Advertisement
ರಾಜ್ಯದಲ್ಲಿ ಮಾ. 27ರಿಂದ ನಡೆಯಬೇಕಿದ್ದ ಎಸೆಸೆಲ್ಸಿ ಪರೀಕ್ಷೆ ಕೋವಿಡ್ -19 ಭೀತಿಯಿಂದಾಗಿ ಮುಂದೂಡಲ್ಪಟ್ಟಿತ್ತು. ಇದೀಗ ಪರಿಷ್ಕೃತ ಆದೇಶದಂತೆ ಜೂ. 25ರಿಂದ ಜು. 4ರ ವರೆಗೆ ಎಸೆಸೆಲ್ಸಿ ಪರೀಕ್ಷೆಗಳು ನಡೆಯಲಿವೆ. ಕೋವಿಡ್ -19 ಆತಂಕವಿರುವುದರಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಎಲ್ಲ ಮಕ್ಕಳಿಗೆ ತಲಾ ಎರಡು ಮಾಸ್ಕ್ ಗಳನ್ನು ಸರಕಾರ ನೀಡುತ್ತಿದೆ.
ದ.ಕ. ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ 345 ಮಂದಿ ಕಾಸರಗೋಡಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಗಡಿ ಭಾಗದ ವಿದ್ಯಾರ್ಥಿಗಳ ಸಂಚಾರ ವಿಚಾರವಾಗಿ ಕಾಸರಗೋಡು ಜಿಲ್ಲಾಧಿಕಾರಿ ಮತ್ತು ದ.ಕ. ಜಿಲ್ಲಾಧಿಕಾರಿ ನಡುವೆ ಪತ್ರ ವ್ಯವಹಾರಗಳು ನಡೆದಿದ್ದು, ಪಾಸ್ ಮುಖಾಂತರ ಅವರು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಲಿದ್ದಾರೆ. ಅವಶ್ಯವಿರುವ ದ.ಕ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುದಾನರಹಿತ ಶಾಲೆಗಳ ವಾಹನಗಳನ್ನು ಬಳಕೆ ಮಾಡುವ ಉದ್ದೇಶವಿದೆ. ಪರೀಕ್ಷೆ ಬರೆಯಲಿರುವ ಎಲ್ಲ ವಿದ್ಯಾರ್ಥಿಗಳ ಹೆತ್ತವರನ್ನು ಶಾಲೆಗಳ ಶಿಕ್ಷಕರು ಸಂಪರ್ಕಿಸಿ ಸಂಚಾರ ವ್ಯವಸ್ಥೆ, ಇತರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸ್ಯಾನಿಟೈಸರ್ ಬಳಸಿಯೇ ಪ್ರವೇಶ
ಎಲ್ಲ ಪರೀಕ್ಷಾ ಕೇಂದ್ರಗಳ ಒಳ ಪ್ರವೇಶಿಸುವ ಮುನ್ನ ವಿದ್ಯಾರ್ಥಿಗಳು ಸ್ಯಾನಿಟೈಸರ್ ಬಳಸುವುದು ಕಡ್ಡಾಯ. ವಿದ್ಯಾರ್ಥಿಗಳ ತಾಪಮಾನ ತಪಾಸಣೆ ನಡೆಸಿಯೇ ಒಳ ಬಿಡಲಾಗುತ್ತದೆ. ಸರಕಾರದಿಂದ ತಲಾ ಒಂದೊಂದು ಸ್ಯಾನಿಟೈಸರ್, ತಾಪಮಾನ ತಪಾಸಣ ಉಪಕರಣ ನೀಡ ಲಾಗುತ್ತದೆ. ಶಾಲಾ ಹಂತದಲ್ಲಿಯೂ ಖರೀದಿಸಲಾಗುತ್ತದೆ. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ನಾಲ್ವರು ಸ್ಕೌಟ್-ಗೈಡ್ ಶಿಕ್ಷಕರು, ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗುತ್ತದೆ.
Related Articles
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 30,835 ವಿದ್ಯಾರ್ಥಿಗಳು 95 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಹೆಚ್ಚುವರಿಯಾಗಿ 19 ಪರೀಕ್ಷೆ ಕೇಂದ್ರಗಳು ಕಾಯ್ದಿರಿಸಲಾಗಿದ್ದು, ಸರಕಾರದ ಮಾರ್ಗಸೂಚಿಯಂತೆ ಪ್ರತಿ ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಯಾವುದೇ ವಿದ್ಯಾರ್ಥಿಗೆ ರೋಗದ ಯಾವುದೇ ಲಕ್ಷಣ ಕಂಡು ಬಂದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪ್ರತೇಕವಾದ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 102 ವಿಶ್ರಾಂತಿ ಕೊಠಡಿ ಸಿದ್ಧಪಡಿಸಲಾಗುತ್ತಿದೆ. ಪರೀಕ್ಷೆ ಕೊಠಡಿಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತದೆ.
Advertisement
ಸೋಮವಾರದಿಂದ ವಿತರಣೆಪರೀಕ್ಷಾ ಹಾಲ್ ಟಿಕೆಟ್ ನೀಡುವ ಪ್ರಕ್ರಿಯೆ ಸೋಮವಾರದಿಂದ ಆರಂಭವಾಗಲಿದ್ದು, ಈ ವೇಳೆ ಎಲ್ಲ ವಿದ್ಯಾರ್ಥಿಗಳಿಗೆ ತಲಾ ಎರಡು ಮಾಸ್ಕ್ ಗಳನ್ನು ನೀಡಲಾಗುತ್ತದೆ. ಒಮ್ಮೆ ಬಳಕೆ ಮಾಡಿದ ಅನಂತರ ಮಾಸ್ಕ್ ಗಳನ್ನು ಬಿಸಿ ನೀರಿನಲ್ಲಿ ತೊಳೆದು ಮರು ಬಳಕೆ ಮಾಡುವ ಬಗ್ಗೆ ಈ ವೇಳೆ ವಿದ್ಯಾರ್ಥಿಗಳಿಗೆ ತಿಳಿಸಲಾಗುತ್ತದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಾಂತ್ ತಿಳಿಸಿದ್ದಾರೆ. ಅಗತ್ಯ ಸಿದ್ಧತೆ
ದ.ಕ. ಜಿಲ್ಲೆಗೆ ಈಗಾಗಲೇ 65 ಸಾವಿರ ಮಾಸ್ಕ್ ಗಳನ್ನು ರಾಜ್ಯದಿಂದ ಕಳುಹಿಸಿ ಕೊಡಲಾಗಿದೆ. ಮಾಸ್ಕ್ ಗಳನ್ನು ಎಲ್ಲ ಶಾಲೆಗಳಿಗೆ ವಿತರಿಸಲಾಗಿದ್ದು, ವಿದ್ಯಾರ್ಥಿಗಳು ಹಾಲ್ ಟಿಕೆಟ್ ಪಡೆದುಕೊಳ್ಳುವಾಗ ಮಾಸ್ಕ್ ನೀಡಲಾಗುತ್ತದೆ. ಎಲ್ಲ 95 ಪರೀಕ್ಷಾ ಕೇಂದ್ರಗಳಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯುವ ನಿಟ್ಟಿನಲ್ಲಿ ಮತ್ತು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಅಗತ್ಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.
-ಮಲ್ಲೇಸ್ವಾಮಿ, ಉಪ ನಿರ್ದೇಶಕರು,
ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಗಳೂರು