Advertisement

6ನೇ ವೇತನ ಆಯೋಗ ಜಾರಿಯಲ್ಲಿ ವಿಳಂಬವಾಗಿಲ್ಲ: ಸಿಎಂ

07:20 AM Sep 12, 2017 | |

ಮೈಸೂರು: “ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳ ಸಂಬಂಧ ಆರನೇ ವೇತನ ಆಯೋಗ ವನ್ನು ರಚಿಸಿದ್ದು, ಆಯೋಗವು ವರದಿ ಸಲ್ಲಿಸಿದ ನಂತರ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Advertisement

ಆರನೇ ವೇತನ ಆಯೋಗ ಜಾರಿ ವಿಳಂಬ ಮಾಡಲಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಸಿಡಿಮಿಡಿಗೊಂಡ ಅವರು, “ಆರನೇ ವೇತನ ಆಯೋಗದ ಜಾರಿ ಬಗ್ಗೆ ನಿಮಗೇನು ಗೊತ್ತು? ಹೇಗೆ ವಿಳಂಬವಾಗಿದೆ, ಏಕೆ ವಿಳಂಬ ಆಗಿದೆ ಎನ್ನುವುದು ನಿಮಗೆ ಗೊತ್ತೆ? ಸುಮ್ಮನೆ ಇಂತಹ ಪ್ರಶ್ನೆಗಳನ್ನೆಲ್ಲಾ ಕೇಳುತ್ತೀರಿ’ ಎಂದು ಗದರಿದರು.

“ಕೇಂದ್ರ ಸರ್ಕಾರ 10 ವರ್ಷಗಳಿಗೆ ಒಮ್ಮೆ ವೇತನ ಆಯೋಗ ರಚಿಸಿದರೆ, ರಾಜ್ಯ ಸರ್ಕಾರ 5-6 ವರ್ಷಗಳಿಗೆ ವೇತನ ಆಯೋಗ ರಚಿಸುತ್ತದೆ. ಹೀಗಿರುವಾಗ ವಿಳಂಬ ಹೇಗಾಯಿತು’ ಎಂದು ಪ್ರಶ್ನಿಸಿದರು.

“ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್‌.ಶ್ರೀನಿವಾಸಮೂರ್ತಿ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ  ವೇತನ ಆಯೋಗ ಸರ್ಕಾರಕ್ಕೆ ವರದಿ ಕೊಡಬೇಕು. ಅದನ್ನು ಬಿಟ್ಟು ಸರ್ಕಾರವೇ ವರದಿ ಕೊಡಿ ಎಂದು ಸಮಿತಿಯನ್ನು ಕೇಳಲಾಗುತ್ತಾ ‘ ಎಂದು ಕೋಪ ತೋರಿದರು.

ವ್ಯವಸಾಯಕ್ಕೆ ನೀರು: ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾದರೆ ವ್ಯವಸಾಯಕ್ಕೆ ನೀರು ಕೊಡುತ್ತೇವೆಂದು ಹೇಳಿದ್ದೆ. ಈಗ ಉತ್ತಮ ಮಳೆಯಾಗುತ್ತಿದ್ದು, 15 ದಿನ ಕಾಲ ಕಟ್ಟು ಪದ್ಧತಿಯಲ್ಲಿ ನೀರು ಕೊಡಲಾಗುವುದು. ಈ ಅವಧಿಯಲ್ಲಿ ರೈತರು ಸಾಧ್ಯವಾಗುವ ಬೆಳೆ ಬೆಳೆದುಕೊಳ್ಳಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಆಯೋಗದ ಅವಧಿ ವಿಸ್ತರಣೆ
ಬೆಂಗಳೂರು
: ರಾಜ್ಯ ಸರ್ಕಾರ ನೇಮಿಸಿರುವ 6ನೇ ವೇತನ ಆಯೋಗದ ಅವಧಿಯನ್ನು 2018ರ ಜನವರಿ 31ರ ವರೆಗೂ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ನಿವೃತ್ತ ಐಎಎಸ್‌ ಅಧಿಕಾರಿ ಎಂ.ಆರ್‌. ಶ್ರೀನಿವಾಸ್‌ ಮೂರ್ತಿ ಅಧ್ಯಕ್ಷತೆಯಲ್ಲಿ ರಚನೆಯಾಗಿ ರುವ 6ನೇ ವೇತನ ಆಯೋಗಕ್ಕೆ 4 ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ, ಸರ್ಕಾರ ಸೂಚಿಸಿರುವ ವಿವಿಧ ಇಲಾಖೆಗಳ ವೃಂದಗಳ ವೇತನ ಶ್ರೇಣಿಯನ್ನು ತಿಳಿದುಕೊಳ್ಳಲು ರಾಜ್ಯ ಮತ್ತು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ಕಲೆ ಹಾಕುವುದು ಮತ್ತು ಸರ್ಕಾರಿ ನೌಕರರ ಕಾರ್ಯ ವಿಧಾನವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಆಯೋಗ ಶಿಫಾರಸು ಮಾಡಬೇಕಿರುವುದರಿಂದ ಹೆಚ್ಚಿನ ಸಮಯ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಹೀಗಾಗಿ ಸರ್ಕಾರ ಮತ್ತೆ ನಾಲ್ಕು ತಿಂಗಳು ಅವಧಿ ವಿಸ್ತರಿಸಿ ಆದೇಶ ಹೊರಡಿಸಿದೆ.

ನೌಕರರ ಒಕ್ಕೂಟ ವಿರೋಧ
ಬೆಂಗಳೂರು:
ಆರನೇ ರಾಜ್ಯ ವೇತನ ಆಯೋಗದ ಕಾಲಾವಧಿ ಇನ್ನೂ ನಾಲ್ಕು ತಿಂಗಳು ವಿಸ್ತರಿಸುವುದನ್ನು ಖಂಡಿಸಿ
ರುವ ಅಖೀಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ, 2017 ಜನವರಿಯಿಂದಲೇ ಶೇ.30ರಷ್ಟು ಮಧ್ಯಂತರ ಪರಿಹಾರ ಘೋಷಿಸಲು ಆಗ್ರಹಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಒಕ್ಕೂಟದ ಉಪಾಧ್ಯಕ್ಷ ಎಂ.ವೆಂಕಟೇಶ್‌ ಹಾಗೂ ಪ್ರಧಾನ ಕಾರ್ಯದರ್ಶಿ ಜೈಕುಮಾರ್‌, “ವೇತನ ಆಯೋಗದ ಕಾಲಾವದಿ 4 ತಿಂಗಳು ವಿಸ್ತರಿಸುವುದು ದುರದೃಷ್ಟಕರ. ಇದು ರಾಜ್ಯ ಸರ್ಕಾರ ಮತ್ತು ವೇತನ ಆಯೋಗವು ಸರ್ಕಾರಿ ನೌಕರರಿಗೆ ಕೊಡಬೇಕಾದ ವೇತನ ಸೌಲಭ್ಯ ಜಾರಿಗೊಳಿಸಲು ಅನುಸರಿಸುತ್ತಿರುವ ವಿಳಂಬ ಧೋರಣೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರಾಜ್ಯ ಸರ್ಕಾರಿ ನೌಕರರು ದೇಶದಲ್ಲಿಯೇ ಅತಿ ಕಡಿಮೆ ಸಂಬಳ ಪಡೆಯುತ್ತಿದ್ದಾರೆ. ನೌಕರರ ಹೋರಾಟ ಫ‌ಲವಾಗಿ ಆರನೇ ವೇತನ ಆಯೋಗ ರಚನೆಯಾಗಿ ನಾಲ್ಕು ತಿಂಗಳಲ್ಲಿ ವರದಿ ಕೊಡುವುದಾಗಿ ತಿಳಿಸಿ ಇದೀಗ ಕಾಲಾವಧಿ ವಿಸ್ತರಿಸಿರುವುದು ಸರಿಯಲ್ಲ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next