Advertisement

ಶಾಲೆ-ಕಾಲೇಜುಗಳಲ್ಲಿ 75 ಎನ್‌ಸಿಸಿ ಘಟಕ: ಸಿಎಂ

12:32 AM Jan 24, 2022 | Team Udayavani |

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಯುವಕರು ಎನ್‌ಸಿಸಿ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದು, ಅವರಿಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ರಾಜ್ಯದ ಶಾಲಾ-ಕಾಲೇಜುಗಳಲ್ಲಿ 75 ಎನ್‌ಸಿಸಿ ಘಟಕಗಳನ್ನು ಆರಂಭಿಸಿ ತರಬೇತಿ ನೀಡಲು ಸರಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Advertisement

ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ರವಿವಾರ ಜಕ್ಕೂರಿನ ನವೀಕೃತ ಸರಕಾರಿ ವೈಮಾನಿಕ ತರಬೇತಿ ಶಾಲೆ, ಟ್ವಿನ್‌ ಎಂಜಿನ್‌ ತರಬೇತಿ ವಿಮಾನ, ಜಿಎಫ್ಟಿಎಸ್‌ ಲೋಗೋ, 75 ಪೈಲಟ್‌ಗಳಿಗೆ ತರಬೇತಿ ನೀಡುವುದು, ಮಹಿಳೆಯರಿಗೆ ಸ್ವರಕ್ಷಣೆ ತರಬೇತಿ ಹಾಗೂ ಹೆಲಿ ಪ್ರವಾಸೋದ್ಯಮ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಸಿಎಂ ಮಾತನಾಡಿದರು.

7,500 ಮಂದಿಗೆ ತರಬೇತಿ
ರಾಜ್ಯಾದ್ಯಂತ 75 ಶಾಲಾ-ಕಾಲೇಜುಗಳಲ್ಲಿ ತಲಾ ನೂರು ಮಂದಿಯಂತೆ 7,500 ವಿದ್ಯಾರ್ಥಿಗಳಿಗೆ ಎನ್‌ಸಿಸಿ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆಯುವ ಪ್ರತಿ ವಿದ್ಯಾರ್ಥಿಗೆ 12 ಸಾವಿರ ರೂ.ಗಳನ್ನು ಸರಕಾರ ನೀಡಲಿದೆ ಎಂದು ಹೇಳಿದರು. ಪ್ರಸ್ತುತ ಶಾಲೆಗಳಲ್ಲಿ 44 ಸಾವಿರ ಕೆಡೆಟ್‌ಗಳಿದ್ದು, ಇದನ್ನು ಕಾಲೇಜುಗಳಿಗೂ ವಿಸ್ತರಿಸಿ ಕೆಡೆಟ್‌ಗಳ ಸಂಖ್ಯೆಯನ್ನು 50 ಸಾವಿರ ದಾಟಿಸಲು ಸರಕಾರ ಯೋಜನೆ ರೂಪಿಸಿದೆ. ಕೆಡೆಟ್‌ಗಳ ಯೋಜನೆಗೆ ರಕ್ಷಣಾ ಇಲಾಖೆ ಅನುಮತಿ ಬೇಕಿದ್ದು, ಈ ಸಂಬಂಧ ಕೇಂದ್ರ ಸರಕಾರದೊಂದಿಗೆ ಚರ್ಚಿಸಿ ಕೆಡೆಟ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಹೇಳಿದರು. ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ಶಾಸಕ ಕೃಷ್ಣ ಭೈರೇಗೌಡ, ಎಂಎಲ್‌ಸಿ ಗೋವಿಂದರಾಜು ಉಪಸ್ಥಿತರಿದ್ದರು.

ಇದನ್ನೂ ಓದಿ:ಕೋವಿಡ್‌ ಪರೀಕ್ಷೆ ಹೆಚ್ಚಳದಿಂದ ಸೋಂಕು ನಿಯಂತ್ರಣ: ಸಚಿವ ಡಾ.ಕೆ. ಸುಧಾಕರ್‌

ರಾಜ್ಯದಲ್ಲೇ ವೈಮಾನಿಕ ತರಬೇತಿ;
2 ಕೋಟಿ ರೂ. ವೆಚ್ಚದಲ್ಲಿ ರನ್‌ ವೇ
ಯುವಜನ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ ಮಾತನಾಡಿ, ನವೀಕೃತ ವೈಮಾನಿಕ ತರಬೇತಿ ಶಾಲೆಯಲ್ಲಿ ಪ್ರತಿ ವರ್ಷ ರಾಜ್ಯದ 100 ಜನರಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ.

Advertisement

ರಾಜ್ಯದ ಜನರು ತರಬೇತಿಗಾಗಿ ಅಮೆರಿಕ, ಇಂಗ್ಲೆಂಡ್‌ಗೆ ಹೋಗುವುದನ್ನು ತಪ್ಪಿಸುವುದಕ್ಕಾಗಿ ಮತ್ತು ರಾಜ್ಯದ ಬಡವರ ಮಕ್ಕಳು ಕೂಡ ತರಬೇತಿ ಪಡೆಯುವಂತಾಗಬೇಕು ಎಂಬುದು ಇಲಾಖೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ನಾನು 1994ರಲ್ಲಿ ನಾಗಪುರದಲ್ಲಿ ಪೈಲಟ್‌ ತರಬೇತಿ ಪಡೆದಿದ್ದೆ. ಅನಂತರ ಹಣಕಾಸಿನ ಸಮಸ್ಯೆಯಿಂದ ಪೂರ್ಣ ಪ್ರಮಾಣದ ತರಬೇತಿ ಪಡೆಯಲು ಸಾಧ್ಯವಾಗಲಿಲ್ಲ ಎಂದು ಸಚಿವರು ಹೇಳಿದರು. ಎರಡು ಕೋಟಿ ರೂ. ವೆಚ್ಚದಲ್ಲಿ 874 ಮೀ. ರನ್‌ ವೇ ಉನ್ನತೀಕರಿಸಲಾಗಿದೆ.

ಶಾಲೆಯಲ್ಲಿದ್ದ ಐದು ಸಿಂಗಲ್‌ ಎಂಜಿನ್‌ ವಿಮಾನಗಳನ್ನು ದುರಸ್ತಿಗೊಳಿಸಿ ತರಬೇತಿಗೆ ಸಿದ್ದಪಡಿಸಲಾಗಿದೆ. 5 ಕೋಟಿ ರೂ. ವೆಚ್ಚದಲ್ಲಿ ಟ್ವಿನ್‌ ಎಂಜಿನ್‌ ಖರೀದಿಸಲಾಗಿದೆ. ಇದರಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ. ಜಕ್ಕೂರು ವೈಮಾನಿಕ ತರಬೇತಿ ಶಾಲೆಯಲ್ಲಿ ಈಗಾಗಲೇ 40 ವಿದ್ಯಾರ್ಥಿಗಳಿದ್ದು, ಹೊಸ ಬ್ಯಾಚ್‌ಗೆ 35 ಅರ್ಜಿಗಳು ಬಂದಿವೆ. ಮುಂದಿನ ವಾರದಿಂದ ತರಬೇತಿ ಆರಂಭವಾಗಲಿವೆ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next