Advertisement

ಅಕ್ಕಿ ಸಿಗದೆ 6 ತಿಂಗಳು: ಸಮರ್ಪಕ ಉತ್ತರ ಇಲ್ಲ; ಎಪಿಎಲ್‌ ಕಾರ್ಡ್‌ದಾರರ ಆಕ್ರೋಶ

01:21 AM Feb 23, 2023 | Team Udayavani |

ಉಡುಪಿ: ಎಪಿಎಲ್‌ ಕಾರ್ಡ್‌ದಾರರಿಗೆ ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ಅಕ್ಕಿ ಸಿಗದೆ ಆರು ತಿಂಗಳಾಗಿದೆ. ಸೆಪ್ಟಂಬರ್‌ ತಿಂಗಳಲ್ಲಿ ಆರಂಭವಾಗಿರುವ ಸಮಸ್ಯೆ ಇನ್ನೂ ಬಗೆಹರಿದಿಲ್ಲ.

Advertisement

ಎಪಿಎಲ್‌ ಕಾರ್ಡ್‌ದಾರರಿಗೆ ಅಕ್ಕಿ ಪೂರೈಸುವ ಬಗ್ಗೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ರಾಜ್ಯಕ್ಕೆ ಮನವಿ ಸಲ್ಲಿಸಿದ್ದರೂ ಅಕ್ಕಿ ಮಾತ್ರ ಬಂದಿಲ್ಲ. ಅಕ್ಕಿ ಬೇಕು ಎಂದು ಮನವಿ ಸಲ್ಲಿಸಿದ ಏಕವ್ಯಕ್ತಿ ಎಪಿಎಲ್‌ ಕಾರ್ಡ್‌ಗೆ ತಿಂಗಳಿಗೆ 5 ಕೆ.ಜಿ. ಹಾಗೂ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿರುವ ಕಾರ್ಡ್‌ಗೆ ಗರಿಷ್ಠ 10 ಕೆ.ಜಿ. ಅಕ್ಕಿಯನ್ನು ಪ್ರತಿ ಕೆ.ಜಿ.ಗೆ 15 ರೂ.ಗಳಂತೆ ನೀಡಲಾಗುತ್ತಿತ್ತು.

ಮಾಹಿತಿ ಸಂಗ್ರಹ
ಜಿಲ್ಲೆಗಳ ಎಪಿಎಲ್‌ ಕಾರ್ಡ್‌ದಾರರಿಗೆ ನೀಡಲು ಎಷ್ಟು ಅಕ್ಕಿ ಅಗತ್ಯವಿದೆ ಎಂಬುದರ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ಎಷ್ಟು ಅಕ್ಕಿ ಅಗತ್ಯವಿದೆ ಎಂಬುದರ ಇನ್‌ಡೆಂಟ್‌ ಅನ್ನು ಜಿಲ್ಲಾಮಟ್ಟದಿಂದ ರಾಜ್ಯಕ್ಕೆ ಸಲ್ಲಿಸಲಾಗಿದೆ.

ಸಮರ್ಪಕ ಮಾಹಿತಿ ಇಲ್ಲ
ಯಾಕೆ ಅಕ್ಕಿ ನೀಡುತ್ತಿಲ್ಲ ಎಂಬುದಕ್ಕೆ ಯಾರೂ ಸರಿಯಾದ ಮಾಹಿತಿಯನ್ನು ಎಪಿಎಲ್‌ ಕಾರ್ಡ್‌ ದಾರರಿಗೆ ನೀಡುತ್ತಿಲ್ಲ. ಕೇಂದ್ರ ಕಚೇರಿಯಿಂದ ಅಕ್ಕಿ ಬರುತ್ತಿಲ್ಲ. ಹೀಗಾಗಿ ಹಂಚಿಕೆ ಮಾಡಲು ಸಾಧ್ಯ ವಾಗುತ್ತಿಲ್ಲ ಎಂದಷ್ಟೇ ಹೇಳುತ್ತಿದ್ದಾರೆ.

ಅಕ್ಕಿ ಎತ್ತುವಳಿ ಬಗ್ಗೆ ಇಲಾಖೆಯಿಂದ ಯಾವುದೇ ಮಾಹಿತಿಯು ಜಿಲ್ಲಾ ಕೇಂದ್ರಕ್ಕೆ ಈವರೆಗೂ ಬಂದಿಲ್ಲ. ಅಧಿಕೃತ ಆದೇಶ ಬಂದ ಬಳಿಕವೇ ಹಂಚಿಕೆ ಸಾಧ್ಯ ಎನ್ನುತ್ತಾರೆ ಅಧಿಕಾರಿಗಳು.

Advertisement

ಇತರ ಯೋಜನೆಗೆ ಬಳಕೆ ಆರೋಪ
ಎಪಿಎಲ್‌ ಕಾರ್ಡ್‌ದಾರರಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದ ಅಕ್ಕಿಯನ್ನು ಸರಕಾರ ಬೇರೆ ಯೋಜನೆಗೆ ಬಳಸಿಕೊಳ್ಳುತ್ತಿದೆ ಎಂಬ ಆರೋಪವೂ ಇದೆ. ಈ ಹಿಂದೆ ಎಪಿಎಲ್‌ ಕಾರ್ಡ್‌ದಾರರಲ್ಲಿ ಅನೇಕರು ಅಕ್ಕಿಗೆ ಮನವಿ ಸಲ್ಲಿಸಿಯೂ ಪಡೆಯದೆ ಇರುವುದರಿಂದ ಕೆಲವು ಜಿಲ್ಲೆಗಳಲ್ಲಿ ಅಕ್ಕಿ ವಾಪಸ್‌ ಹೋಗಿರುವ ಹಿನ್ನೆಲೆಯಲ್ಲಿ ಹೊಸ ಕಾರ್ಡ್‌ದಾರರಿಗೆ ಅಕ್ಕಿ ಹಂಚಿಕೆ ಮಾಡುತ್ತಿಲ್ಲ. ಇದರಿಂದ ಈ ಹಿಂದೆ ಅಕ್ಕಿ ಪಡೆಯುತ್ತಿದ್ದವರಿಗೂ ಅನ್ಯಾಯವಾಗುತ್ತಿದೆ.

ಚುನಾವಣೆ ಹೊತ್ತಲ್ಲಿ ನಿರೀಕ್ಷೆ
ರಾಜ್ಯದಲ್ಲಿ 1.51 ಕೋಟಿ ಪಡಿತರ ಕಾರ್ಡ್‌ ಇದ್ದು, ಅದರಲ್ಲಿ 24 ಲಕ್ಷ ಎಪಿಎಲ್‌ ಕಾರ್ಡ್‌ಗಳಿಗೆ ಅಕ್ಕಿ ನೀಡಿದೆ ಇರುವುದು ಚುನಾವಣೆಯಲ್ಲಿ ಪ್ರಮುಖ ವಿಷಯವಾಗುವ ಸಾಧ್ಯತೆ ಇದೆ. ಎಪ್ರಿಲ್‌ ಅಥವಾ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವುದರಿಂದ ಎಪಿಎಲ್‌ ಕಾರ್ಡ್‌ದಾರರಿಗೆ ಮಾರ್ಚ್‌ ತಿಂಗಳಿನಿಂದ ಅಕ್ಕಿ ವಿತರಣೆಯಾಗಬಹುದು ಎಂಬ ನಿರೀಕ್ಷೆ ಇದೆ.

ಎಪಿಎಲ್‌ ಕಾರ್ಡ್‌ದಾರರಿಗೆ ನೀಡಲು ಜಿಲ್ಲೆಗೆ ಎಷ್ಟು ಅಕ್ಕಿ ಅಗತ್ಯವಿದೆ ಎಂಬುದರ ಮಾಹಿತಿಯನ್ನು ಜಿಲ್ಲಾ ಮಟ್ಟದಿಂದ ಸರಕಾರ ಕೇಳಿದ್ದು, ಅದನ್ನು ನೀಡಲಾಗಿದೆ. ಶೀಘ್ರವೇ ಸಮಸ್ಯೆ ಇತ್ಯರ್ಥವಾಗುವ ನಿರೀಕ್ಷೆಯಿದೆ.
– ಎನ್‌. ಮಾಣಿಕ್ಯ, ಉಪ ನಿರ್ದೇಶಕರು, ಆಹಾರ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next