ಬೀಜಿಂಗ್: ಚೀನದಲ್ಲಿ ರವಿವಾರ 66 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಎಪ್ರಿಲ್ ಬಳಿಕ ಇದೇ ಮೊದಲ ಬಾರಿ ಒಂದೇ ದಿನ ಹೆಚ್ಚು ಪ್ರಕರಣಗಳಿಗೆ ಚೀನ ಸಾಕ್ಷಿಯಾಗಿದೆ. ಇದರೊಂದಿಗೆ ಚೀನದಲ್ಲಿ ಕೋವಿಡ್ ವೈರಸ್ ಸೋಂಕಿನ ಎರಡನೇ ಅಲೆ ಆರಂಭವಾಗಿದೆ ಎಂದು ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ವುಹಾನ್ ಮಾರುಕಟ್ಟೆಯಿಂದ ಆರಂಭವಾಗಿದ್ದ ಕೋವಿಡ್ ವೈರಸ್ ಹಾವಳಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದು ನಿಟ್ಟುಸಿರು ಬಿಟ್ಟಿದ್ದ ಚೀನಗೆ, ರಾಜಧಾನಿ ಬೀಜಿಂಗ್‌ನ ಕ್ಸಿನ್‌ಫಾಡಿ ಮಾರುಕಟ್ಟೆ ಮುಳುವಾಗಿ ಪರಿಣಮಿಸಿದೆ. ಬೀಜಿಂಗ್ ನಗರ ಒಂದರಲ್ಲೇ ಭಾನುವಾರ 36 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ನಗರದಲ್ಲಿ ಒಟ್ಟು 46 ಸೋಂಕಿತರಿದ್ದಾರೆ. ಅಲ್ಲದೆ ಶನಿವಾರ 9 ಮಂದಿ ಲಕ್ಷಣರಹಿತ ಸೋಂಕಿತರು ಪತ್ತೆಯಾಗಿದ್ದು, ಸೋಂಕಿನ ಲಕ್ಷಗಳಿಲ್ಲದ 103 ಮಂದಿಯನ್ನು ಅನುಮಾನದ ಮೇರೆಗೆ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಲಕ್ಷಣರಹಿತ ಸೋಂಕಿತರು ಸುಳಿವಿಲ್ಲದೆ ಸೋಂಕನ್ನು ಹರಡುವುದು ಚೀನದ ತಲೆನೋವನ್ನು ಹೆಚ್ಚಿಸಿದೆ.