ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿಯಾಗಿ ಮೇ 30ಕ್ಕೆ ಏಳು ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಸಂಭ್ರಮ ಆಚರಿಸುವ ಬದಲು ವಿವಿಧ ಸೇವಾ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ, ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪದಾ ಧಿಕಾರಿಗಳು, ಕಾರ್ಯಕರ್ತರಿಂದ ರಕ್ತದಾನ ಶಿಬಿರ, ಕಷ್ಟದಲ್ಲಿರುವ ಜನರಿಗೆ ಊಟ ಜತೆಗೆ ಇತರ ಸೇವೆ ಕಲ್ಪಿಸಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಹೇಳಿದರು. ಹೂವು, ಕಲ್ಲಂಗಡಿ ಸೇರಿದಂತೆ ಇತರ ತೊಟಗಾರಿಕೆ ಬೆಳೆಗಳಿಂದ ಸಂಕಷ್ಟಕ್ಕೆ ಒಳಗಾದ ರೈತರಿಗೆ ಯಾವುದೇ ಪ್ರಚಾರವಿಲ್ಲದೇ ಆರ್ಥಿಕ ಸಹಾಯ ಕಲ್ಪಿಸುವುದು ಸೇರಿದಂತೆ ಇತರ ನಿಟ್ಟಿನಲ್ಲಿ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಎಲ್ಲ ಬೂತ್‌ಗಳಲ್ಲಿ ಬಿಜೆಪಿ ಕಾರ್ಯಕರ್ತರು ತಪ್ಪದೇ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಕೊರೊನಾ ನಿಯಂತ್ರಣಕ್ಕೆ ಜೋಡಿಸುತ್ತಾರೆ. ರಕ್ತದಾನ ಮಾಡಿ, ಆಸ್ಪತ್ರೆಗಳಿಗೆ ತಲುಪಿಸಲಾಗುವುದು. ಮುಂದಿನ ದಿನಗಳಲ್ಲಿ ರಕ್ತದಾನ ನೀಡುವವರ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಹಾಗೂ ಆಸ್ಪತ್ರೆಗಳಿಗೆ ಸಲ್ಲಿಸಲಾಗುವುದು.
ಕೋವಿಡ್ ನಿಯಂತ್ರಣ ಸಂಬಂಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಈಗಾಗಲೇ ಸೇವಾ ಕಾರ್ಯಗಳ ಪಟ್ಟಿ ರೂಪಿಸಲಾಗಿದೆ. ಜಿಲ್ಲೆಯ 1500 ಬೂತ್‌ಗಳಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರೂ ಒಂದಿಲ್ಲ ಒಂದು ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗುತ್ತದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ನಗರಾಧ್ಯಕ್ಷ ಸಿದ್ದಾಜೀ ಪಾಟೀಲ, ಮಾಧ್ಯಮ ಪ್ರಮುಖರಾದ ಸಂತೋಷ ಹಾದಿಮನಿ, ಅರುಣ ಕುಲಕರ್ಣಿ ಮುಂತಾದವರಿದ್ದರು