Advertisement
ಕೆರೆಗಳು ನೀರಿನ ಸಂಗ್ರಹ ಮೂಲ, ಅಂತರ್ಜಲ ಹೆಚ್ಚಿಸುವ ಪಾತ್ರೆ, ಪ್ರಾಣಿ- ಪಕ್ಷಿ, ಜೀವ ಸಂಕುಲಗಳ ಜೀವನಾಡಿ. ಇಂತಹ ಕೆರೆಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವುದು ನಮ್ಮೆಲ್ಲರ ಮುಖ್ಯ ಜವಾಬ್ದಾರಿಯಾಗಿರುತ್ತದೆ. ಆದರೆ ಅದೆಷ್ಟೋ ಕೆರೆಗಳು ನೀರುಸಂಗ್ರಹ ಸಾಮರ್ಥ್ಯವನ್ನು ಕಳೆದು ಕೊಂಡಿವೆ. ಗಿಡಗಂಟಿ ಬೆಳೆದು, ಹೂಳು ತುಂಬಿ ಮುಚ್ಚಿಹೋಗಿವೆ. ಮರಳು, ಮಣ್ಣಿಗಾಗಿ ಕೆರೆಯನ್ನು ಅಗೆದು ವಿರೂಪ ಗೊಳಿಸಲಾಗಿದೆ. ಒತ್ತುವರಿಯಿಂದಾಗಿ ನೀರು ಹರಿದು ಬರುತ್ತಿದ್ದ ಕಾಲುವೆಗಳು ಇಲ್ಲದಂತಾಗಿದೆ. ಹನಿ ನೀರಿಗಾಗಿ ಪರದಾಡುತ್ತಿರುವ ರೈತರ ಹಾಗೂ ನೀರಿಗಾಗಿ ಬಹಳ ದೂರದವರೆಗೆ ಅಲೆಯುತ್ತಿರುವ ಮಹಿಳೆಯರ ಸಂಕಷ್ಟ ಗಮನಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವೀ. ಹೆಗ್ಗಡೆಯವರು ಪಾರಂಪರಿಕ ಕೆರೆಗಳ ಪುನಶ್ಚೇತನಕ್ಕಾಗಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮವನ್ನು 2016 ರಲ್ಲಿ ಪ್ರಾರಂಭಿಸಿದರು. ಇದುವರೆಗೆ ರಾಜ್ಯಾದ್ಯಂತ 622 ಕೆರೆಯ ಪುನಶ್ಚೇತನ ಕಾರ್ಯ ನಡೆಸಲಾಗಿದೆ.
ಕೆರೆಯ ಶಾಶ್ವತ ನಿರ್ವಹಣೆಯ ಬಗ್ಗೆ ಮಾಹಿತಿ, ಕೆರೆ ಸಮಿತಿಯನ್ನು ಸರಕಾರದ ನಿಯಮದಡಿ ನೋಂದಣಿ ಮಾಡಿಕೊಳ್ಳುವುದು, ಕೆರೆ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳ ಅನುದಾನಗಳ ಮಾಹಿತಿ, ಇತರ ಸಂಘ-ಸಂಸ್ಥೆಗಳಿಂದ ಅನುದಾನ ಪಡೆದು ಅಭಿವೃದ್ಧಿ ಕಾರ್ಯ ನಡೆಸಲು ಪ್ರೇರಣೆ ನೀಡಲಾಗುವುದು. ಅಷ್ಟೇ ಅಲ್ಲದೆ ಕೆರೆಗಳ ಸುತ್ತ ಗಿಡ ನಾಟಿ, ಕೆರೆ ಹಾಗೂ ಸುತ್ತಮುತ್ತ ಮಲಿನ ಮಾಡದಂತೆ ಅರಿವು, ಕೆರೆ ಅತಿಕ್ರಮಣ ತಡೆಯುವ ಕುರಿತು ಜಾಗೃತಿ, ಕೆರೆ ಅಭಿವೃದ್ಧಿಗಾಗಿ ಇರುವ ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ಅವಕಾಶಗಳ ಬಗ್ಗೆ ಜಲತಜ್ಞರಿಂದ ಹಾಗೂ ಇಲಾಖಾ ಅಧಿಕಾರಿಗಳಿಂದ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ಡಾ| ಮಂಜುನಾಥ್ ಅವರು ತಿಳಿಸಿದ್ದಾರೆ.