Advertisement

ಶೇ.72 ಸಚಿವರ ವಿರುದ್ಧ ಕ್ರಿಮಿನಲ್‌ ಕೇಸು; ಬಿಹಾರ ಸಂಪುಟದ ಬಗ್ಗೆ ಎಡಿಆರ್‌ ಅಧ್ಯಯನ ವರದಿ

06:50 PM Aug 17, 2022 | Team Udayavani |

ನವದೆಹಲಿ/ಪಾಟ್ನಾ: ಬಿಹಾರದಲ್ಲಿ ಸದ್ಯ ಅಧಿಕಾರದಲ್ಲಿ ಇರುವ ಜೆಡಿಯು-ಆರ್‌ಜೆಡಿ-ಕಾಂಗ್ರೆಸ್‌ ಮೈತ್ರಿಕೂಟದ ಸರ್ಕಾರದ ಸಚಿವರ ಪೈಕಿ ಶೇ.72 ಮಂದಿ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಾಗಿವೆ.

Advertisement

ಖುದ್ದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಡಿಸಿಎಂ ತೇಜಸ್ವಿ ಯಾದವ್‌ ವಿರುದ್ಧವೇ ಪ್ರಕರಣಗಳು ದಾಖಲಾಗಿವೆ ಎಂದು ನವದೆಹಲಿಯ ಎಸೋಸಿಯೇಷನ್‌ ಫಾರ್‌ ಡೆಮಾಕ್ರಾಟಿಕ್‌ನ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

2020ರ ವಿಧಾನಸಭೆ ಚುನಾವಣೆ ವೇಳೆ ಅಭ್ಯರ್ಥಿಗಳು ಸಲ್ಲಿಕೆ ಮಾಡಿದ್ದ ಅಫಿಡವಿಟ್‌ ಆಧಾರದಲ್ಲಿ ಈ ಅಧ್ಯಯನ ನಡೆಸಲಾಗಿದೆ ಎಂದು ಸಂಸ್ಥೆ ಪ್ರತಿಪಾದಿಸಿದೆ.

ಆ.16ರಂದು ಬಿಡುಗಡೆ ಮಾಡಿದ ವರದಿಯ ಪ್ರಕಾರ 27 ಮಂದಿ ಸಚಿವರು ತಮ್ಮ ಅಪರಾಧ ಹಿನ್ನೆಲೆಯ ಅಂಶಗಳನ್ನು ಘೋಷಿಸಿಕೊಂಡಿದ್ದಾರೆ.

ಆರ್‌ಜೆಡಿಯ ಶಾಸಕರ ಪೈಕಿ 17 ಮಂದಿ ಸಚಿವರಿದ್ದಾರೆ. ಅವರಲ್ಲಿ 15 ಮಂದಿ (ಶೇ.88)ಸಚಿವರ ವಿರುದ್ಧ ಕ್ರಿಮಿನಲ್‌ ಕೇಸುಗಳು ಇವೆ. ಅವರಲ್ಲಿ 11 ಮಂದಿಯ (ಶೇ.65) ವಿರುದ್ಧ ಅತ್ಯಂತ ಗಂಭೀರವಾಗಿರುವ ಕ್ರಿಮಿನಲ್‌ ಕೇಸುಗಳು ಇವೆ ಎಂಬ ಬಗ್ಗೆ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.

Advertisement

ಜೆಡಿಯುನಲ್ಲಿ:
ಸರ್ಕಾರದಲ್ಲಿ ಸಿಎಂ ನಿತೀಶ್‌ ಕುಮಾರ್‌ ಸೇರಿ 11 ಮಂದಿ ಇದ್ದಾರೆ. ಈ ಪೈಕಿ ನಾಲ್ವರು ಸಚಿವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಾಗಿದೆ. ಕಾಂಗ್ರೆಸ್‌ನ ಇಬ್ಬರು ಸಚಿವರ ಮೇಲೂ ಕೇಸುಗಳು ಇರುವ ಬಗ್ಗೆ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.

ಬಂಧನ ಭೀತಿಯಲ್ಲಿ ಕಾನೂನು ಸಚಿವ:
ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ನೂತನ ಕಾನೂನು ಸಚಿವ ಕಾರ್ತಿಕೇಯ ಸಿಂಗ್‌ ವಿರುದ್ಧ ವಾರಂಟ್‌ ಜಾರಿಯಾಗಿದೆ. ಶರಣಾಗುವಂತೆ ಅವರಿಗೆ ಆದೇಶ ನೀಡಿದೆ. ಈ ಬಗ್ಗೆ ಪ್ರತಿಪಕ್ಷ ಬಿಜೆಪಿ ಕಟುವಾಗಿ ಆಕ್ಷೇಪ ಮಾಡಿದೆ.

ಬಿಹಾರ ಬಿಜೆಪಿಯ ವಕ್ತಾರ ನಿಖೀಲ್‌ ಆನಂದ್‌ ಮಾತನಾಡಿ “ನಿತೀಶ್‌ ಕುಮಾರ್‌ ಸಂಪುಟದ ಸಚಿವರಿಗೆ ಕ್ರಿಮಿನಲ್‌ ಹಿನ್ನೆಲೆ ಇದೆ. ಇಂಥ ಕರಾಳ ಚರಿತ್ರೆ ಹೊಂದಿರುವವರು ರಾಜ್ಯದ ಜನರಿಗೆ ಯಾವುದೇ ರೀತಿಯ ಭದ್ರತೆ ನೀಡಲು ಸಾಧ್ಯವಿಲ್ಲ’ ಎಂದಿದ್ದಾರೆ. ಆರ್‌ಜೆಡಿಯ ಒತ್ತಡದ ಹಿನ್ನೆಲೆಯಲ್ಲಿಯೇ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಎನ್‌ಡಿಎ ಸರ್ಕಾರ ಇದ್ದಾಗಲೂ ಬಿಜೆಪಿಯ 14 ಸಚಿವರು ಇದ್ದರು. ಈ ಪೈಕಿ 11 ಮಂದಿ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಾಗಿತ್ತು ಎಂದು ಎಸೋಸಿಯೇಷನ್‌ ಫಾರ್‌ ಡೆಮಾಕ್ರಾಟಿಕ್‌ನ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

32- ಒಟ್ಟು ಸಚಿವರು
23- ಇಷ್ಟು ಸಚಿವರ ವಿರುದ್ಧ ಕ್ರಿಮಿನಲ್‌ ಕೇಸು
72- ಶೇಕಡಾವಾರು
17- ಇಷ್ಟು ಸಚಿವರ ವಿರುದ್ಧ ಗಂಭೀರ ಕ್ರಿಮಿನಲ್‌ ಕೇಸುಗಳು
53- ಶೇಕಡವಾರು
ಶೇ.25- 8-12ನೇ ತರಗತಿ ವರೆಗೆ ಶಿಕ್ಷಣ ಪಡೆದ ಸಚಿವರು (08)
ಶೇ.75- ಪದವಿ ಮತ್ತು ಅದಕ್ಕಿಂತ ಹೆಚ್ಚು ಶಿಕ್ಷಣ ಪಡೆದ ಸಚಿವರು (24)

ನನಗೆ ಈ ಬಗ್ಗೆ ಮಾಹಿತಿ ಗೊತ್ತಿಲ್ಲ. ಕಾನೂನು ಸಚಿವರ ವಿರುದ್ಧ ಇರುವ ಪ್ರಕರಣದ ಬಗ್ಗೆ ಮಾಹಿತಿ ಇಲ್ಲ
-ನಿತೀಶ್‌ ಕುಮಾರ್‌, ಬಿಹಾರ ಮುಖ್ಯಮಂತ್ರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next