Advertisement

ಸಾಧನೆಗೆ ಬಡತನವೇ ಪ್ರೇರಣೆ :ಗೋವಾಕ್ಕೆ ಗುಳೆ ಹೋಗಿರುವ ಕಾರ್ಮಿಕನ‌ ಮಗ ಟಾಪರ್

05:52 PM May 19, 2022 | Team Udayavani |

ವಿಜಯಪುರ: ಅಸಹನೀಯ ಬಡತನ, ಹಸಿವು ನನ್ನನ್ನು ಅಕ್ಷರದ ಸಾಧನೆಗೆ ಪ್ರೇರಣೆ ನೀಡಿದವು. ದುಡಿಯಲು ತಂದೆ ಗೋವಾಕ್ಕೆ ಗುಳೆ ಹೋಗಿದ್ದು, ಶಿಕ್ಷಣದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲಕ್ಕೆ ಶಿಕ್ಷಕರು ನೀರೆರೆದು ಪೋಷಿಸಿದ್ದರಿಂದ ರಾಜ್ಯಕ್ಕೆ ಟಾಪರ್ ಸಾಧನೆ ಮಾಡಲು ಸಾಧ್ಯವಾಯ್ತು‌.ಇದು ಎಸ್ ಎಸ್ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ 625ಕ್ಕೆ 625 ಅಂಕ ಪಡೆದ ವಿಜಯಪುರ ಜಿಲ್ಲೆಯ ಯಲ್ಲಾಲಿಂಗ ಸುಳಿಭಾವಿ ಪ್ರತಿಕ್ರಿಯೆ.

Advertisement

ಮುದ್ದೇಬಿಹಾಳ ತಾಲೂಕಿನ ಲೊಟಗೇರಿ ಗ್ರಾಮದ ಯಲ್ಲಾಲಿಂಗನ ಕುಟುಂಬಕ್ಕೆ ಎರಡು ಎಕರೆ ಜಮೀನಿ ಹೊರತಾಗಿ ಮತ್ತೇನೂ ಇಲ್ಲ. ಹೀಗಾಗಿ ಬದುಕಿನ ಬಂಡಿ ಎಳೆಯಲು ಯಲ್ಲಾಲಿಂಗನ ತಂದೆ ಬಸಪ್ಪ ಪತ್ನಿ ಲಕ್ಷ್ಮೀ ಜತೆ ಮಕ್ಕಳನ್ನು ಕರೆದುಕೊಂಡು ಅದೇ ತಾಲೂಕಿನ ನಾಲತವಾಡಕ್ಕೆ ಬಂದರು. ಬಾಡಿಗೆ ಮನೆಯಲ್ಲಿ ಇರುವಷ್ಟು ಆರ್ಥಿಕ ಶಕ್ತಿ ಇಲ್ಲದ ಕಾರಣ ಅನ್ಯರ ನಿವೇಶನದಲ್ಲಿ ಗುಡಿಸಲು ಹಾಕಿಕೊಂಡು ಕೂಲಿ ಜೀವನ ನಡೆಸುತ್ತಿದ್ದಾರೆ.

ಜೀವನ ನಿರ್ವಹಣೆ ಕಷ್ಟವಾದ ಕಾರಣ ಬಸಪ್ಪ ಹೆಂಡತಿ, ಮಕ್ಕಳನ್ನು ನಾಲತವಾಡ ಪಟ್ಟಣದಲ್ಲೇ ಬಿಟ್ಡು, ದುಡಿಮೆ ಅರಸಿ ಗೋವಾ ರಾಜ್ಯಕ್ಕೆ ಗುಳೆ ಹೋಗಿದ್ದಾರೆ. ಇಂಥ ಕಷ್ಟದ ಮಧ್ಯೆಯೂ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಉದ್ದೇಶದಿಂದ ಮೊದಲ ಮಗ ವಿಜಯಕುಮಾರಗೆ ಪದವಿ ಶಿಕ್ಷಣ ಕೊಡಿಸಿದ್ದಾರೆ.

ಇದನ್ನೂ ಓದಿ : ಎಸ್‌ಎಸ್ಎಲ್‌ಸಿ ಫಲಿತಾಂಶ : ಗ್ರೇಡಿಂಗ್ ವ್ಯವಸ್ಥೆಯಲ್ಲಿ ಜಿಲ್ಲಾವಾರು ಸ್ಥಾನವಿಲ್ಲ

ಇದೀಗ ರಾಜ್ಯಕ್ಕೆ ಟಾಪರ್ ಆಗಿರುವ ಯಲ್ಲಾಲಿಂಗ ನನ್ನು ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟದ ಆಕ್ಸ್‌ಫರ್ಡ್ ಇಂಗ್ಲೀಷ್ ಮಾಧ್ಯಮ ಪ್ರೌಢ ಶಾಲೆಗೆ ಸೇರಿಸಿದ್ದರು. ಯಲ್ಲಾಲಿಂಗನ ಪ್ರತಿಭೆ ಹಾಗೂ ಬಡತನದ ಕೌಟುಂಬಿಕ ಹಿನ್ನೆಲೆಯ ಕಾರಣದಿಂದ ಸಂಸ್ಥೆಯ ಮುಖ್ಯಸ್ಥ ಮಲ್ಲಿಕಾರ್ಜುನ ಪಾಟೀಲ್ ಕೂಡ ಕೊಟ್ಟಷ್ಟೇ ಶುಲ್ಕ ಪಡೆದು ಪ್ರವೇಶ ನೀಡಿದರು.

Advertisement

ಯಲ್ಲಾಲಿಂಗನಲ್ಲಿ ಇದ್ದ ಪ್ರತಿಭಾವಂತಿಕೆ ಗುರುತಿಸಿದ ಮುಖ್ಯೋಪಾಧ್ಯಾಯ ಇಸ್ಮಾಯಿಲ್ ನೇತೃತ್ವದ ಶಿಕ್ಷಕರು ಉತ್ತಮ ಮಾರ್ಗದರ್ಶನ ಮಾಡಿದರು. ಪರಿಣಾಮ ಯಲ್ಲಾಲಿಂಗ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯದ ಟಾಪರ್ ಗಳಲ್ಲಿ ಒಬ್ಬನಾಗುವ ಮೂಲಕ ಶಾಲೆಗೆ ಹಾಗೂ ಜಿಲ್ಲೆಗೂ ಕೀರ್ತಿ ತಂದಿದ್ದಾನೆ.

ನಾಗರಬೆಟ್ಟದ ಆಕ್ಸ್‌ಫರ್ಡ್ ಶಾಲೆಯಲ್ಲಿ ಶಿಕ್ಷಕರು ನೀಡುವ ಗುಣಮಟ್ಟದ ಶಿಕ್ಷಣ, ಪ್ರತಿ ಮಗುವಿನ ಬಗ್ಗೆ ತೋರುವ ಶೈಕ್ಷಣಿಕ ವಿಶೇಷ ಕಾಳಜಿ ನನ್ನ ಟಾಪರ್ ಸಾಧನೆ ಸಾಧ್ಯವಾಗಿಸಿದೆ ಎಂದು ಯಲ್ಲಾಲಿಂಗ ಸ್ಮರಿಸುತ್ತಾನೆ.

ಕುಟುಂಬದ ಬಡತನ ನೀಗಲು ಶಿಕ್ಷಣದಲ್ಲಿ ಸಾಧನೆ ಮಾಡಬೇಕೆಂದು ನಿತ್ತವೂ ರಾತ್ರಿ 3 ಗಂಟೆ ವರೆಗೆ ಓದುತ್ತಿದ್ದೆ. ಶಿಕ್ಷಕರು ತಡರಾತ್ರಿ ಸಂದರ್ಭದಲ್ಲೂ ನನ್ನ ಸಮಸ್ಯೆಗೆ ಪರಿಹಾರ ಸೂಚಿಸುತ್ತಿದ್ದರು. ಶಾಲೆಯ ಆಡಳಿತ ಮಂಡಳಿಯವರು ಶುಲ್ಕಕ್ಕೆ ಪೀಡಿಸದೇ ಸಹಕರಿಸಿದರು‌. ಹೀಗಾಗಿ ಸತತ ಪರಿಶ್ರಮದಿಂದ ಓದಿದಕ್ಕೆ ಟಾಪರ್ ಆಗಲು ಸಾಧ್ಯವಾಯ್ತು ಎಂದು ಯಲ್ಲಾಲಿಂಗ ತನಗೆ ಸಹಾಯ ನೀಡಿದವರನ್ನು ನೆನೆಯುತ್ತಾನೆ.
ಎಂಜಿನಿಯರ್ ಆಗುವ ಕನಸು ಕಂಡಿರುವ ಯಲ್ಲಾಲಿಂಗ ಅದೇ ಸಂಸ್ಥೆಯ ವಿಜ್ಞಾನ ಕಾಲೇಜಿನಲ್ಲಿ ಪ್ರವೇಶಕ್ಕೆ ಮುಂದಾಗಿದ್ದಾನೆ.

ಊರ ಜಾತ್ರೆಗಾಗಿ ಗೋವಾದಿಂದ ತವರಿಗೆ ಮರಳಿರುವ ಬಸಪ್ಪ ಸುಳಿಭಾವಿ, ಮಗ ಯಲ್ಲಾಲಿಂಗನ ಸಾಧನೆಯ ಸಂಭ್ರಮದಲ್ಲಿ ಬಡತನದ ನೋವು ಮರೆತಿದ್ದಾರೆ. ದುಡಿಮೆಯ ಬೆವರಿನ‌ ಪರಿಶ್ರಮಕ್ಕೆ ಮಗ ತಕ್ಕ ಪ್ರತಿಫಲ ತಂದುದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next