ಬೀಜಿಂಗ್: ಆತನಿಗಿನ್ನೂ ಏಳು ವರ್ಷ. ಆದರೆ, ಸಾಧನೆ ಮಾತ್ರ ಗರಿಷ್ಠ! ಎಳೆ ವಯಸ್ಸಿನಲ್ಲೇ ಅಧಿಕೃತವಾಗಿ ಪರವಾನಗಿ ಪಡೆದ ಯೋಗ ಶಿಕ್ಷಕ ಎನಿಸಿಕೊಂಡಿರುವ ಸುನ್ ಚುಯಾಂಗ್ ತಿಂಗಳಿಗೆ 9 ಲಕ್ಷ ರೂ. ದುಡಿಯುತ್ತಾನೆಂದರೆ ಎಲ್ಲರೂ ದಂಗಾಗಲೇಬೇಕು. ಅಷ್ಟೇ ಅಲ್ಲ, ಚೀನಾದ ತನ್ನ ವಾರಿಗೆಯ ಬಾಲಕರಲ್ಲಿ ಅತಿ ಶ್ರೀಮಂತ ಎನಿಸಿಕೊಂಡು, ಚೀನಾದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದ್ದಾನೆ ಈತ.
ಹಲವು ಸಂದರ್ಭಗಳಲ್ಲಿ ಮನುಷ್ಯನ ಕೊರತೆಗಳೇ ಅವರನ್ನು ಮಹತ್ವದ ಸಾಧನೆಗಳ ಕಡೆಗೆ ಪ್ರೇರೇಪಿಸುತ್ತವೆ ಎಂಬ ಮಾತು ಈತನ ವಿಚಾರದಲ್ಲಿ ಸತ್ಯವಾಗಿದೆ. ಚೀನಾದ ಝೆಜಿಯಾಂಗ್ ಪ್ರಾಂತ್ಯದ ಈತನಿಗೆ, 2 ವರ್ಷದ ಪುಟಾಣಿಯಾಗಿದ್ದಾಗಲೇ ಆಟಿಸಂ ಕಾಯಿಲೆಯ ಲಕ್ಷಣಗಳು ಗೋಚರಿಸಿದ್ದವು.
ಈ ಸಮಸ್ಯೆಗೆ ಯೋಗವೇ ಸರಿಯಾದ ಮದ್ದು ಎಂದು ಆಪ್ತರೊಬ್ಬರು ಕೊಟ್ಟ ಸಲಹೆ ಪಾಲಿಸಿದ ಆತನ ತಾಯಿ, ಆ ಪುಟ್ಟ ಮಗುವನ್ನು ಯೋಗ ತರಗತಿಗೆ ಸೇರಿಸಿದ್ದರು. ಕೆಲವೇ ದಿನಗಳಲ್ಲಿ ಆತ ಯೋಗದ ಎಲ್ಲಾ ಭಂಗಿಗಳನ್ನು ಸುಲಲಿತವಾಗಿ ಮಾಡಿ ತೋರಿಸಲಾರಂಭಿಸಿದ. ಅಲ್ಲಿಂದ ಎರಡೇ ವರ್ಷಗಳಲ್ಲಿ ಆತನಲ್ಲಿದ್ದ ಆಟಿಸಂ ಕಾಯಿಲೆಯ ಛಾಯೆ ಸಂಪೂರ್ಣ ಮಾಯವಾದವು. ಅಲ್ಲಿಗೆ, “ಯೋಗ್ಧಾಗೆಲ್ಲಾ ಐತೆ’ ಎಂಬುದನ್ನು ಅರಿತ ಬಾಲಕ, ಅದರಲ್ಲೇ ಸಾಧನೆ ಮಾಡಲು ಮುಂದಾದ.
ಪರಿಣಾಮ, ಇದೀಗ, ಯೋಗ ಶಿಕ್ಷಕನಾಗಿ ಅಧಿಕೃತ ಪರವಾನಗಿ ಪಡೆದು ಸ್ವತಂತ್ರವಾಗಿ ಯೋಗ ತರಬೇತಿ ಕೇಂದ್ರ ನಡೆಸುತ್ತಿದ್ದಾನೆ. ಈತನಲ್ಲಿ ಯೋಗ ಕಲಿಯಲು ಚೀನೀಯರಲ್ಲದೆ, ವಿದೇಶಿಯರೂ ಬರುತ್ತಾರೆ. ವಿದೇಶಿಯರಿಗೆ ಈತ “ಮೈಕ್’ ಎಂದೇ ಪರಿಚಿತ ಈತ.