ಹೊಸದಿಲ್ಲಿ: ಬೇನಾಮಿ ಸ್ವತ್ತು ನಿರ್ಬಂಧ ಕಾನೂನು ಅಡಿಯಲ್ಲಿ ಈವರೆಗೆ 6,900 ಕೋಟಿ ರೂ. ಮೌಲ್ಯದ ಸ್ವತ್ತು ವಶಪಡಿಸಿ ಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಹೇಳಿ ದ್ದಾರೆ. ಬೇನಾಮಿ ಸ್ವತ್ತನ್ನು ಹೊಂದಿದವರು ಮತ್ತು ಫಲಾ ನುಭವಿ ಗಳಿಗೆ 7 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾ ಗಿದ್ದು, ಬೇನಾಮಿ ಸ್ವತ್ತಿನ ಮಾರುಕಟ್ಟೆ ಮೌಲ್ಯಕ್ಕೆ ಶೇ.25ರಷ್ಟು ದಂಡ ವಿಧಿಸಲಾಗುತ್ತದೆ. 2016 ನವೆಂಬರ್‌ನಿಂದ ಈ ಕಾನೂನು ಜಾರಿಗೆ ಬಂದಿದ್ದು, ಆದಾಯ ತೆರಿಗೆ ಇಲಾಖೆಯು ಈ ಕಾನೂನು ಜಾರಿಗೆ ಕ್ರಮ ಕೈಗೊಳ್ಳುತ್ತದೆ. ಆಸ್ತಿಯ ಬಗ್ಗೆ ಸುಳ್ಳು ವಿವರ ನೀಡಿದರೂ, 5 ವರ್ಷ ಜೈಲು ಶಿಕ್ಷೆ ಹಾಗೂ ಶೇ. 10ರಷ್ಟು ದಂಡ ವಿಧಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚೆನ್ನೈನಲ್ಲಿ 74 ಕಡೆ ದಾಳಿ: ತಮಿಳುನಾಡಿನ ಹಲವು ರಿಯಲ್ ಎಸ್ಟೇಟ್ ಕಂಪನಿಗಳು ಮತ್ತು ರಿಟೇಲ್ ಸ್ಟೋರ್‌ಗಳಲ್ಲಿ ತೆರಿಗೆ ವಂಚನೆಗೆ ಸಂಬಂಧಿಸಿ 74 ಕಡೆಗಳಲ್ಲಿ ಮಂಗಳವಾರ ದಾಳಿ ನಡೆಸಲಾಗಿದೆ. ಚೆನ್ನೈ, ಕೊಯಮತ್ತೂರು ಹಾಗೂ ಇತರೆಡೆ ಸರವಣ ಸ್ಟೋರ್ ಮೇಲೆ ದಾಳಿ ನಡೆಸಲಾಗಿದೆ. ಮಾಲೀಕ ಯೋಗಿರತ್ತಿನಮ್ ಪೊಂದುರೈ ಅವರ ಸ್ವತ್ತುಗಳಲ್ಲೂ ಶೋಧ ನಡೆಸಲಾಗಿದೆ.