ಧಾರವಾಡ: ಬರಗಾಲದಿಂದ ಮುಖ್ಯ ಆಹಾರ ಬೆಳೆಗಳಾದ ಭತ್ತ, ಜೋಳಕ್ಕೆ ಮಾತ್ರ ಏಟು ಬಿದ್ದಿಲ್ಲ. ಜೊತೆಗೆ ಹಣ್ಣುಗಳ ರಾಜ ಎನ್ನಿಸಿಕೊಂಡಿರುವ ಮಾವಿನ ಬೆಳೆಯೂ ಶೇ.63ರಷ್ಟು ಕುಸಿದಿದೆ.
ರಾಜ್ಯದ ಅಲ್ಫಾನ್ಸೋ ಉತ್ಪಾದನೆಯಲ್ಲಿ ಶೇ.87ರಷ್ಟು ಪಾಲು ಹೊಂದಿರುವ ಧಾರವಾಡಮತ್ತು ಬೆಳಗಾವಿ ಜಿಲ್ಲೆಯಲ್ಲಿ ಈ ವರ್ಷ ಮಾವಿನ ಹಣ್ಣಿನ ಇಳುವರೀ ಶೇ.63ರಷ್ಟು ಕುಸಿದಿದೆ.
ಈ ಕಾರಣದಿಂದ ಮಾವಿನ ದರ ವಿಪರೀತ ಏರಿಕೆಯಾಗಿದ್ದು, ರುಚಿಕಟ್ಟಾದ ಸೀಕರಣೆ ಸವಿ ಬಡ ಹಾಗೂ ಮಧ್ಯಮ ವರ್ಗದವರ ಕೈಗೆಟುಕುವುದು ಅನುಮಾನವಾಗಿದೆ. ಧಾರವಾಡ ಜಿಲ್ಲೆಯ 10,970 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದು, ಉತ್ತಮ ಫಸಲು ಬಂದರೆ 80 ಸಾವಿರದಿಂದ ಒಂದು ಲಕ್ಷ ಟನ್ ಉತ್ಪಾದನೆಯಾಗುತ್ತದೆ.
ಬೆಳಗಾವಿ ಜಿಲ್ಲೆಯಲ್ಲಿ 6,432 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಈ ವರ್ಷ 77 ಸಾವಿರಟನ್ ಉತ್ಪಾದನೆ ನಿರೀಕ್ಷೆ ಮಾಡಲಾಗಿತ್ತು. ಆದರೆ ಉತ್ಪಾದನೆಯಾಗಿದ್ದು, 21 ಸಾವಿರ ಟನ್ ಮಾತ್ರ ಎಂದು ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಫಾನ್ಸೋ ಕುಸಿದಿದ್ದೇಕೆ?: ಅರೆಮಲೆನಾಡು ತಪ್ಪಲಿನಲ್ಲಿ ಭರಪೂರ ಬೆಳೆಯುತ್ತಿದ್ದ ಅಲ್ಫಾನ್ಸೋ ಮಾವು, ಸತತ ಮೂರು ವರ್ಷಗಳ ಬರಗಾಲದಿಂದ ಎದುರಾಗಿರುವ ನೀರಿನ ಕೊರತೆಗೆ ತತ್ತರಿಸಿದೆ. ಜೊತೆಗೆ ಮ್ಯಾಂಗೋ ಹ್ಯಾಪರ್ ರೋಗದ (ಜಿಗಿ ರೋಗ) ಕಾಟದಿಂದ 100 ಹಣ್ಣು ಬಿಡುವ ಗಿಡಗಳಲ್ಲಿ ಸರಾಸರಿ 27 ಕಾಯಿಗಳು ಮಾತ್ರ ಕಾಣುತ್ತಿವೆ. ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಉತ್ತಮವಾಗಿ ಹೂ ಬಿಟ್ಟರೆ ಉತ್ತಮ ಫಸಲು ಕಾಣುವ ಅಲ್ಫಾನ್ಸೋ ಮಾವು, ಡಿಸೆಂಬರ್‌ನಿಂದ ಫೆಬ್ರವರಿ ಅವಧಿಯಲ್ಲಿ ಹೂವು ಬಿಟ್ಟು ಹೀಚು ಹಿಡಿದಿತ್ತು. ಇದರಿಂದ ಉತ್ಪಾದನೆಗೆ ಮತ್ತಷ್ಟು ಹೊಡೆತ ಬಿದ್ದಿದೆ. ಸರಿಯಾದ ಸಮಯಕ್ಕೆ ಹೂವು ಬಿಡದೇ ಇರುವುದು (ಪಫೆìಕ್ಟ್ ಫÉವರಿಂಗ್) ಕೂಡ ಶೇ.20ರಷ್ಟು ಮಾವಿನ ಉತ್ಪಾದನೆ ಕುಸಿತಕ್ಕೆ ಕಾರಣ.
ಈ ವರ್ಷ ದೀರ್ಘಾವಧಿ ಸುಗ್ಗಿ (ಪ್ರೋಲಾಂಗ್ ಪ್ರೊಸೆಸ್) ಅಂದರೆ, ಸತತ 3 ತಿಂಗಳ ಕಾಲ ಹಂತ ಹಂತವಾಗಿ ಮಾವಿನ ಗಿಡಗಳು ಹೂವು, ಹೀಚು ಬಿಟ್ಟಿರವುದು ಉತ್ತಮ ಇಳುವರಿ ಪಡೆಯಲು ಅಡ್ಡಿಯಾಗಿದೆ ಎನ್ನುತ್ತಿದ್ದಾರೆ ತೋಟಗಾರಿಕಾ
ತಜ್ಞರು.
ಏಜೆಂಟರಿಗೆ ಭಾರಿ ಏಟು: ಧಾರವಾಡ ಮತ್ತು ಬೆಳೆಗಾವಿ ಜಿಲ್ಲೆಯಲ್ಲಿ ಸಂಕ್ರಾಂತಿ ಸಮಯಕ್ಕೆ ಬಂದು ರೈತರ ಬಿಡಿ ತೋಟಗಳನ್ನು ಖರೀದಿಸಿರುವ ಮಾವಿನ ಹಣ್ಣಿನ ವ್ಯಾಪಾರಿಗಳು ಮತ್ತು ಏಜೆಂಟರಿಗೆ ಈ ಬಾರಿ ಹೊಡೆತ ಬಿದ್ದಿದೆ.
ಈ ಸುಗ್ಗಿಯಲ್ಲಿ ಅಲ್ಫಾನ್ಸೋ ಮಾವಿನ ಹಣ್ಣಿನ ಉತ್ಪಾದನೆ ಗಣನೀಯವಾಗಿ ಕುಸಿಯಲು ಮಳೆ ಕೊರತೆ ಕಾರಣ. ಸತತ ಬರಗಾಲದಿಂದ ಅರೆಮಲೆನಾಡು ಪ್ರದೇಶದ ತೋಟಗಳು ಕಾಯಿ ಬಿಡುತ್ತಿಲ್ಲ. ಫೆಬ್ರವರಿಯಲ್ಲಿ ಮುಂಗಾರು ಪೂರ್ವ ಮಳೆ ಸುರಿದಿದ್ದರೆ ಇಷ್ಟು ಹಾನಿಯಾಗುತ್ತಿರಲಿಲ್ಲ.
– ಎನ್.ಎನ್. ಜಿದ್ದಿಮನಿ,
ತೋಟಗಾರಿಕೆ ಡಿಡಿ, ಧಾರವಾಡ
ಬೆಳೆ ಬಾರದೆ ನಷ್ಟವಾಗಿ ಕೊನೇ ಪಕ್ಷ ಮಾವಿನ ಹಣ್ಣುಗಳಾದರೂ ಚೆನ್ನಾಗಿ ಬಂದಿದ್ದರೆ, ಕೊಂಚ ಲಾಭವಾಗುತ್ತಿತ್ತು. ಆದೂ ಚೆನ್ನಾಗಿ ಬಂದಿಲ್ಲ. ಹಣ್ಣು ತಿಂದು ಸಂಭ್ರಮಿಸುವ ಹಳ್ಳಿ ಮಕ್ಕಳಿಗೂ ಬರಗಾಲ ಮತ್ತೂಂದು ಬಾರಿ ಏಟು ನೀಡಿದೆ.
– ಈರಣ್ಣ ಕಾಳೆ,
ಮಾವು ಬೆಳೆಗಾರ, ಲಾಳಗಟ್ಟಿ
– ಬಸವರಾಜ ಹೊಂಗಲ್