Advertisement

ಸವಾಲು, ಸಂಘರ್ಷದ ಮಧ್ಯೆ ಉತ್ತಮ ಆಡಳಿತದ ಭರವಸೆ ಬಿತ್ತನೆ

11:54 PM Jan 27, 2022 | Team Udayavani |

ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆಯೇ ಅಧಿಕಾರಕ್ಕೇರಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಶುಕ್ರವಾರಕ್ಕೆ ಆರು ತಿಂಗಳುಗಳನ್ನು ಯಶಸ್ವಿಯಾಗಿ ಪೂರೈಸಿದೆ. ಸರಕಾರ ಆರಂಭವಾದ ದಿನದಿಂದಲೂ ಪ್ರಾಕೃತಿಕ ಮತ್ತು ರಾಜಕೀಯ ಸವಾಲು ಗಳನ್ನು ಎದುರಿಸಿರುವ ಮುಖ್ಯಮಂತ್ರಿ ಬೊಮ್ಮಾಯಿ ಇನ್ನು ಒಂದೂವರೆ ವರ್ಷದಲ್ಲಿ ಎದುರಾಗಲಿರುವ  ಚುನಾವಣೆಗೂ ಸಿದ್ಧರಾಗಬೇಕಿರುವುದು ವಿಶೇಷ.

Advertisement

ಆರು ತಿಂಗಳ ಹಿಂದೆ ಬಿ.ಎಸ್‌.ವೈ. ಸಿಎಂ ಸ್ಥಾನದಿಂದ ಕೆಳಗಿಳಿದಾಗ ಪಕ್ಷದ ದಿಲ್ಲಿ ವರಿಷ್ಠರು, ಬಿಜೆಪಿ ಶಾಸಕರು ಸರ್ವಸಮ್ಮತವಾಗಿ ಬಸವರಾಜ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿದ್ದರು. ಬೊಮ್ಮಾಯಿ ಅವರು ಯಡಿಯೂರಪ್ಪ ಆಯ್ಕೆ ಎಂದು ಬಿಂಬಿತರಾಗಿದ್ದರೂ ಅವರ ಆರು ತಿಂಗಳ ಅಧಿಕಾರ ಹೂವಿನ ಹಾದಿಯೇನೂ ಆಗಿರಲಿಲ್ಲ. ಏಕಾಂಗಿಯಾಗಿ ಅಧಿಕಾರ ವಹಿಸಿಕೊಂಡ ಬಸವರಾಜ ಬೊಮ್ಮಾಯಿ ಅವರು ಅಬ್ಬರದ ಆಡಳಿತಕ್ಕೆ ಮುಂದಾಗದೆ ತಮ್ಮದೇ ಆದ ಛಾಪು ಮೂಡಿಸುವ ನಿಟ್ಟಿನಲ್ಲಿ ರೈತರ ಮಕ್ಕಳಿಗಾಗಿ ಮುಖ್ಯಮಂತ್ರಿ ವಿದ್ಯಾನಿಧಿ ಯೋಜನೆ ಹಾಗೂ ಸಾಮಾಜಿಕ ಭದ್ರತೆ ಯೋಜನೆ ಅಡಿಯಲ್ಲಿ ಪಿಂಚಣಿ ಹೆಚ್ಚಳ ಮಾಡಿ ತಮ್ಮ ಆಡಳಿತ ಹಾಗೂ ಅಭಿವೃದ್ಧಿಯ ಗುರಿ ಯಾವ ಕಡೆಗೆ ಇರುತ್ತದೆ ಎನ್ನುವ ಮುನ್ಸೂಚನೆ ನೀಡಿದರು.

ಮುಖ್ಯಮಂತ್ರಿ ಅವರಿಗಿರುವ ಪ್ರೊಟೋ ಕಾಲ್‌ ಬದಿಗೊತ್ತಿ ತಾವೂ ಸಾಮಾನ್ಯ ರೊಳಗೆ ಒಬ್ಬರು ಎಂಬ ಸಂದೇಶ ಸಾರುವ ಪ್ರಯತ್ನವನ್ನು ಬಸವರಾಜ ಬೊಮ್ಮಾಯಿ ಮಾಡಿದರು. ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳುಗಳಲ್ಲಿ ನಾಯಕತ್ವ ಬದಲಾವಣೆಯ ಗಾಳಿ ಸುದ್ದಿಗೆ ಆಹಾರ ವಾದರು.

5 ಸವಾಲುಗಳು :

1.ಸಂಪುಟ ವಿಸ್ತರಣೆ ವೇಳೆ  ಕೆಲವರಿಂದ ಇಂಥದ್ದೇ ಸಚಿವ ಸ್ಥಾನ ಬೇಕು ಎಂಬ ಪಟ್ಟು

  1. ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಪ್ರವಾಹ
Advertisement

3.ಕೊರೊನಾ ಮೂರನೇ ಅಲೆಯ ಸಂಕಷ್ಟ

4.ನಾಯಕತ್ವ ಬದಲಾವಣೆಯ ಮಾತುಗಳು, ಇದನ್ನು ಬಗೆ ಹರಿಸುವ ಸವಾಲು

5.ಬಿಟ್‌ ಕಾಯಿನ್‌ ಕುರಿತ ಎದ್ದ ಗಾಳಿಸುದ್ದಿಗಳು

5 ಯಶಸ್ಸುಗಳು:

1.ಪ್ರಾಕೃತಿಕ ವಿಕೋಪ,  ಸಂಪುಟ ಸಂಕಷ್ಟ  ಯಶಸ್ವಿಯಾಗಿ ನಿಭಾವಣೆ

2.ಕೊರೊನಾ 3ನೇ ಅಲೆ  ಎದುರಿಸುವಲ್ಲಿ ಅಗತ್ಯ ಮುಂಜಾಗ್ರತೆ

  1. ರೈತರ ಮಕ್ಕಳಿಗೆ ವಿದ್ಯಾನಿಧಿ, ಅಮೃತ ಯೋಜನೆಗಳು

4.ಮುಂಬಯಿ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕವೆಂದು ಮರು ನಾಮಕರಣ

5.ಶಾಲಾ ಕಾಲೇಜುಗಳಲ್ಲಿ ರಾಯಣ್ಣ ಭಾವಚಿತ್ರ

ಸಿದ್ದಾಂತಕ್ಕೆ ಬದ್ಧವಾದ ನಿರ್ಧಾರಗಳು :

ಬೊಮ್ಮಾಯಿಯವರು ಜನತಾ ಪರಿವಾರದ ಮೂಲದವರಾಗಿದ್ದು, ಆರೆಸ್ಸೆಸ್‌ ಸಿದ್ಧಾಂತವನ್ನು ಬಲವಾಗಿ ಪ್ರದರ್ಶನ ಮಾಡುವುದು ಅನುಮಾನ ಎಂಬ ಮಾತುಗಳಿಗೆ ಕಿವಿಗೊಡಲಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಸಾರ್ವಜನಿಕ ಸ್ಥಳಗಳಲ್ಲಿರುವ ದೇವಸ್ಥಾನ ತೆರವು ಮಾಡದಂತೆ ತೀರ್ಮಾನ, ಮತಾಂತರ ನಿಷೇಧ ಕಾಯ್ದೆ, ದೇವಸ್ಥಾನಗಳನ್ನು ಮುಜರಾಯಿ ಇಲಾಖೆ ವ್ಯಾಪ್ತಿಯಿಂದ ಕೈಬಿಡುವುದು, ಅಕ್ರಮ ಗೋ ಸಾಗಾಣಿಕೆ ಮಾಡುವವರ ವಿರುದ್ಧ ಗೋರಕ್ಷಕರ ದಾಳಿಯ ಬಗ್ಗೆ ಮೃದುಧೋರಣೆ ಅನುಸರಿಸಿದರು. ಹಾಗೆಯೇ ಬೆಳಗಾವಿ ಸುವರ್ಣ ಸೌಧದ ಎದುರು ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ನಿರ್ಮಾಣ ಮಾಡುವಂತಹ ರಾಜಕೀಯ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

ಚುನಾವಣೆ ಫ‌ಲಿತಾಂಶ :

ಬೊಮ್ಮಾಯಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ನಡೆದ ಉಪ ಚುನಾವಣೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹಾಗೂ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಹೇಳಿಕೊಳ್ಳುವಂಥ ಸಾಧನೆ ಮಾಡಲಿಲ್ಲ. ಆದರೂ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಸವಾಲು ಮತ್ತು ಸಂಘರ್ಷಗಳ ನಡುವೆಯೇ ಈ ಸೋಲಿನ ನೋವನ್ನು ಆಡಳಿತದ ಮೂಲಕ ಮುಚ್ಚಿಡಲು ಪ್ರಯತ್ನಿಸಿದರು.

-ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next