Advertisement

ಜಿಲ್ಲೆಯಲ್ಲಿ 60 ಚೆಕ್‌ಪೋಸ್ಟ್‌ ಆರಂಭ; 25 ಲಕ್ಷ ರೂ. ನಗದು, 16 ಲಕ್ಷ ರೂ. ಸೀರೆ ವಶಕ್ಕೆ

06:29 PM Mar 24, 2023 | Team Udayavani |

ಬೆಳಗಾವಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಹಣದ ಹೊಳೆ ಹರಿಯುತ್ತಿದ್ದು, ಗಡಿ ಜಿಲ್ಲೆಯ ಮೂಲೆ ಮೂಲೆಯಲ್ಲಿ ಅಕ್ರಮ ಹಣ ಹಾಗೂ ಮತದಾರರಿಗೆ ಹಂಚಲು ತಂದಿದ್ದ 16 ಲಕ್ಷ ರೂ. ಮೌಲ್ಯದ 5 ಸಾವಿರ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಒಟ್ಟು 60 ಕಡೆಗೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, 25 ಚೆಕ್‌ಪೋಸ್ಟ್‌ಗಳನ್ನು ಮಹಾರಾಷ್ಟ್ರದಿಂದ ಜಿಲ್ಲೆಗೆ ಹೊಂದಿಕೊಂಡಿರುವ ಕಡೆಗೆ ಹಾಕಲಾಗಿದೆ. ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುತ್ತಿದ್ದ ದಾಖಲೆ ಇಲ್ಲದ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಗರದ ಪೀರನವಾಡಿ ಚೆಕ್‌ ಪೋಸ್ಟ್‌ ನಲ್ಲಿ ಫ್ಲೈಯಿಂಗ್‌ ಸ್ಕ್ವಾಡ್‌ ತಂಡವು ಬುಧವಾರ 2.89 ಲಕ್ಷ ರೂ. ಹಣವನ್ನು ಜಪ್ತಿ ಮಾಡಿಕೊಂಡಿದೆ. ಚೆಕ್‌ ಪೋಸ್ಟ್‌ ಮೂಲಕ ಹೋಗುತ್ತಿದ್ದ ಇಂಡಿಕಾ ವಾಹನವನ್ನು ಪೊಲೀಸ್‌ ಹಾಗೂ ಎಫ್‌.ಎಸ್‌.ಟಿ. ತಂಡದ ಅಧಿಕಾರಿಗಳು ತಪಾಸಣೆ ನಡೆಸಿದ ಸಂದರ್ಭದಲ್ಲಿ ನಗದು ಪತ್ತೆಯಾಗಿರುತ್ತದೆ. ನಗದು ಹಣವನ್ನು ಖಜಾನೆಯಲ್ಲಿ ಜಮಾ ಮಾಡಲಾಗಿದೆ ಎಂದು ಅ ಧಿಕಾರಿಗಳು ತಿಳಿಸಿದ್ದಾರೆ.

ಕೊಗನೊಳ್ಳಿ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೇ ತರುತ್ತಿದ್ದ 13 ಲಕ್ಷ ರೂ. ನಗದು ಹಣವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಹಾರೂಗೇರಿ ಚೆಕ್‌ಪೋಸ್ಟ್‌ ನಲ್ಲಿ 4 ಲಕ್ಷ ರೂ., ಸಂಕೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯ ಬುಗಟೆ ಆಲೂರ ಚೆಕ್‌ಪೋಸ್ಟ್‌ ನಲ್ಲಿ 1.90 ಲಕ್ಷ ರೂ., ಐಗಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ತೆಲಸಂಗ ಚೆಕ್‌ಪೋಸ್ಟ್‌ನಲ್ಲಿ 3.45 ಲಕ್ಷ ರೂ. ಹಾಗೂ ಹಾರೂಗೇರಿಯಲ್ಲಿ 1.60 ಲಕ್ಷ ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ಚುನಾವಣಾ ಕಣರಂಗೇರುತ್ತಿದ್ದು, ಮತದಾರರನ್ನು ಸೆಳೆಯಲು ರಣತಂತ್ರ ಹೆಣೆಯಲಾಗುತ್ತಿದೆ. ಜಿಲ್ಲೆಯ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ನಿಗಾ ಇಡಲಾಗಿದ್ದು, ಅಕ್ರಮವಾಗಿ ಹಣ ಸಾಗಿಸುವುದು, ಸೀರೆಗಳನ್ನು ಸಾಗಿಸುವುದರ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ. ಇನ್ನೂ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಅಪಾರ ಪ್ರಮಾಣದ ಅಕ್ರಮ ಹಣ ವಶಪಡಿಸಿಕೊಳ್ಳಲಾಗುತ್ತಿದೆ. ಮತದಾರರನ್ನು ಸೆಳೆಯಲು ಆಕಾಂಕ್ಷಿಗಳು ಹಣ ಹಾಗೂ ಸೀರೆ ಸೇರಿದಂತೆ ವಿವಿಧ ವಸ್ತುಗಳ ಆಮಿಷ ಒಡ್ಡುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ಚುನಾವಣಾ ಅಧಿಕಾರಿಗಳು ಜಿಲ್ಲೆಯ ವಿವಿಧ ಕಡೆಗಳಲ್ಲಿ ಹದ್ದಿನಗಣ್ಣು ಇಟ್ಟಿದ್ದಾರೆ.

Advertisement

ಖಾನಾಪುರ ತಾಲೂಕಿನ ಲೋಂಡಾ ಚೆಕ್‌ಪೋಸ್ಟ್‌ ಬಳಿ ಮತದಾರರಿಗೆ ಹಂಚಲು ಕಾರಿನಲ್ಲಿ ಒಯ್ಯುತ್ತಿದ್ದ 25 ಮಿಕ್ಸರ್‌ ಗ್ರೈಂಡರ್‌ಗಳನ್ನು ಪೊಲೀಸರು ಹಾಗೂ ಫ್ಲೈಯಿಂಗ್ ಸ್ಕ್ವಾಡ್‌ ತಂಡದ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಇದರ ಒಟ್ಟು ಮೌಲ್ಯ 62,500ರೂ. ಆಗಿದೆ.

16 ಲಕ್ಷ ರೂ. ಮೌಲ್ಯದ 5 ಸಾವಿರ ಸೀರೆ ವಶಕ್ಕೆ
ಚಿಕ್ಕೋಡಿ ತಾಲೂಕಿನ ಸದಲಗಾ ಪೊಲೀಸ್‌ ಠಾಣೆ ವ್ಯಾಪ್ತಿಯ ದತ್ತವಾಡ-ಸದಲಗಾ ಚೆಕ್‌ಪೋಸ್ಟ್‌ ಮೂಲಕ ರಾಯಬಾಗಕ್ಕೆ ವಾಹನದಲ್ಲಿ ಸರಬರಾಜು ಮಾಡುತ್ತಿದ್ದ 16 ಲಕ್ಷ ರೂ. ಮೌಲ್ಯದ 5 ಸಾವಿರ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಗೂಡ್ಸ್‌ ವಾಹನದಲ್ಲಿ ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಉಚಗಾಂವ ಗ್ರಾಮದ ಖಾದೀರ್‌ ದಾವರಲಿ ಶೇಖ ಹಾಗೂ ಕ್ಲೀನರ್‌ ರಾಯಬಾಗ ಬ್ಯಾಕೂಡ ಗ್ರಾಮದ ವಸಂತ ಕಾಂಬಳೆ ಎಂಬಾತರು ಸೀರೆಗಳನ್ನು ರಾಯಬಾಗಕ್ಕೆ ಕೊಂಡೊಯ್ಯುತ್ತಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದಾಗ ಮತದಾರರಿಗೆ ಚುನಾವಣೆ ವೇಳೆ ಹಂಚಲು ತೆಗೆದುಕೊಂಡು ಹೋಗುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಪಾಲಿಸ್ಟರ್‌ ಸೀರೆಯ ಯಾವುದೇ ದಾಖಲಾತಿ ಇರಲಿಲ್ಲ. ಈ ಬಗ್ಗೆ ಕರ್ತವ್ಯದಲ್ಲಿದ್ದ ಫ್ಲಾಯಿಂಗ್‌ ಸ್ಕ್ವಾಡ್‌ ತಂಡದವರು ಪ್ರಕರಣ ದಾಖಲಿಸಿಕೊಂಡು ಸೀರೆಗಳನ್ನು ಹಾಗೂ ಅಶೋಕ ಲೈಲ್ಯಾಂಡ್‌ ವಾಹನ ವಶಪಡಿಸಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next