ಚೆನ್ನೈ: ನಾಯಿಯೊಂದು ಬೊಗಳಿದ್ದಕ್ಕೆ ವ್ಯಕ್ತಿಯೊಬ್ಬ ಹೆದರಿಕೊಂಡು ಮೂರನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟ ಘಟನೆ ಹಸಿರಾಗಿರುವಾಗಲೇ ನಾಯಿ ವಿಚಾರಕ್ಕೆ ಪ್ರಾಣ ಹೋದ ಮತ್ತೊಂದು ಘಟನೆ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದೆ.
ರಾಯಪ್ಪನ್ ಎಂಬ 65 ವರ್ಷದ ರೈತನಿಗೆ ಪಕ್ಕದ ಮನೆಯಲ್ಲಿದ್ದ ಸಾಕು ನಾಯಿಗಳಂದ್ರೆ ಅಲರ್ಜಿ. ಎಷ್ಟೋ ಬಾರಿ ನಾಯಿಗೆ ಹೊಡೆಯಲು ಕೋಲು ಹಿಡಿದುಕೊಂಡೇ ರಾಯಪ್ಪನ್ ಹೋಗುತ್ತಿದ್ದರು.
ಇದನ್ನೂ ಓದಿ: ಸಿನಿಮಾವೇ ಇಲ್ಲದಿದ್ದರೆ… ಬಾಯ್ಕಾಟ್ ಟ್ರೆಂಡ್ ಬಗ್ಗೆ ಮತ್ತೆ ಮಾತನಾಡಿದ ಕರೀನಾ ಕಪೂರ್!
ಇತ್ತೀಚೆಗೆ ರಾಯಪ್ಪನ್ ತನ್ನ ಮೊಮ್ಮಗನಿಗೆ ತೋಟಕ್ಕೆ ಹೋಗಿ ನೀರಿನ ಪಂಪ್ ಬಂದ್ ಮಾಡಿ ಬಾ ಎಂದಿದ್ದರು. ಈ ವೇಳೆ ಕೋಲು ತೆಗೆದುಕೊಂಡು ಹೋಗು ʼನಾಯಿʼ ಬರುತ್ತದೆಂದು ಹೇಳಿದ್ದಾರೆ. ತನ್ನ ಮನೆಯ ಸಾಕು ನಾಯಿ ಅಂದರೆ ಹೆಸರಿಟ್ಟಿರುವ ಸಾಕು ನಾಯಿಯನ್ನು ʼನಾಯಿʼ ಎಂದು ಕರೆದ ರಾಯಪ್ಪನ್ ಅವರೊಂದಿಗೆ ಸಾಕು ನಾಯಿ ಮನೆ ಮಾಲಕರಾದ ನಿರ್ಮಲಾ ಫಾತಿಮಾ ರಾಣಿ ಮತ್ತು ಅವರ ಮಕ್ಕಳಾದ ಡೇನಿಯಲ್ ಮತ್ತು ವಿನ್ಸೆಂಟ್ ಎಚ್ ವಾಗ್ವಾದಕ್ಕೆ ಇಳಿದಿದ್ದಾರೆ.
ಇದೇ ವೇಳೆ ವಾಗ್ವಾದ ದೈಹಿಕ ಹಲ್ಲೆಗೆ ತಿರುಗಿದ್ದು, ರಾಯಪ್ಪನ್ ಅವರ ಎದೆಗೆ ಡೇನಿಯಲ್ ಗುದ್ದಿದ್ದಾನೆ. ಏಟಾದ ಪರಿಣಾಮ ಕುಸಿದು ಬಿದ್ದ ರಾಯಪ್ಪನ್ ಮೃತಪಟ್ಟಿದ್ದಾರೆ.
ಘಟನೆ ನಡೆದ ಬಳಿಕ ಅಲ್ಲಿಂದ ಡೇನಿಯಲ್ ಸೇರಿದಂತೆ ಮೂವರು ಪರಾರಿಯಾಗಿದ್ದಾರೆ. ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.