Advertisement

7 ಲಕ್ಷ ರೂ. ವಿದ್ಯಾರ್ಥಿವೇತನ ವಿತರಣೆ

03:25 AM Jul 07, 2017 | Team Udayavani |

ಮೂಲ್ಕಿ: ಜಿಲ್ಲೆಯ ಪ್ರಗತಿಯ ಹರಿಕಾರನಾಗಿ ಹಾಗೂ ಮೂಲ್ಕಿಯ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಯೋಜನೆಗಳನ್ನು ಯಶಸ್ವಿಗೊಳಿಸುವಲ್ಲಿ ಛಲಬಿಡದೆ ಸತತ ಶ್ರಮಿಸಿದ್ದ ಮೂಲ್ಕಿಯ ಮಹಾನ್‌ ನಾಯಕ ದಿ| ಮೂಲ್ಕಿ ರಾಮಕೃಷ್ಣ ಪೂಂಜ ಹಾಗೂ ಅದನ್ನು ಮುನ್ನಡೆಸಿದ ಅವರ ಪುತ್ರ ಎಂ.ಆರ್‌.ಎಚ್‌. ಪೂಂಜ ಅವರು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಹೇಳಿದರು.

Advertisement

ಅವರು ಮೂಲ್ಕಿ ರಾಮಕೃಷ್ಣ ಪೂಂಜ ಟ್ರಸ್ಟ್‌ನ ಮೂಲಕ ಮೂಲ್ಕಿ ಪರಿಸರದ ವಿವಿಧ ಶಾಲಾ ಮತ್ತು ಕಾಲೇಜುಗಳ ಸುಮಾರು 400ಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ 7 ಲಕ್ಷ ರೂ. ಮೊತ್ತದ ವಿದ್ಯಾರ್ಥಿವೇತನ ವಿತರಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮೂಲ್ಕಿಯ ಪೂಂಜ ಅವರ ಕುಟುಂಬದ ಘನಸ್ಥಿಕೆ ಮತ್ತು ಗೌರವವನ್ನು ಎತ್ತಿ ಹಿಡಿದು ಟ್ರಸ್ಟಿನ ಮೂಲಕ ನಿರಂತರವಾಗಿ ಯಾವುದೇ ಪ್ರಚಾರ ಬಯಸದೇ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಎಂ.ಆರ್‌. ಪೂಂಜ ಟ್ರಸ್ಟ್‌ನ ಮುಖ್ಯಸ್ಥ ಎಂ. ಅರವಿಂದ ಎಚ್‌. ಪೂಂಜ ಅವರ ಕೆಲಸವನ್ನು ಕೊಂಡಾಡಿದ ಮಾಜಿ ಸಚಿವ ಶೆಟ್ಟಿಯವರು ವಿದ್ಯಾರ್ಥಿಗಳು ಕಠಿನ ಶ್ರಮದಿಂದ ಪಡೆದ ಶಿಕ್ಷಣ ಸಾರ್ಥಕವಾಗಬಲ್ಲದು ಎಂದು ಹೇಳಿದರು.

ಟ್ರಸ್ಟ್‌ನ ಮುಖ್ಯಸ್ಥ ಎಂ.ಎಚ್‌. ಅರವಿಂದ ಪೂಂಜ ಅವರು ಟ್ರಸ್ಟಿನ ಯೋಜನೆಗಳ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮೂಲ್ಕಿ ಚರ್ಚ್‌ನ ಧರ್ಮ ಗುರುಗಳಾದ ಫಾ| ಫ್ರಾನ್ಸಿಸ್‌ ಕ್ಸೇವಿಯರ್‌ ಗೋಮ್ಸ್‌ ಮಾತನಾಡಿ, ಶೈಕ್ಷಣಿಕವಾಗಿ ಊರನ್ನು ಬೆಳೆಸುವ ಕೆಲಸ ಎಲ್ಲದಕ್ಕಿಂತಲೂ ಮಿಗಿಲಾದದ್ದು ಎಂದು ಹೇಳಿದರು. ಸಮಾಜ ಸೇವಕ ಮತ್ತು ಉದ್ಯಮಿ ಬಿ. ಸಚ್ಚಿದಾನಂದ ಶೆಟ್ಟಿ ಶುಭಾಶಂಸನೆಗೈದು ರಾಮಕೃಷ್ಣ ಪೂಂಜ ಹಾಗೂ ಎಂ.ಆರ್‌.ಎಚ್‌. ಪೂಂಜ ಅವರ ಶೈಕ್ಷಣಿಕ ಕಾರ್ಯಯೋಜನೆಗಳ ಶ್ರಮವನ್ನು ಸ್ಮರಿಸಿದರು.

ಅಮರನಾಥ ಶೆಟ್ಟಿ ಅವರ ಪತ್ನಿ ಜಯಶ್ರೀ ಎ. ಶೆಟ್ಟಿ ಅವರು ಸಮಾರಂಭದಲ್ಲಿ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಿದರು. ಪೂಂಜ ಟ್ರಸ್ಟ್‌ನ ಟ್ರಸ್ಟಿ ಅಶ್ವಿ‌ನಿ ಅರವಿಂದ ಪೂಂಜ, ವಿಜಯ ಕಾಲೇಜಿನ ಮಾಜಿ ಪ್ರಾಂಶುಪಾಲ ಪ್ರೊ| ಸ್ಯಾಮ್‌ ಮಾಬೆನ್‌, ಸಾಹಿತಿ ಎನ್‌.ಪಿ. ಶೆಟ್ಟಿ,ಹರಿಹರ ಕ್ಷೇತ್ರದ ಮೊಕ್ತೇಸರ ಕೆ. ಕೃಷ್ಣ ಶೆಟ್ಟಿ, ಕೆ. ಸುಂದರ ಶೆಟ್ಟಿ ಉಪಸ್ಥಿತರಿದ್ದರು. ಮೂಲ್ಕಿ ರಾಮಕೃಷ್ಣ ಪೂಂಜ ಐಟಿಐ ಪ್ರಾಂಶುಪಾಲ ವೈ.ಎನ್‌. ಸಾಲ್ಯಾನ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next