ಬೆಂಗಳೂರು: ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯದಂದೇ ಏಳು ಮಂದಿ ಐಎಎಸ್ ಅಧಿಕಾರಿಗಳನ್ನು ಸರಕಾರ ವರ್ಗಾಯಿಸಿ ಆದೇಶ ಹೊರಡಿಸಿದೆ.
ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರೀಕರ್ ಎಂ. ಎಸ್. ಅವರನ್ನು ಸಿಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ ಕಾರ್ಯದರ್ಶಿ ಹುದ್ದೆಗೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಷ್‌ನ ಆಯುಕ್ತ ಮಂಜುನಾಥ್ ಜೆ. ಅವರನ್ನು ಕರ್ನಾಟಕ ರಾಜ್ಯ ಏಡ್ಸ್ ತಡೆ ಸೊಸೈಟಿಯ ಹಂಗಾಮಿ ಯೋಜನಾ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.
ಅಬಕಾರಿ ಇಲಾಖೆಯ (ಪ್ರಧಾನ ಕಚೇರಿ ಮತ್ತು ಪರಿಶೀಲನೆ)ಯ ಹೆಚ್ಚುವರಿ ಆಯುಕ್ತರಾಗಿದ್ದ ಶೇಖ್ ತನ್ವೀರ್ ಆಸಿಫ್ ಅವರನ್ನು ಮಂಡ್ಯ ಜಿ.ಪಂ. ಸಿಇಒ ಹುದ್ದೆಗೆ, ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಆಗಿದ್ದ ಸ್ನೇಹಲ್ ಸುಧಾಕರ್ ಅವರನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಶಿವಮೊಗ್ಗ ಜಿ.ಪಂ. ಸಿಇಒ ಹುದ್ದೆಗೆ ವರ್ಗಾಯಿಸಲಾಗಿದೆ.
ಕಲಬುರಗಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿದ್ದ ಗರಿಮಾ ಪನ್ವಾರ್ ಅವರನ್ನು ಯಾದಗಿರಿ ಜಿ.ಪಂ.ನ ಸಿಇಒ ಹುದ್ದೆಗೆ ಹಾಗೂ ಹುದ್ದೆ ನಿರೀಕ್ಷೆಯಲ್ಲಿದ್ದ ರಂಗಪ್ಪ ಅವರನ್ನು ಕರ್ನಾಟಕ ರಾಜ್ಯ ಔಷಧ ಪೂರೈಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ, ಆಕೃತಿ ಬನ್ಸಾಲ್ ಅವರನ್ನು ಕರ್ನಾಟಕ ಭವನದ ಹೆಚ್ಚುವರಿ ಸ್ಥಾನಿಕ ಆಯುಕ್ತ ಹುದ್ದೆಗೆ ವರ್ಗಾಯಿಸಲಾಗಿದೆ.