ಹಾವೇರಿ: ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಜಿಲ್ಲೆಯಲ್ಲಿಫೆ.24ರಂದು ನಡೆಯುವ ಪ್ರವೇಶ ಪರೀಕ್ಷೆ ವಿಶೇಷವಾಗಿ ಕೋವಿಡ್ ಮುನ್ನೆಚ್ಚರಿಕೆ ಕ್ರಮದೊಂದಿಗೆ ಸುವ್ಯವಸ್ಥಿತ ಹಾಗೂ ಲೋಪದೋಷವಾಗದಂತೆಪಾರದರ್ಶಕವಾಗಿ ನಡೆಸಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ ಕುರಿತು ಎಲ್ಲ ತಾಲೂಕು ಆಡಳಿತದೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರೀಕ್ಷಾ ಕೇಂದ್ರಗಳಲ್ಲಿ ಆಯಾ ಸ್ಥಳೀಯ ನಗರ ಸಂಸ್ಥೆಗಳಿಂದ ಪರೀಕ್ಷೆ ಹಿಂದಿನ ದಿನ ಪರೀಕ್ಷಾ ರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿಸಬೇಕು. ಆಯಾ ತಹಶೀಲ್ದಾರರು ಹೆಚ್ಚಿನ ಕಾಳಜಿ ವಹಿಸಬೇಕು. ಜ್ವರ ಲಕ್ಷಣ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪ್ರಶ್ನೆ ಪತ್ರಿಕೆ ರವಾನೆಗೆ ಸೂಕ್ತ ಕ್ರಮವಹಿಸಬೇಕು ಹಾಗೂ ಪ್ರತಿ ಕೇಂದ್ರಗಳಿಗೆ ಎರಡು ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಅದರಲ್ಲಿ ಒಬ್ಬರು ಮಹಿಳಾ ಪೇದೆ ನಿಯೋಜಿಸಬೇಕು ಹಾಗೂ ಇಬ್ಬರು ಆರೋಗ್ಯ ಸಿಬ್ಬಂದಿ ನಿಯೋಜಿಸಬೇಕು. ಪರೀಕ್ಷೆ ಅವಧಿ ಮುಗಿದ ನಂತರ ಎಲ್ಲ ಒಎಂಆರ್‌ಗಳನ್ನು ಪೊಲೀಸ್ ಬಂದೋಸ್ತ್ನಲ್ಲಿ ಖಜಾನೆಗೆ ತಲುಪಿಸಬೇಕು ಎಂದು ಸೂಚನೆ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜಪ್ಪ ಎನ್. ಆರ್. ಮಾತನಾಡಿ, ಜಿಲ್ಲೆಯಲ್ಲಿ8160 ವಿದ್ಯಾರ್ಥಿಗಳು ಪರೀಕ್ಷೆಗೆನೋಂದಾಯಿಸಿಕೊಂಡಿದ್ದು, ಏಳುತಾಲೂಕುಗಳಲ್ಲಿ 19 ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. ಫೆ.24ರಂದು ಮಧ್ಯಾಹ್ನ 2.30ರಿಂದ ಸಂಜೆ 4.30ರವರೆಗೆ ಪರೀಕ್ಷೆ ನಡೆಯಲಿದ್ದು, ಹಾನಗಲ್ಲ ತಾಲೂಕಿನಲ್ಲಿ ಆರು (1728 ವಿದ್ಯಾರ್ಥಿಗಳು), ಹಾವೇರಿ ತಾಲೂಕಿನಲ್ಲಿ ಮೂರು (1248 ವಿದ್ಯಾರ್ಥಿಗಳು), ಹಿರೇಕೆರೂರು (1200ವಿದ್ಯಾರ್ಥಿಗಳು), ಬ್ಯಾಡಗಿ (816),ಸವಣೂರು (792 ವಿದ್ಯಾರ್ಥಿಗಳು),ಶಿಗ್ಗಾವಿ (960 ವಿದ್ಯಾರ್ಥಿಗಳು)ಹಾಗೂ ರಾಣಿಬೆನ್ನೂರು (1416ವಿದ್ಯಾರ್ಥಿಗಳು) ತಾಲೂಕಿನಲ್ಲಿ ತಲಾ ಎರಡು ಪ ಪರೀಕ್ಷಾ ಕೇಂದ್ರ ತೆರೆಯಲಾಗಿದೆ ಎಂದು ತಿಳಿಸಿದರು.
ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ 19 ಜನ ವೀಕ್ಷಕರು, ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಪ್ರತಿ 24 ವಿದ್ಯಾರ್ಥಿಗಳಿಗೆ ಒಬ್ಬರಂತೆ ಕೊಠಡಿ ಮೇಲ್ವಿಚಾರಕರನ್ನು ಲಾಟರಿ ಮೂಲಕ ನಿಯೋಜಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಗದೀಶ ಹೆಬ್ಬಳ್ಳಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎ.ಎಚ್. ಜಮಖಾನೆ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರವೀಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ, ವಿವಿಧ ತಾಲೂಕುಗಳ ತಹಶೀಲ್ದಾರರು, ವಿವಿಧ ಕಾಲೇಜುಗಳ ಪ್ರಾಚಾರ್ಯರು ಇತರರು ಇದ್ದರು.
ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀ. ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಝರಾಕ್ಸ್- ಸೈಬರ್ ಕೆಫೆ ಮುಚ್ಚಲು ಆದೇಶಿಸಲಾಗಿದೆ. ಮೊಬೈಲ್, ಬ್ಲೂಟೂತ್, ಪೇಜರ್, ವೈರ್‌ಲೆಸ್ ಸೆಟ್, ಲಾಗ್ ಟೇಬಲ್, ಕ್ಯಾಲಕ್ಯುಲೇಟರ್ ಹಾಗೂ ರಿಸ್ಟ್‌ವಾಚ್ ಪರೀಕ್ಷಾ ಕೇಂದ್ರದಲ್ಲಿ ನಿಷೇಧಿಸಲಾಗಿದೆ.
–ಸಂಜಯ ಶೆಟ್ಟೆಣ್ಣವರ,ಜಿಲ್ಲಾಧಿಕಾರಿ