ರಾಜಸ್ಥಾನ: ರಾಜಸ್ಥಾನದ ಉದಯಪುರದಲ್ಲಿ ಸೋಮವಾರ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.
ಗೋಗುಂದ ಪಟ್ಟಣದಲ್ಲಿರುವ ಮನೆಯೊಂದರಲ್ಲಿ ದಂಪತಿ ಮತ್ತು ಅವರ ನಾಲ್ವರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ.
ಮೃತರನ್ನು ಪ್ರಕಾಶ್ ಗಮೇತಿ, ಅವರ ಪತ್ನಿ ದುರ್ಗಾ ಗಮೇತಿ (27) ಮತ್ತು ಅವರ ನಾಲ್ವರು ಅಪ್ರಾಪ್ತ ಮಕ್ಕಳು ಎಂದು ಗುರುತಿಸಲಾಗಿದೆ.
ಮಹಿಳೆ ಮತ್ತು ಮಗುವಿನ ಮೈಯಲ್ಲಿ ಗಾಯದ ಗುರುತುಗಳೊಂದಿಗೆ ನೆಲದ ಮೇಲೆ ಬಿದ್ದಿರುವುದು ಕಂಡುಬಂದರೆ, ಉಳಿದವರು ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
Related Articles
ಪ್ರಕಾಶ್ ಅವರ ಮನೆಯ ಪಕ್ಕದಲ್ಲೇ ಅವರ ಇಬ್ಬರು ಸಹೋದರರ ಮನೆಯಿದ್ದು, ಬೆಳಕಾದರೂ ಮನೆಯವರು ಗೇಟ್ ತೆರೆದಿರಲಿಲ್ಲ, ಈ ವೇಳೆ ಸಹೋದರ ಮನೆ ಬಳಿ ಹೋಗಿ ಕರೆದಿದ್ದಾರೆ ಆದರೆ ಯಾವುದೇ ಪ್ರತಿಕ್ರಿಯೆ ಬರದೇ ಇದ್ದಾಗ ಕಿಟಕಿಯ ಮೂಲಕ ಒಳಗೆ ನೋಡಿದಾಗ ಮನೆಮಂದಿ ನೇಣು ಬಿಗಿದ ಸ್ಥಿತಿಯಲ್ಲಿದ್ದರು. ಕೂಡಲೇ ಸಹೋದರ ಉದಯಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಹೆಚ್ಚುವರಿ ಎಸ್ಪಿ ಕುಂದನ್ ಕನ್ವಾರಿಯಾ ಪ್ರಕಾರ, ಪ್ರಕಾಶ್ ಗುಜರಾತ್‌ನ ಬಸ್‌ಗಳಲ್ಲಿ ಆಹಾರವನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು. ಮೇಲ್ನೋಟಕ್ಕೆ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಎಂದು ತೋರುತ್ತದೆ ಎಂದು ಅಧಿಕಾರಿ ಹೇಳಿದರು.
ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ತಿಳಿದುಬರಬೇಕಾಗಿದೆ.