ನವದೆಹಲಿ: 2009ರಿಂದ 2019ರ ಅವಧಿಯಲ್ಲಿ ಲೋಕಸಭೆ ಸಂಸದರಾಗಿ ಮರು ಆಯ್ಕೆಯಾಗಿರುವ 71 ಸಂಸದರ ಆಸ್ತಿಯ ಮೌಲ್ಯ ಶೇ.71ರಷ್ಟು ಏರಿಕೆಯಾಗಿದೆ. ಈ ಪೈಕಿ ಕರ್ನಾಟಕ ಮೂಲದ ಬಿಜೆಪಿ ಸಂಸದರಾದ ರಮೇಶ್ ಚಂದ್ರಪ್ಪ ಜಿಗಜಿಣಗಿ ಅವರ ಆಸ್ತಿ ಮೌಲ ಅತ್ಯಧಿಕ ಏರಿಕೆ ಕಂಡಿದೆ ಎಂದು ವರದಿಯೊಂದು ತಿಳಿಸಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ (ಎಡಿಆರ್) ವರದಿಗಳ ಪ್ರಕಾರ, 2009ರಲ್ಲಿ ರಮೇಶ್ ಅವರ ಆಸ್ತಿ 1.18 ಕೋಟಿ ರೂ.ಗಳಷ್ಟಿತ್ತು. 2014ರಲ್ಲಿ 8.94 ಕೋಟಿ ರೂ.ಗಳಾಗಿದ್ದ ಆಸ್ತಿ ಮೌಲ್ಯ 2019ರ ಅವಧಿಗೆ 50.41 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಅಂದರೆ ರಮೇಶ್ ಅವರ ಆಸ್ತಿ 2009ರಿಂದ 2019ರ ವರೆಗೆ ಒಟ್ಟು ಶೇ.4,189ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಆಯಾ ವರ್ಷಗಳಲ್ಲಿ ನಡೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರು ಸಲ್ಲಿಸಿದ ಸ್ವಯಂ ಪ್ರಮಾಣ ಪತ್ರಗಳನ್ನು ಉಲ್ಲೇಖಿಸಿ ಎಡಿಆರ್ ಈ ವರದಿ ನೀಡಿದೆ.
2019ರ ವರೆಗೆ ಬಿಜಾಪುರದಿಂದ ಸತತ 6 ಬಾರಿ ಲೋಕಸಭೆಗೆ ಸಂಸದರಾಗಿ ಆಯ್ಕೆಯಾಗಿದ್ದ ರಮೇಶ್ ಜಿಗಜಿಣಗಿ ಅವರು, 2016 ರಿಂದ 2019ರ ವರೆಗೆ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯ ಸಹಾಯಕ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
Related Articles
ಇನ್ನು ಬೆಂಗಳೂರು ಕೇಂದ್ರ ವಿಧಾನಸಭೆ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಬಿಜೆಪಿ ಸಂಸದ ಪಿ.ಸಿ. ಮೋಹನ್ 2ನೇ ಸ್ಥಾನದಲ್ಲಿದ್ದು, ಅವರ ಆಸ್ತಿ ಮೌಲ್ಯವೂ ಶೇ.1,306ರಷ್ಟು ಏರಿಕೆಯಾಗಿದೆ. 2009ರಲ್ಲಿ 5.37 ಕೋಟಿ ರೂ.ಗಳಿದ್ದ ಆಸ್ತಿ ಮೌಲ್ಯ 2019ರ ವೇಳೆಗೆ 75.55ಕೋಟಿ ರೂ.ಗಳಿಗೆ ಏರಿಕೆಯಾಗಿದೆ.