ಬೆಳಗಾವಿ: ಪ್ರಾಣ ಭಯ ಬಿಟ್ಟು ದೇಶ ರಕ್ಷಣೆ ಮಾಡುತ್ತೇವೆ. ಯಾರ ದಾಳಿಗೂ ಹೆದರುವುದಿಲ್ಲ ಎಂಬ ಪ್ರತಿಜ್ಞೆಯೊಂದಿಗೆ ಬೆಳಗಾವಿಯ ಮರಾಠಾ ಲಘು ಪದಾತಿ ದಳ ಕೇಂದ್ರದ 650 ಯೋಧರು ಶನಿವಾರ ತಮ್ಮ ತರಬೇತಿ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕರ್ತವ್ಯಕ್ಕೆ ತೆರಳಲು ಸಿದ್ಧರಾದರು.
ಎಂಎಲ್‌ಐಆರ್‌ಸಿ ಕೇಂದ್ರದಲ್ಲಿ ಶನಿವಾರ ನಡೆದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಯೋಧರು ರಾಷ್ಟ್ರಧ್ವಜ ಹಿಡಿದು ಲೆಫ್ಟ್ ನಂಟ್ ಜನರಲ್ ದುಷ್ಯಂತಸಿಂಗ್ ಅವರ ಸಮ್ಮುಖದಲ್ಲಿ ಪ್ರತಿಜ್ಞೆ ಸ್ವೀಕರಿಸಿದರು. ಬ್ರಿಗೇಡಿಯರ್ ಗೋವಿಂದ ಕಾಲವಾಡ ಅವರು ಎಂಎಲ್‌ಐಆರ್‌ಸಿಯಿಂದ ಭವ್ಯ ಸ್ವಾಗತ ನೀಡಿದರು.
ನಂತರ ತರಬೇತಿ ಪಡೆದ ಯೋಧರಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಲೆಫ್ಟ್ ನಂಟ್ ಜನರಲ್ ದುಷ್ಯಂತ ಸಿಂಗ್ ಅವರು, ಭಾರತೀಯ ಸೇನಾ ಯೋಧರನ್ನು ಪರಿಪೂರ್ಣವಾಗಿ ತರಬೇತಿಗೊಳಿಸಿ ದೇಶ ಸೇವೆಗೆ ಸಿದ್ಧಗೊಳಿಸುವ ಹಿರಿಮೆ ಮತ್ತು ಇತಿಹಾಸ ಮರಾಠಾ ಲಘು ಪದಾತಿ ದಳ ಕೇಂದ್ರಕ್ಕಿದೆ. ಇದರ ಘನತೆ ಹಾಗೂ ಗೌರವ ಕಾಪಾಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಯೋಧರಿಗೆ ಕಿವಿಮಾತು ಹೇಳಿದರು.
ಯೋಧರು ತಮ್ಮ ಜೀವನದಲ್ಲಿ ಶಿಸ್ತು ಹಾಗೂ ದೈಹಿಕ ಕ್ಷಮತೆಗೆ ಹೆಚ್ಚಿನ ಮಹತ್ವ ನೀಡಬೇಕು. ಇದು ಮುಂದೆ ನಿಮ್ಮ ಉಜ್ವಲ ಭವಿಷ್ಯಕ್ಕೆ ಕಾರಣವಾಗಲಿದೆ. ದೇಶ ರಕ್ಷಣೆಯ ವಿಷಯ ಬಂದಾಗ ನೀವು ಇಲ್ಲಿ ಪಡೆದ ಕಠಿಣ ತರಬೇತಿಯನ್ನು ದೇಶ ರಕ್ಷಣೆಗೆ ಮುಡಿಪಾಗಿರಬೇಕು ಎಂದು ಕಿವಿಮಾತು ಹೇಳಿದರು.
ತರಬೇತಿ ಸಮಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಯೋಧರಿಗೆ ವಿವಿಧ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಲ್ಲ ವಿಭಾಗದಲ್ಲಿ ಆತ್ಯುತ್ತಮ ಪ್ರದರ್ಶನ ನೀಡಿದ ಸುನೀಲ ಪಾಟೀಲಗೆ ಕರ್ನಲ್ ಆರ್.ಡಿ. ನಿಕ್ಕಮ್ ಪ್ರಶಸ್ತಿ, ಕೇಶವರಾವ್ ತಾಳೇಕರ ಪ್ರಶಸ್ತಿಯನ್ನು ಸಿಪಾಯಿ ಸ್ವಪ್ನಿಲ್ ಕವಳೆ, ಮೇ. ಎಸ್.ಎಸ್. ಬ್ರಾರ್ ಟ್ರೋಫಿಯನ್ನು ಸಿಪಾಯಿ ಅನಿಕೇತ ಕರಾಡೆ, ಕರ್ನಲ್ ಎನ್.ಜೆ. ನಾಯರ್ ಪ್ರಶಸ್ತಿಯನ್ನು ಸಿಪಾಯಿ ಆಕಾಶ ಪರಾಂಡೆ, ಸುಚಾ ಸಿಂಗ್ ಸ್ಮಾರಕ ಪ್ರಶಸ್ತಿಯನ್ನು ಸಿಪಾಯಿ ಮೋಜೆ ಸುನಿಲ ಟ್ರಿಂಬಕ್ ಮತ್ತು ನಾಮದೇವ ಜಾಧವ ಪ್ರಶಸ್ತಿಯನ್ನು ಸಿಪಾಯಿ ಸುನೀಲ ಪಾಟೀಲ ಪಡೆದುಕೊಂಡರು. ಮರಾಠಾ ಲಘು ಪದಾತಿ ದಳ ಕೇಂದ್ರದ ಹಿರಿಯ ಸೇನಾಧಿಕಾರಿಗಳು ಹಾಗೂ ಯೋಧರ ಕುಟುಂಬದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.