಿದೆ. ಈ ಮೇಲ್ ವಿಳಾಸ: dgceirumlr@gmail.com