ಹೃದರಾಬಾದ್: 20ಕ್ಕೂ ಹೆಚ್ಚು ಮಂಗಗಳ ದಾಳಿಯಿಂದ 70 ವರ್ಷದ ವೃದ್ಧ ಮಹಿಳೆಯೊಬ್ಬರು ಅಸುನೀಗಿದ ಘಟನೆ ತೆಲಂಗಾಣದ ಕಮ್ಮಾರೆಡ್ಡಿ ಜಿಲ್ಲೆಯ ರಾಮರೆಡ್ಡಿ ಗ್ರಾಮದಲ್ಲಿ ನಡೆದಿದೆ.
ನರಸವ್ವ(70) ಮೃತ ಮಹಿಳೆ. ಮಾ.3ರಂದು ನರಸವ್ವ ಒಬ್ಬರೇ ಮನೆಯಲ್ಲಿ ಇದ್ದರು. ಆಕೆಯ ಪುತ್ರಿ ನೆರೆಮನೆಯವರ ಮದುವೆಗೆ ಹೋಗಿದ್ದರು. ಮನೆಯ ಹಿಂಬಾಗಿಲಿನ ಆವರಣದಲ್ಲಿ ಪಾತ್ರೆ ತೊಳೆಯುತ್ತಿದ್ದ ನರಸವ್ವ ಮೇಲೆ 20ಕ್ಕೂ ಹೆಚ್ಚು ಕೋತಿಗಳು ದಾಳಿ ಮಾಡಿದ್ದವು. ವೃದ್ಧೆಯ ಎದೆ, ಬೆನ್ನು ಮತ್ತು ಕೈ-ಕಾಲುಗಳಿಗೆ ತೀವ್ರ ಗಾಯಗಳಾಗಿತ್ತು.
ಕೋತಿ ಕಾಟದ ಹಿನ್ನೆಲೆಯಲ್ಲಿ ಅಕ್ಕ-ಪಕ್ಕದ ಮನೆಯವರು ಕೂಡ ಬಾಗಿಲು ಹಾಕಿಕೊಂಡು ಒಳಸೇರಿದ್ದರು. ನಂತರ ವೃದ್ಧೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ನರಸವ್ವ, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ ಎಂದು ವರದಿಗಳು ತಿಳಿಸಿವೆ.