ಉಪ್ಪಿನಂಗಡಿ: ಕಡಬ ಮತ್ತು ಪುತ್ತೂರಿಗೆ 65 ಲಕ್ಷ ರೂ. ವೆಚ್ಚದಲ್ಲಿ 7 ಆರೋಗ್ಯ ಕ್ಷೇಮ ಕೇಂದ್ರವನ್ನು ನೀಡಲಾಗಿದೆ. ಒಂದು ಆರೋಗ್ಯ ಕ್ಷೇಮ ಕೇಂದ್ರದಲ್ಲಿ ಒಬ್ಬರು ವೈದ್ಯರು, ಓರ್ವ ಲಾಬ್ ಟೆಕ್ನೀಷಿಯನ್, ಒಬ್ಬರು ನರ್ಸ್‌ಗಳ ನೇಮಕ ಮಾಡಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಜು. 6ರ ರಾತ್ರಿ ಉಪ್ಪಿನಂಗಡಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು, 108 ಆ್ಯಂಬುಲೆನ್ಸ್‌ನಲ್ಲಿ ಹಲವು ಲೋಪಗಳಿದ್ದು, ಅದನ್ನು ಇನ್ನಷ್ಟು ಆಧುನೀಕ ರಣಗೊಳಿಸಲಾಗುವುದು. ಇದನ್ನು ಮೇಲ್ದರ್ಜೆಗೇರಿಸಲು ಹೊಸ ಟೆಂಡರ್ ಕರೆಯಲಾಗುವುದು ಎಂದರು.
108 ಆ್ಯಂಬುಲೆನ್ಸ್‌ನವರಿಗೆ ಈ ತಿಂಗಳು ಸಹಿತ ಆರು ತಿಂಗಳಿಂದ ಸಂಬಳ ಪಾವತಿಯಾಗಿಲ್ಲ ಎಂಬ ದೂರಿಗೆ ಸಂಬಂಧಿಸಿ ಸರಕಾರ ತತ್ ಸಂಬಂಧಿತ ಏಜೆನ್ಸಿಗೆ ಹಣವನ್ನು ಪಾವತಿಸಿದೆ. ಏಜೆನ್ಸಿ ಸಿಬಂದಿಗೆ ಸಂಬಳ ಪಾವತಿಸದಕ್ಕೆ ಸರಕಾರ ಹೊಣೆಯಲ್ಲ. ಆದಾಗ್ಯೂ 108 ಆ್ಯಂಬುಲೆನ್ಸ್ ಸಿಬಂದಿಯ ಹಿತ ಕಾಯಲು ಮುಂದಿನ ವಾರ ಸಭೆ ಕರೆಯಲಾಗಿದೆ ಎಂದರು.
ಈ ಹಿಂದಿನ ಸರಕಾರದ ಅವಧಿಯಲ್ಲಿ ಸರಕಾರಿ ಆರೋಗ್ಯ ಕೇಂದ್ರಗಳಿಗೆ ಶೇ. 30ರಷ್ಟು ಮಾತ್ರ ಔಷಧ ಪೂರೈಕೆ ಮಾಡುತ್ತಿತ್ತು. ಆದರೆ ನಮ್ಮ ಸರಕಾರ ಬಂದ ಬಳಿಕ ಶೇ. 80ರಷ್ಟು ಔಷಧ ಪೂರೈಕೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಶೇ.100ರಷ್ಟು ಔಷಧ ವಿತರಣೆಯಾಗಲಿದೆ. ಹೀಗಾಗಿ ಸರಕಾರಿ ಆಸ್ಪತ್ರೆಯ 100 ಮೀ. ವ್ಯಾಪ್ತಿಯಲ್ಲಿ ಯಾವುದೇ ಮೆಡಿಕಲ್ ಶಾಪ್‌ಗ್ಳಿಗೆ ಅವಕಾಶ ನೀಡುವುದಿಲ್ಲ ಎಂದ ದಿನೇಶ್ ಗುಂಡೂರಾವ್, ಉಪ್ಪಿನಂಗಡಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿ ಎಕ್ಸ್‌ರೇ ಟೆಕ್ನೀಷಿಯನ್ ಸಹಿತ ಅಗತ್ಯವುಳ್ಳ ಹುದ್ದೆಗಳಿಗೆ ತತ್‌ಕ್ಷಣಕ್ಕೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಸೂಚಿಸಿದರು.
ಸಂಬಳವಿಲ್ಲದೆ ಸಂಕಷ್ಟದಲ್ಲಿರುವ 108 ಸಿಬಂದಿ ಮೇಲೆ ಮಾನವೀಯತೆ ನೆಲೆಯಲ್ಲಿ ಸಹಾಯಕ್ಕೆ ಮುಂದಾಗ ಬೇಕೆಂದು ಮಾಧ್ಯಮ ಪ್ರತಿನಿಧಿಗಳ ವಿನಂತಿಗೆ ಸ್ಪಂದಿಸುವ ಭರವಸೆ ನೀಡಿದರು.
ಈ ವೇಳೆ ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮುಂದಾಳುಗಳಾದ ಪದ್ಮರಾಜ್, ಡಾ| ರಾಜಾರಾಮ ಕೆ. ಬಿ., ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ, ಸಹಾಯಕ ಕಮಿಷನರ್ ಮೊದಲಾದವರು ಉಪಸ್ಥಿತರಿದ್ದರು.