Advertisement

ಆರೇ ಕೊಠಡಿಯಲ್ಲಿ 676 ಮಕ್ಕಳ ವಿದ್ಯಾಭ್ಯಾಸ

04:07 PM Jan 14, 2022 | Team Udayavani |

ಮಹಾಲಿಂಗಪುರ: ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಇರುವ ಕೇವಲ 6 ಕೊಠಡಿಗಳಲ್ಲಿ ಸುಮಾರು 676 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೊಠಡಿಗಳ ಕೊರತೆಯಿಂದಾಗಿ ಗುರುವಾರ ಸಮಾಜ ವಿಜ್ಞಾನ ವಿಷಯದ ಅರ್ಧವಾರ್ಷಿಕ ಪರೀಕ್ಷೆಯನ್ನು ಸುಮಾರು 204 ವಿದ್ಯಾರ್ಥಿಗಳು ಶಾಲೆಯ ಹೊರಾಂಗಣದಲ್ಲಿ ಕುಳಿತು ಪರೀಕ್ಷೆ ಬರೆದರು.

Advertisement

ಪ್ರಸ್ತುತ ಈ ಪ್ರೌಢಶಾಲೆಯಲ್ಲಿ 8ನೇ ವರ್ಗದ ಸುಮಾರು 204 ವಿದ್ಯಾರ್ಥಿಗಳು, 9ನೇ ವರ್ಗದಲ್ಲಿ 246 ವಿದ್ಯಾರ್ಥಿಗಳು, 10ನೇ ವರ್ಗದಲ್ಲಿ 225 ವಿದ್ಯಾರ್ಥಿಗಳು ಸೇರಿ ಒಟ್ಟು 676 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 6 ವರ್ಗದ ಕೋಣೆಗಳು ಸಾಲದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಹೊರಗಡೆ ಶೀತ ಗಾಳಿ ಧೂಳಿನ ಮಧ್ಯೆಯೂ ಗುರುವಾರ 8ನೇ ವರ್ಗದ 204 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಎಸ್‌ಡಿಎಮ್‌ಸಿ ಅಧ್ಯಕ್ಷೆ ಚಂದ್ರವ್ವ ಗೌಡರ ಮಾತನಾಡಿ, ಇತ್ತೀಚೆಗೆ ಸರ್ಕಾರ ಶಾಲೆಯ ಎರಡು ಹೆಚ್ಚುವರಿ ಕೋಣೆಗಳ ನಿರ್ಮಾಣಕ್ಕೆ 31.50 ಲಕ್ಷ ರೂ. ಮಂಜೂರು ಮಾಡಿದೆ. ಆದರೆ ಜಿಲ್ಲಾ ಪಂಚಾಯತಿಯಿಂದ ಇನ್ನುವರೆಗೂ ಟೆಂಡರ್‌ ಆಗಿಲ್ಲ. ಈಗಾಗಲೇ ಒಂದು ಹೆಚ್ಚುವರಿ ಕೋಣೆ ನಿರ್ಮಾಣ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ನೋಡಿದರೆ ಈ ಮೂರು ಕೋಣೆಗಳು ಕೂಡಾ ಸಾಲದು ಇನ್ನೂ ಹೆಚ್ಚುವರಿ ಸುಮಾರು 3-4 ಕೋಣೆಗಳು ಹಾಗೂ ಅಡುಗೆ ಕೋಣೆಯ ಅವಶ್ಯಕತೆಯಿದೆ.

ಶಾಸಕ ಸಿದ್ದು ಸವದಿ ಅವರು ಹೆಚ್ಚುವರಿ ಕೋಣೆಗಳ ನಿರ್ಮಾಣ ಹಾಗೂ ಶಾಲಾ ಕಾಂಪೌಂಡ್‌ ನಿರ್ಮಿಸಲು ಅನುದಾನ ನೀಡಬೇಕು. ನಮ್ಮ ಶಾಲೆಗೆ ಮುಖ್ಯಶಿಕ್ಷಕ ಹುದ್ದೆ ಹಾಗೂ ಒಬ್ಬ ಕಚೇರಿ ಸಿಬ್ಬಂದಿ ಕೂಡಾ ಅವಶ್ಯಕತೆ ಇದೆ. ಗುಡಿ-ಗುಂಡಾರಗಳಿಗೆ ಹಣ ನೀಡುವ ಬದಲು ಜೀವಂತ ದೇವರ ಗುಡಿ ಎಂದು ಕರೆಯಲ್ಪಡುವ ಶಾಲೆಗಳಿಗೆ ಸರ್ಕಾರ ಹೆಚ್ಚು ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

675 ವಿದ್ಯಾರ್ಥಿಗಳ ಇರುವ ಈ ಪ್ರೌಢಶಾಲೆಯಲ್ಲಿ ಸದ್ಯ 8 ಜನ ಖಾಯಂ, 4 ಜನ ಅತಿಥಿ ಶಿಕ್ಷಕರು ಸೇರಿದಂತೆ 12 ಜನ ಶಿಕ್ಷಕರು ಇದ್ದಾರೆ. ಈ ಶಾಲೆಗೆ ಒಂದು ಸುಸಜ್ಜಿತ ಕಾಂಪೌಂಡ್‌ ನಿರ್ಮಾಣ, ಬಿಸಿಯೂಟದ ಕೊಠಡಿ ನಿರ್ಮಾಣ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಕೊಠಡಿಗಳು, ಮುಖ್ಯಶಿಕ್ಷಕ ಹಾಗೂ ಕಚೇರಿ ಸಿಬ್ಬಂದಿ ಹುದ್ದೆಗಳ ಮಂಜೂರಿ, ಸುಸಜ್ಜಿತವಾದ ಶೌಚಾಲಯಗಳ ನಿರ್ಮಾಣ ಕಾರ್ಯಗಳು ಆಗಬೇಕಾಗಿವೆ. ಈ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಶಾಲೆಯತ್ತ ಗಮನ ಹರಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next