ಮೈಸೂರು: ಕೇರಳ ಮೂಲದ ಅಭರಣ ವ್ಯಾಪಾರಿ ಯೊಬ್ಬರನ್ನು ಬೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಹನಿಟ್ರ್ಯಾಪ್ ಪ್ರಕರಣವನ್ನು ಭೇದಿಸಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ 6 ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಬಂಧಿತರಾಗಿರುವ ಲತೀಫ್ (29), ಸಿ.ಪಿ. ನೌಶಾದ್ (39) ಹಾಗೂ ರಶೀದ್(32) ಕೇರಳ ಮೂಲದವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದರು. ಇವರೊಂದಿಗೆ ಚಿಕ್ಕಮಗಳೂರಿನ ಯೂಸೂಫ್ (40), ಮೈಸೂರಿನ ಉದಯಗಿರಿ ನಿವಾಸಿ ಹೀನಾ (22) ಹಾಗೂ ಮಡಿಕೇರಿಯ ಅನಿತಾ (32) ಬಂಧಿತ ಆರೋಪಿಗಳು. ಇವರುಗಳಿಂದ ಡಿವಿಡಿ, ಮೊಬೈಲ್ ಹಾಗೂ ಕಾರು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಹಿನ್ನೆಲೆ: ಕೇರಳ ಮೂಲದ ಆಭರಣ ವ್ಯಾಪಾರಿ ಟಿ.ವಿ.ನಿರಝಾರ್ ಎಂಬುವರು ಕೆಲಸದ ನಿಮಿತ್ತ ನಗರಕ್ಕಾಗಮಿಸಿ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು. ನಿರಝಾರ್ ಊರಿನವರೇ ಆಗಿದ್ದರಿಂದ ನೌಶಾದ್ ಹಾಗೂ ಶಾಯಿದ್‌ರಿಗೆ ಚಿನ್ನದ ವ್ಯಾಪಾರಿಯ ಹಿನ್ನೆಲೆ ತಿಳಿದಿದ್ದರು. ಹೀಗಾಗಿ ಚಿನ್ನದ ವ್ಯಾಪಾರಿಯನ್ನು ಹನಿಟ್ರ್ಯಾಪ್ ಮಾಡಲು ತೀರ್ಮಾನಿಸಿದ ಆರೋಪಿಗಳು ಸಂಚು ರೂಪಿಸಿದ್ದರು. ಇದಕ್ಕಾಗಿ ಮತ್ತೂಬ್ಬ ಹೀನಾ ಹಾಗೂ ಅನಿತಾಳನ್ನು
ಬಳಸಿಕೊಂಡ ಆರೋಪಿಗಳು, ಆರಂಭದಲ್ಲಿ ನಿರಝಾರ್ ಅವರಿಗೆ ಅಪರಿಚಿತರಂತೆ ದೂರವಾಣಿ ಕರೆಮಾಡಿ, ಸ್ನೇಹ ಬೆಳಸಿಕೊಳ್ಳುತ್ತಾರೆ. ಇದಾದ ಬಳಿಕ ತಮ್ಮೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ನಿರಝಾರ್‌ರನ್ನು ಪ್ರೇರೇಪಿಸಿದ ಅನಿತಾ ಹಾಗೂ ಹೀನಾ, ಪೂರ್ವ ನಿಯೋಜನೆಯಂತೆ ಈ ಎಲ್ಲಾ ದೃಶ್ಯಾವಳಿಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು, ಈ ದೃಶ್ಯಾವಳಿಗಳ ಡಿವಿಡಿ ಮಾಡಿಕೊಂಡಿದ್ದಾರೆ.
ನಂತರ ಇದನ್ನು ನಿರಝಾರ್‌ಗೆ ತೋರಿಸಿ 25 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದಲ್ಲಿ ಟಿವಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದಾಗಿ ಮೊಬೈಲ್ ಮೂಲಕ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆವೊಡ್ಡಿದ್ದ ಆರೋಪಿಗಳು, ಕಳೆದ ಕೆಲವು ದಿನಗಳಿಂದ ಹಣ ನೀಡುವಂತೆ ಮೇಲಿಂದ ಮೇಲೆ ಕರೆ ಮಾಡುತ್ತಿದ್ದರು.
ಹೀಗಾಗಿ ಆರೋಪಿಗಳ ಕಿರುಕುಳದಿಂದ ಆತಂಕಗೊಂಡ ನಿರಝಾರ್, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ತೀವ್ರತೆಯನ್ನು ಅರಿತ ಪೊಲೀಸರು, ಇದನ್ನು ಸಿಸಿಬಿ ತನಿಖೆಗೆ ವಹಿಸಿದ್ದರು. ಇದಕ್ಕಾಗಿ ವಿಶೇಷ ತಂಡವನ್ನು ರಚಿಸಿಕೊಂಡ ಸಿಸಿಬಿ ಪೊಲೀಸರು, ಮಾ.9ರಂದು ನಗರದ ಹೈವೇ ವೃತ್ತದ ಸಮೀಪದಲ್ಲಿರುವ ಹೋಟೆಲ್ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರ ವಿಚಾರಣೆ ನಡೆಸಿದ ಸಂದರ್ಭ, ಆರೋಪಿಗಳ ವಿರುದ್ಧ ಈ ಹಿಂದೆಯೇ ಕೇರಳ ಮತ್ತು ಬೆಂಗಳೂರಿನಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದು ಗೊತ್ತಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಡಾ.ಎಚ್.ಟಿ.ಶೇಖರ್, ಎನ್.ರುದ್ರಮುನಿ, ಸಿಸಿಬಿ ಎಸಿಬಿ ಸಿ.ಗೋಪಾಲ್, ಇನ್ಸ್‌ಪೆಕ್ಟರ್‌ಗಳಾದ ಕೆ.ಸಿ.ಪ್ರಕಾಶ್, ಪ್ರಸನ್ನಕುಮಾರ್, ಪಿಎಸ್‌ಐ ಎಂ.ಜೆ.ಜಯಶೀಲನ್ ಇನ್ನಿತರರು ಹಾಜರಿದ್ದರು.