ಬೆಂಗಳೂರು: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಇದುವರೆಗೂ 6,449.93 ಕೋಟಿ ರೂ. ಪರಿಹಾರ ವಿತರಿಸಿದೆ. ಸುದ್ದಿಗಾರರ ಜತೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಅತಿ ಹೆಚ್ಚು ನಷ್ಟ ಉಂಟಾಗಿರುವ ಬೆಳಗಾವಿ ಜಿಲ್ಲೆಗೆ 867.65 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕಾಗಿ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 481 ಕೋಟಿ ರೂ. ಇದೆ. ಎರಡನೇ ಹಂತದ ಪ್ರವಾಹ ಮನೆ ಹಾನಿ ಸಂಬಂಧ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯಲಾಗುತ್ತಿದ್ದು ಸಮರ್ಪಕ ಪರಿಹಾರ ನೀಡಲಾಗುವುದು. ಈಗಾಗಲೇ ಕೇಂದ್ರದಿಂದ ಬಂದಿರುವ ಮಧ್ಯಂತರ ಪರಿಹಾರದ ಮೊತ್ತ 1200 ಕೋಟಿ ರೂ. ರೈತರ ಖಾತೆಗಳಿಗೆ ಹಾಕಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಈ ಬಾರಿ ಶೇ.121 ರಷ್ಟು ಹೆಚ್ಚು ಮಳೆ ಯಾಗಿದ್ದರಿಂದ ಸಮಸ್ಯೆಯಾಗಿದೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ ನದಿಗಳು ಉಕ್ಕಿ ಹರಿದ ಪರಿಣಾಮ ಪ್ರವಾಹ ಉಂಟಾಗಿತ್ತು ಎಂದು ತಿಳಿಸಿದರು. ಪ್ರವಾಹ ಪರಿಹಾರಕ್ಕೆ ನೀಡಿದ ಹಣವನ್ನು ಬ್ಯಾಂಕ್‌ನವರು ರೈತರ ಸಾಲದ ಕಂತಿಗೆ ಮುರಿದುಕೊಳ್ಳುತ್ತಿರುವ ದೂರು ಬಂದಿದೆ. ಆರ್‌ಬಿಐ ನಿಯಮದ ಪ್ರಕಾರ ಬರ, ನೆರೆ ಪರಿಹಾ ರದ ಹಣವನ್ನು ಈ ರೀತಿ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ.
ಹಾಗಾಗಿ ಸಂಬಂಧಿ ಸಿದ ಬ್ಯಾಂಕ್‌ಗಳಿಗೆ ನೋಟಿಸ್ ಜಾರಿಮಾಡಲು ಸೂಚಿಸಲಾಗಿದೆ ಎಂದು ಹೇಳಿದರು. 36.34 ಎಕರೆ ನೀಡಲು ಕ್ರಮ: ನಗರದ ಮೂಲಸೌಕರ್ಯ ಅಭಿವೃದ್ಧಿ ಸಂಬಂಧ ರಕ್ಷಣಾ ಇಲಾಖೆ ಭೂಮಿ ತೆಗೆದುಕೊಳ್ಳಲಾಗಿದೆ. ಇದಕ್ಕೆ ಪರ್ಯಾಯವಾಗಿ ಬೇರೆಡೆ 36.34 ಎಕರೆಯನ್ನು ರಕ್ಷಣಾ ಇಲಾಖೆಗೆ ನೀಡಲಾಗುವುದು. ಈ ಪೈಕಿ ಹಾಸನ 7.14 ಎಕರೆ, ಪಾಂಡವಪುರ 17.20 ಎಕರೆ ಹಾಗೂ ಮಾಗಡಿಯಲ್ಲಿ 12 ಎಕರೆ ಗುರುತಿಸಲಾಗಿದೆ ಎಂದು ಅಶೋಕ್ ಹೇಳಿದರು.
ರಾಜ್ಯ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿರುವುದರಿಂದ ಸರ್ಕಾರ ಪತನವಾಗಲು ಬಿಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿರಬಹುದು. ಬಿಜೆಪಿ ಸರ್ಕಾರ ಸುಭದ್ರವಾಗಿದ್ದು ಪತನಗೊಳ್ಳುವ ಪ್ರಮೆಯವೇ ಇಲ್ಲ. ನಮಗೆ ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್ ಬೆಂಬಲ ಪಡೆಯುವ ಆನಿವಾರ್ಯತೆ ಇಲ್ಲ. ಕಾಂಗ್ರೆಸ್ ನಂಬಿಕೆಗೆ ಅರ್ಹ ಪಕ್ಷವಲ್ಲ ಎಂಬುದು ಕುಮಾರಸ್ವಾಮಿಯವರಿಗೆ ಈಗ ಗೊತ್ತಾಗಿದೆ.
-ಆರ್.ಅಶೋಕ್, ಸಚಿವ