Advertisement
ಮತದಾನೋತ್ತರ, ಮತದಾನ ದಿನದಂದು ಎಲ್ಲ 448 ಬೂತ್‌ಗಳಿಗೆ ಓಡಾಡಲು ಚುನಾವಣ ಕರ್ತವ್ಯಕ್ಕೆಂದು ಈ ಬಾರಿ ಒಟ್ಟು 73 ವಾಹನಗಳು ಬಳಕೆಯಾಗಲಿದೆ. 63 ರೂಟ್‌ಗಳಲ್ಲಿ ವಾಹನಗಳ ಓಡಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಕೆಲವು ವಾಹನಗಳು ಈಗಾಗಲೇ ಓಡಾಟ ನಡೆಸುತ್ತಿವೆ. 63 ಕೆಎಸ್ಸಾರ್ಟಿಸಿ ಬಸ್‌ಗಳನ್ನು ಚುನಾವಣ ಕರ್ತವ್ಯಕ್ಕೆಂದು ಗೊತ್ತುಪಡಿಸಲಾಗಿದ್ದು, ಈ ಪೈಕಿ 61 ಅಗತ್ಯಕ್ಕೆ ಮತ್ತು 2 ಹೆಚ್ಚುವರಿ ಬಸ್‌ಗಳಾಗಿವೆ. 10 ಟೆಂಪೋ ಟ್ರಾವೆಲ್ಲರ್‌ಗಳನ್ನು ನಿಯೋಜಿಸಲಾಗಿದ್ದು, ಈ ಪೈಕಿ 8 ಅಗತ್ಯಕ್ಕೆ, 2 ಹೆಚ್ಚುವರಿ ವಾಹನಗಳಾಗಿವೆ. ಹಾಗೆಯೇ, ಖಾಸಗಿ ಬಸ್, ಟ್ಯಾಕ್ಸಿಗಳನ್ನು ಚುನಾವಣೆ ಉದ್ದೇಶಕ್ಕೆ ಬಳಸಿಕೊಳ್ಳುತ್ತಿಲ್ಲ.
ಪಾಲಿಕೆ ಚುನಾವಣೆ ಉದ್ದೇಶಕ್ಕೆ ವಾಹನ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ದ.ಕ. ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಅನ್ನು ಸಂಪರ್ಕಿಸಿದ್ದು, ಹಿಂದಿನ ಪಾವತಿ ಬಾಕಿ ಇರುವುದರಿಂದ ವಾಹನ ನೀಡದಿರಲು ಸಂಘಟನೆ ನಿರ್ಧರಿಸಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಮ್ಯಾಕ್ಸಿಕ್ಯಾಬ್, ಕಾರು, ಟೆಂಪೋ ಟ್ರಾವೆಲರ್ ಸಹಿತ ಸುಮಾರು 360 ವಾಹನಗಳನ್ನು ಚುನಾವಣ ಉದ್ದೇಶಕ್ಕೆ ಬಳಸಿಕೊಳ್ಳಲಾಗಿತ್ತು. ಆದರೆ ಚುನಾವಣೆ ಕಳೆದು ಆರು ತಿಂಗಳಾದರೂ ಬಳಸಿಕೊಂಡ ವಾಹನಗಳ ಮಾಲಕರಿಗೆ ಶೇ.25ರಷ್ಟು ಹಣ ನೀಡಲು ಬಾಕಿ ಇದೆ.
Related Articles
Advertisement
ವಾಹನ ಕೇಳ್ತಾರೆ; ಹಣ ಕೊಡಲ್ಲಮಂಗಳೂರು ಸಹಿತ ದ.ಕ. ಜಿಲ್ಲೆಗೆ ಹೊರಭಾಗದಿಂದ ಬರುವ ಗಣ್ಯರ ಭದ್ರತೆ, ಚುನಾವಣೆ, ಪಲ್ಸ್ ಪೊಲೀಯೊ ಹಾಗೂ ಇತರ ತುರ್ತು ಸಂದರ್ಭ ಸಹಿತ ವಿವಿಧ ಕಾರಣಗಳಿಗೆ ಟ್ಯಾಕ್ಸಿ ಮ್ಯಾಕ್ಸಿ ಕ್ಯಾಬ್‌ಗಳನ್ನು ದಿನ ಬಾಡಿಗೆ ರೀತಿಯಲ್ಲಿ ಹಣ ನಿಗದಿ ಮಾಡಿ ವಾಹನ ಪಡೆದು ಕೊಳ್ಳಲಾಗುತ್ತದೆ. ಆದರೆ ಬಳಕೆ ಮಾಡಿದ ವಾಹನಗಳಿಗೆ ಬಾಡಿಗೆ ನೀಡಲು ಇಲಾಖೆಗಳು ಹಿಂದೇಟು ಹಾಕುತ್ತವೆ. ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ 2016 ನ. 8ರಂದು ಕೊಂಡು ಹೋಗಿದ್ದ ಕೆಲವು ಟ್ಯಾಕ್ಸಿಗಳ ಬಿಲ್ ಪಾವತಿಗೆ ಹಲವು ತಿಂಗಳು ಕಾಯಬೇಕಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭೇಟಿ ಸಂದರ್ಭ ಬಳಸಲಾಗಿದ್ದ ವಾಹನಗಳ ಬಿಲ್ ನೀಡಲು ಕೂಡ ಪೊಲೀಸ್ ಇಲಾಖೆ ಹಲವು ತಿಂಗಳು ಕಾಯಿಸಿತ್ತು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಬಳಕೆ ಮಾಡಲಾದ ಎಲ್ಲ ವಾಹನಗಳಿಗೆ ಹಣ ನೀಡಲಾಗಿತ್ತು. ಆದರೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಳಸಿದ್ದ ವಾಹನಗಳ ಬಾಡಿಗೆ ಹಣವೂ ಸಂಪೂರ್ಣ ಸಂದಾಯವಾಗಿಲ್ಲ. ಈ ಕಾರಣಕ್ಕೆ ಈ ಚುನಾವಣೆಗೆ ವಾಹನ ನೀಡುವುದಿಲ್ಲ ಎಂದು ಸಂಘಟನೆ ಪ್ರಮುಖರು ತಿಳಿಸಿದ್ದಾರೆ. - ಧನ್ಯಾ ಬಾಳೆಕಜೆ