ಹೊಸದಿಲ್ಲಿ: ಭಾರತ ಪ್ರಸಕ್ತ ವರ್ಷ 75ನೇ ಸ್ವಾತಂತ್ರ್ಯೋತ್ಸವಕ್ಕೆ ಸಾಕ್ಷಿಯಾಗುತ್ತಿದ್ದು, ಈ ಐತಿಹಾಸಿಕ ಕ್ಷಣವನ್ನು ಅರ್ಥಪೂರ್ಣ ಮತ್ತು ಸಂಭ್ರಮದಿಂದ ಆಚರಿಸುವ ಸಲುವಾಗಿ ಕೇಂದ್ರ ಸರಕಾರ 259 ಗಣ್ಯ ಸದಸ್ಯರನ್ನೊಳಗೊಂಡ ಸಮಿತಿ ರಚಿಸಿದೆ. ಖುಷಿಯ ಸಂಗತಿಯೆಂದರೆ, ಈ ಪಟ್ಟಿಯಲ್ಲಿ ಹಲವು ಕನ್ನಡಿಗ ಗಣ್ಯರಿಗೆ ಗೌರವ ಸ್ಥಾನ ಲಭಿಸಿದೆ.
ದೇಶದ ಪ್ರಮುಖರು: ಪ್ರಧಾನಿ ನರೇಂದ್ರ ಮೋದಿ ಸಮಿತಿಯ ಅಧ್ಯಕ್ಷರಾಗಿರಲಿದ್ದಾರೆ. ಸುಪ್ರೀಂ ಮುಖ್ಯ ನ್ಯಾಯಮೂರ್ತಿಗಳಾದ ಎಸ್.ಎ. ಬೋಬ್ದೆ, ರಂಜನ್ ಗೋಗೊಯ್, ಕೆ. ಪರಾಶರನ್, ಸೋಲಿ ಸೊರಾಬ್ಜಿ ಅವರಿಗೂ ಸ್ಥಾನ ನೀಡಲಾಗಿದೆ. ಮಾಜಿ ಪ್ರಧಾನಿ ಡಾ| ಮನಮೋಹನ ಸಿಂಗ್, ಸೇನಾ ಮುಖ್ಯಸ್ಥ ಜ| ಬಿಪಿನ್ ರಾವತ್, ರಾಜಕೀಯ ಧುರೀಣರಾದ ಎಲ್.ಕೆ. ಆಡ್ವಾಣಿ, ಜೆ.ಪಿ. ನಡ್ಡಾ, ಸೋನಿಯಾ ಗಾಂಧಿ, ಗುಲಾಂ ನಬೀ ಆಜಾದ್, ಉದ್ಯಮಿ ರತನ್ ಟಾಟಾ, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಖ್ಯಾತ ಗಾಯಕಿ ಲತಾ ಮಂಗೇಶ್ಕರ್, ನಟರಾದ ಅಮಿತಾಭ್ ಬಚ್ಚನ್, ರಜನೀಕಾಂತ್, ಸದ್ಗುರು ಜಗ್ಗೀ ವಾಸುದೇವ್- ಈ ಪಟ್ಟಿಯಲ್ಲಿದ್ದಾರೆ.
ಇವರೊಂದಿಗೆ ಕೇಂದ್ರ ಸಚಿವರು, ಎಲ್ಲ ರಾಜ್ಯಗಳ ರಾಜ್ಯಪಾಲರು- ಮುಖ್ಯಮಂತ್ರಿಗಳು, ರಾಜಕೀಯ ಧುರೀಣರೂ ಸದಸ್ಯರಾಗಿರಲಿದ್ದಾರೆ.
ಕನ್ನಡಿಗ ಗಣ್ಯರು: ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ, ಮಾಜಿ ಪ್ರಧಾನಿ ದೇವೇಗೌಡ, ಪದ್ಮಶ್ರೀ ಪುರಸ್ಕೃತ ಬಿ.ಎಂ. ಹೆಗ್ಡೆ, ಅಧ್ಯಾತ್ಮ ಕ್ಷೇತ್ರದಿಂದ ಶ್ರೀ ರವಿಶಂಕರ್ ಗುರೂಜಿ, ಕೇಂದ್ರ ಸಚಿವರಾದ ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಇನ್ನಿತರರು, ಕ್ರೀಡಾ ಪಟುಗಳಾದ ಪ್ರಕಾಶ್ ಪಡುಕೋಣೆ, ರಾಹುಲ್ ದ್ರಾವಿಡ್, ಬ್ಯಾಂಕರ್ ಕೆ.ವಿ. ಕಾಮತ್, ಉದ್ಯಮಿಗಳಾದ ಅಜೀಮ್ ಪ್ರೇಮ್ ಜಿ, ನಂದನ್ ನಿಲೇಕಣಿ, ಯೋಗ ಗುರು ಎಚ್.ಆರ್. ನಾಗೇಂದ್ರ ಮುಂತಾದವರು ಗೌರವ ಸ್ಥಾನ ಪಡೆದಿದ್ದಾರೆ.