Advertisement

ಸ್ವಾತಂತ್ರ್ಯದ ಅಮೃತೋತ್ಸವ: ಖಾದಿ ಧ್ವಜಗಳನ್ನು ಹಾರಿಸಲು ಧ್ವಜ ಸತ್ಯಾಗ್ರಹ

07:30 PM Aug 09, 2022 | Team Udayavani |

ಚಾಮರಾಜನಗರ: ಸ್ವಾತಂತ್ರ್ಯ ಸ್ವಾಭಿಮಾನದ ಸಂಕೇತವಾಗಿರುವ ಖಾದಿ ಧ್ವಜಗಳನ್ನೇ ಹಾರಿಸಬೇಕು, ಪಾಲಿಸ್ಟರ್ ಧ್ವಜಗಳನ್ನು ಬಳಸಬಾರದು ಎಂದು ಆಗ್ರಹಿಸಿ ನಗರದಲ್ಲಿ ಧ್ವಜ ಸತ್ಯಾಗ್ರಹ ನಡೆಸಲಾಯಿತು.

Advertisement

ನಗರದ ಧ್ವಜ ಸತ್ಯಾಗ್ರಹ ಸಮಿತಿ ವತಿಯಿಂದ ನಗರದ ಪ್ರವಾಸಿ ಮಂದಿರದಿಂದ  ಮೆರವಣಿಗೆ ಹೊರಟು, ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಸಂತೆಮರಹಳ್ಳಿ ವೃತ್ತ, ಡೀವಿಯೇಷನ್ ರಸ್ತೆ ಮೂಲಕ ಭುವನೇಶ್ವರಿ ವೃತ್ತ ತಲುಪಿದರು. ಅಲ್ಲಿ ಕೆಲ ನಿಮಿಷಗಳ ಕಾಲ ಘೋಷಣೆಗಳನ್ನು ಕೂಗಿ, ಬಿ.ರಾಚಯ್ಯಜೋಡಿ ರಸ್ತೆ ಮೂಲಕ, ಜಿಲ್ಲಾಡಳಿತ ಭವನದ ಮಹಾದ್ವಾರದ ಮುಂದೆ  ಸತ್ಯಾಗ್ರಹ ನಡೆಸಿದರು. ನಮ್ಮ ಬಾವುಟ, ಖಾದಿ ಬಾವುಟ, ಬೇಡ ಬೇಡ ಪಾಲಿಸ್ಟರ್ ಬಾವುಟ ಬೇಡ ಎಂಬ ಘೋಷಣೆಗಳನ್ನು ಕೂಗಿದರು.

ಸ್ವಾತಂತ್ರ್ಯದ ಅಮೃತೋತ್ಸವದ ಅಂಗವಾಗಿ ಪ್ರತಿ ಮನೆಗಳ ಮೇಲೆ ತ್ರಿವರ್ಣಧ್ವಜ ಹಾರಾಟಕ್ಕೆ ಕೇಂದ್ರ ಸರ್ಕಾರ ಕರೆ ಕೊಟ್ಟಿದೆ. ಆದರೆ ಸ್ವದೇಶಿ ಉತ್ಪನ್ನವಾದ ಖಾದಿಯಿಂದ ತಯಾರಿಸಿದ ಬಾವುಟದ ಬದಲಿಗೆ ವಿದೇಶಿ ಕಾರ್ಖಾನೆಗಳಲ್ಲಿ ತಯಾರಾಗಿರುವ ಪಾಲಿಸ್ಟರ್ ಧ್ವಜಗಳ್ನು 25 ರೂ. ಗಳಿಗೆ  ಮಾರಾಟ ಮಾಡಲಾಗುತ್ತಿದೆ. ಧ್ವಜ ಸಂಹಿತೆ ಪ್ರಕಾರ ತಯಾರಾದ ರಾಷ್ಟ್ರಧ್ವಜದ ಎರಡೂ ಭಾಗದಲ್ಲಿ ಅಶೋಕ ಚಕ್ರ ಕಾಣಿಸುತ್ತದೆ. ಆದರೆ ಪಾಲಿಸ್ಟರ್ ನಲ್ಲಿ ತಯಾರಾಗಿರುವ ಧ್ವಜದಲ್ಲಿ ಒಂದು ಕಡೆ ಮಾತ್ರ ಅಶೋಕ ಚಕ್ರ ಕಾಣಿಸುತ್ತದೆ. ಅಲ್ಲದೇ ಬೇಕಾಬಿಟ್ಟಿಯಾಗಿ ಧ್ವಜ ತಯಾರಿಸಲಾಗಿದೆ. ಚಕ್ರ ನಿಗದಿತ ಜಾಗದಲ್ಲಿಲ್ಲ. ಇದು ಸರಿಯಾದ ಕ್ರಮವಲ್ಲ. ಆದ್ದರಿಂದ ಪಾಲಿಸ್ಟರ್ ಬದಲಿಗೆ ಹಿಂದಿನಿಂದ ಬಳಸುತ್ತಿರುವ ಖಾದಿಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಅಂತಾರಾಷ್ಟ್ರೀಯ ಗಾಂಧಿವಾದಿ ರಾಜಗೋಪಾಲ್ ಮಾತನಾಡಿ, ಪಾಲಿಸ್ಟರ್ ಬದಲಿಗೆ ಖಾದಿಯದ್ದೇ ರಾಷ್ಟ್ರಧ್ವಜ ಹಾರಾಡಬೇಕೆಂಬ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ನಾನು ದೇಶದ ನಾನಾ ಭಾಗಗಳಲ್ಲಿ ಸಂಚರಿಸುತ್ತಿದ್ದೇನೆ. ಈ ದಿನ ಬಹಳ ವಿಶೇಷತೆಯಿಂದ ಕೂಡಿದೆ. ಇಂದು ಆದಿವಾಸಿಗಳ ದಿನವಾಗಿದ್ದು, ಆ ಜನರಿಗೆ ಮಹಾತ್ಮ ಗಾಂಧಿಯವರೆಂದರೆ ತುಂಬಾ ಅಚ್ಚುಮೆಚ್ಚು. ಇಂದು ಈ ಸತ್ಯಾಗ್ರಹ ನಡೆಸುತ್ತಿರುವುದು ಅರ್ಥಪೂರ್ಣ ಎಂದರು.

ಮೊಹರಂ ಭಾವೈಕ್ಯತೆಯ ಸಂಕೇತವಾಗಿದ್ದು, ಕ್ವಿಟ್ ಇಂಡಿಯಾ ಚಳವಳಿ ದಿನವೂ ಇಂದೇ ಆಗಿದ್ದು, ಬಡತನ, ದ್ವೇಷ ಎಲ್ಲಾ ಕೆಟ್ಟತನಗಳು ಈ ದಿನದಂದೇ ಸಮಾಜದಿಂದ ತೊಲಗಬೇಕು. ಖಾದಿ ಕೇವಲ ಬಟ್ಟೆಯ ತುಣುಕಲ್ಲ. ಇದು ಅನೇಕ ಸಂದೇಶ ನೀಡುತ್ತದೆ. ರಾಷ್ಟ್ರಧ್ವಜ ಖಾದಿಯದೇ ಆಗಿರಬೇಕು. ಪಾಲಿಸ್ಟರ್ ಯಾಕೆ? ಖಾದಿಯ ಕೈಮಗ್ಗದಲ್ಲಿ ಕೆಲಸ ಮಾಡುವವರು ಬಡತನದಲ್ಲಿದ್ದಾರೆ. ಅಲ್ಲದೆ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದೆ. ಹೀಗಿರುವಾಗ ಪಾಲಿಸ್ಟರ್ ಉತ್ತೇಜಿಸುವುದು ಸರಿಯಲ್ಲ ಎಂದರು.

Advertisement

ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್. ಜಯದೇವ್ ಮಾತನಾಡಿ, ಖಾದಿ ಬಟ್ಟೆಯು ಅಹಿಂಸೆ, ಸಂಯಮ, ಸರಳತೆಯ ಸಂಕೇತವಾಗಿದೆ. ಇದರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಮಡಿದವರ ತ್ಯಾಗ ಇದೆ. ಇದು ಅನೇಕ ಮೌಲ್ಯಗಳ ಸಂಕೇತ. ಇಂದು ಗಾಂಧಿ ಬೇಡ, ಖಾದಿ ಧ್ವಜ ಬೇಡ ಎಂಬಂತಹ ಧೋರಣೆ ಬೆಳೆಯುತ್ತಿದೆ. ಇವತ್ತು ಕಾರ್ಪೊರೇಟ್ ಜಗತ್ತಿಗೆ ಮನ್ನಣೆ ನೀಡಲಾಗುತ್ತಿದ್ದು, ಮೌಲ್ಯಗಳನ್ನು ಕಳೆದುಕೊಂಡಿದ್ದೇವೆ. ಸುಖದ ಬಿಸಿಲುಗುದುರೆ ಹಿಂದೆ ಓಡುತ್ತಿದ್ದೇವೆ. ಇದು ಮನುಷ್ಯ ಕುಲಕ್ಕೆ ಅಪಾಯಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದರು.

ಸತ್ಯಾಗ್ರಹದಲ್ಲಿ ಪ್ರೊ.ಕಾಳಚನ್ನೇಗೌಡ, ಕೆ.ವೆಂಕಟರಾಜು, ಪ್ರೊ. ಸಿದ್ದರಾಮಯ್ಯ, ಪ್ರೊ. ಆರ್. ಎಂ. ಚಿಂತಾಮಣಿ,  ಪುಣಜನೂರು ದೊರೆಸ್ವಾಮಿ, ಎ ಡಿಸಿಲ್ವ,  ಜಿ.ಪಿ.ಬಸವರಾಜು, ಸರಸ್ವತಿ, ಸಿ.ಬಿ.ನಾಗರಾಜು, ಸಿ.ಪಿ.ಹುಚ್ಚೇಗೌಡ, ಸುರೇಶ್ ಕುಮಾರ್, ಶಿವಸ್ವಾಮಿ, ಲೀನಾಕುಮಾರಿ, ಸೈಯದ್ ಆರಿಫ್, ಅಬ್ರಾರ್ ಅಹ್ಮದ್, ದೀನಬಂಧು ಸಂಸ್ಥೆಯ ಪ್ರಜ್ಞಾ, ಪ್ರಭುಸ್ವಾಮಿ, ಪ್ರಕಾಶ್, ಗುರುಸಿದ್ದಯ್ಯ, ಮಹೇಶ್, ಎಡ್ವರ್ಡ್  ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next