Advertisement

ಭದ್ರಕೋಟೆಯಾದ ಕೆಂಪುಕೋಟೆ: ಸ್ವಾತಂತ್ರ್ಯ ದಿನಕ್ಕಾಗಿ ಬಿಗಿ ಬಂದೋಬಸ್ತ್

12:20 AM Aug 14, 2022 | Team Udayavani |

ಹೊಸದಿಲ್ಲಿ: ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆ ಈಗ ಪೊಲೀಸರ ಭದ್ರಕೋಟೆಯಾಗಿ ಮಾರ್ಪಾಡಾಗಿದೆ.

Advertisement

ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಯೇ ರಾಷ್ಟ್ರ ಧ್ವಜಾರೋಹಣ ಮಾಡಿ, ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಂಪುಕೋಟೆಯ ಸುತ್ತಲೂ 10 ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸುಮಾರು 7 ಸಾವಿರ ಆಹ್ವಾನಿತರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಬಹು ಹಂತದ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ.

ಕೋಟೆಯ ಪ್ರವೇಶ ದ್ವಾರದಲ್ಲೇ ಮುಖ ಗುರುತಿಸುವ ವ್ಯವಸ್ಥೆ (ಫೇಷಿಯಲ್‌ ರೆಕಗ್ನಿಷನ್‌ ಸಿಸ್ಟಂ) ಕ್ಯಾಮೆರಾಗಳನ್ನು ಅಳ ವಡಿಸಲಾಗಿದೆ. ಕೆಂಪುಕೋಟೆಯ ಸುತ್ತಲೂ 5 ಕಿ.ಮೀ. ವ್ಯಾಪ್ತಿಯನ್ನು “ಗಾಳಿಪಟ ನಿಷೇಧ ವಲಯ’ ಎಂದು ಘೋಷಿಸಲಾಗಿದೆ. ಜತೆಗೆ, ಗಾಳಿಪಟ ಹಿಡಿಯುವ 400 ಮಂದಿಯನ್ನು ನಿಯೋಜಿಸಲಾಗಿದೆ. ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಡ್ರೋನ್‌ ನಿಗ್ರಹ ವ್ಯವಸ್ಥೆಯೂ ಕಾರ್ಯಕ್ರಮದ ಸ್ಥಳದಲ್ಲಿ ಕಣ್ಣಿಟ್ಟಿರಲಿದೆ.

ಯಾವುದಕ್ಕೆಲ್ಲ ನಿಷೇಧ?: ಕೆಂಪುಕೋಟೆಯ ಕಾರ್ಯಕ್ರಮಕ್ಕೆ ಆಗಮಿಸುವವರು ಯಾವುದೇ ಕಾರಣಕ್ಕೂ ಲಂಚ್‌ ಬಾಕ್ಸ್‌, ನೀರಿನ ಬಾಟಲಿಗಳು, ರಿಮೋಟ್‌ ಕಂಟ್ರೋಲ್‌ ಇರುವ ಕಾರಿನ ಕೀಗಳು, ಸಿಗರೇಟ್‌ ಲೈಟರ್‌ಗಳು, ಬ್ರಿಫ್ಕೇಸ್‌, ಕೈಚೀಲ, ಕ್ಯಾಮೆರಾಗಳು, ಬೈನಾಕ್ಯುಲರ್‌ಗಳು, ಛತ್ರಿಗಳನ್ನು ತರುವಂತಿಲ್ಲ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಆ.16ರವರೆಗೂ ಈ ಪ್ರದೇಶದಲ್ಲಿ ಪ್ಯಾರಾಗ್ಲೈಡರ್ ಗಳು, ಹ್ಯಾಂಗ್‌ ಗ್ಲೈಡರ್ ಗಳು, ಹಾಟ್‌ ಏರ್‌ ಬಲೂನುಗಳ ಹಾರಾಟಕ್ಕೂ ನಿಷೇಧ ಹೇರಲಾಗಿದೆ.

Advertisement

ಗಡಿಯಲ್ಲಿ ಪರಿಶೀಲನೆ: ಇದೇ ವೇಳೆ, ನಾರ್ದರ್ನ್ ಆರ್ಮಿ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಉಪೇಂದ್ರ ದ್ವಿವೇದಿ ಅವರು ಶನಿವಾರ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಭದ್ರತಾ ಪರಿಶೀಲನೆ ನಡೆಸಿದ್ದಾರೆ. ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಉಗ್ರರು ಒಳನುಸುಳದಂತೆ ಕಟ್ಟೆಚ್ಚರ ವಹಿಸುವ ಕುರಿತು ಭದ್ರತಾ ಪಡೆಗಳಿಗೆ ಸೂಚಿಸಿದ್ದಾರೆ.

ಕೈದಿಗಳ ಬಿಡುಗಡೆ: ರಾಜಸ್ಥಾನದಲ್ಲಿ ಸ್ವಾತಂತ್ರ್ಯ ದಿನದ ಪ್ರಯುಕ್ತ ವಿವಿಧ ಜೈಲುಗಳಲ್ಲಿರುವ 51 ಕೈದಿಗಳನ್ನು ಬಿಡುಗಡೆ ಮಾಡಲು ಸರಕಾರ ನಿರ್ಧರಿಸಿದೆ. ಉತ್ತಮ ನಡತೆ ಪ್ರದರ್ಶಿಸಿರುವ, ಶಿಕ್ಷೆ ಅವಧಿ ಪೂರ್ಣಗೊಂಡಿದ್ದರೂ ಹಣಕಾಸಿನ ಸಮಸ್ಯೆಯಿಂದಾಗಿ ದಂಡದ ಮೊತ್ತ ಪಾವತಿಸಲು ಸಾಧ್ಯವಾಗದೇ ಇರುವಂಥವರನ್ನು ಬಿಡುಗಡೆ ಮಾಡಲಾಗುತ್ತದೆ. ಇದೇ ವೇಳೆ, 21 ಮಂದಿ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬಂದಿಗೆ ವಿಶಿಷ್ಟ ಸೇವಾ ಪದಕಗಳನ್ನು ಪ್ರದಾನ ಮಾಡುವುದಾಗಿ ರಾಜಸ್ಥಾನ ಸರಕಾರ ಘೋಷಿಸಿದೆ.

ಗುಜರಾತ್‌ ಮಾಜಿ ಸಚಿವರಿಗೆ ಗಾಯ: ಗುಜರಾತ್‌ನಲ್ಲಿ ಶನಿವಾರ ತಿರಂಗ ರ್ಯಾಲಿ ನಡೆಯುತ್ತಿದ್ದ ವೇಳೆ ಮೆರವಣಿಗೆ ನಡುವೆ ನುಗ್ಗಿದ ದನ ವೊಂದು ಮಾಜಿ ಸಚಿವ ನಿತಿನ್‌ ಪಟೇಲ್‌ ಅವರನ್ನು ನೆಲಕ್ಕುರುಳಿಸಿದ ಘಟನೆ ನಡೆದಿದೆ. ಮೆಹ್ಸಾನಾ ಜಿಲ್ಲೆಯ ಕಾದಿ ನಗರದಲ್ಲಿ ಈ ಘಟನೆ ನಡೆ ದಿದ್ದು, ಗಾಯಗೊಂಡ ನಿತಿನ್‌ ಪಟೇಲ್‌ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿ ಸಲಾಗಿದೆ. ಅವರ ಕಾಲಿಗೆ ಗಾಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಉಗ್ರರ ಮನೆಯಲ್ಲೂ ತಿರಂಗ!
ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಉಗ್ರನೊಬ್ಬನ ಮನೆಯಲ್ಲೂ ತ್ರಿವರ್ಣ ಧ್ವಜ ರಾರಾಜಿಸಿದೆ. ತಲೆಮರೆಸಿಕೊಂಡಿರುವ ಲಷ್ಕರ್‌ ಉಗ್ರ ಖುಬೈರ್‌ನ ಕುಟುಂಬ ಸದಸ್ಯರು ಶನಿವಾರ ಹರ್‌ ಘರ್‌ ತಿರಂಗ ಅಭಿಯಾನದ ಅಂಗವಾಗಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. “ನಾವು ಪ್ರತಿ ವರ್ಷ ಸ್ವಾತಂತ್ರ್ಯೋತ್ಸವದಂದೂ ತ್ರಿವರ್ಣ ಧ್ವಜವನ್ನು ಹಾರಿಸುತ್ತೇವೆ. ಖುಬೈರ್‌ ಚಿಕ್ಕ ವಯಸ್ಸಿನಲ್ಲೇ ಉಗ್ರವಾದಕ್ಕೆ ಸೇರಿಕೊಂಡು, ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ. ಅವನು ವಾಪಸ್‌ ಬಂದು ಮುಖ್ಯವಾಹಿನಿಗೆ ಸೇರಬೇಕು ಎಂಬುದು ನಮ್ಮ ಬಯಕೆ’ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಜತೆಗೆ, ನಾವು ಭಾರತೀಯರಾಗಿರಲು ಹೆಮ್ಮೆ ಪಡುತ್ತೇವೆ. ಪ್ರಧಾನಿ ಮೋದಿ ಅವರು ಹರ್‌ ಘರ್‌ ತಿರಂಗ ಅಭಿಯಾನ ಆರಂಭಿಸಿರುವುದು ನಮಗೆ ಖುಷಿ ತಂದಿದೆ ಎಂದೂ ಹೇಳಿದ್ದಾರೆ. ಖುಬೈರ್‌ ಮಾತ್ರವಲ್ಲದೇ ನಾಲ್ವರು ಉಗ್ರರ ಕುಟುಂಬ ಸದಸ್ಯರೂ ಶನಿವಾರ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ.

ಇಂದು ರಾಷ್ಟ್ರಪತಿ ಮುರ್ಮು ಭಾಷಣ
ದೇಶದ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನವಾದ ರವಿವಾರ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶವನ್ನುದ್ದೇ ಶಿಸಿ ಚೊಚ್ಚಲ ಭಾಷಣ ಮಾಡಲಿದ್ದಾರೆ. ಅವರ ಭಾಷಣವು ಸಂಜೆ 7 ಗಂಟೆಗೆ ಸರಿಯಾಗಿ ಆಲ್‌ ಇಂಡಿಯಾ ರೇಡಿಯಾ ಹಾಗೂ ದೂರ ದರ್ಶನದಲ್ಲಿ ನೇರ ಪ್ರಸಾರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next