ಹೊಸದಿಲ್ಲಿ: ಸಾಮಾನ್ಯವಾಗಿ ಸುದೀರ್ಘ ಪಂದ್ಯಾವಳಿ ಅಥವಾ ಲೀಗ್ ನಡುವೆ ಆಟಗಾರರು ನಾನಾ ಕಾರಣದಿಂದ ಬೇರ್ಪಡುವುದಿದೆ. ಇದರಲ್ಲಿ ಮುಖ್ಯವಾದುದು ಗಾಯದ ಸಮಸ್ಯೆ. ಆದರೆ ಈ ಬಾರಿಯ ಐಪಿಎಲ್ ಇದಕ್ಕೆ ವ್ಯತಿರಿಕ್ತವಾದಂತಿದೆ. ಈ ಕ್ಯಾಶ್ ರಿಚ್ ಲೀಗ್ ಆರಂಭವಾಗುವ ಮೊದಲೇ 6 ಮಂದಿ ಆಟಗಾರರು ದೂರ ಸರಿದಿದ್ದಾರೆ. ಸದ್ಯ ನಾಲ್ವರಷ್ಟೇ ಬದಲಿ ಆಟಗಾರರಾಗಿ ಆಯ್ಕೆಯಾಗಿದ್ದಾರೆ.
ಜಾನಿ ಬೇರ್‌ಸ್ಟೊ, ವಿಲ್ ಜಾಕ್ಸ್, ಕೈಲ್ ಜೇಮಿಸನ್, ಪ್ರಸಿದ್ಧ್ ಕೃಷ್ಣ, ಶ್ರೇಯಸ್ ಅಯ್ಯರ್, ಜೇ ರಿಚರ್ಡ್‌ಸನ್ ಬೇರ್ಪಟ್ಟವರಲ್ಲಿ ಪ್ರಮುಖರು. ಉಳಿದಂತೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಜಸ್‌ಪ್ರೀತ್ ಬುಮ್ರಾ, ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್ ಹೊರಗುಳಿಯುವುದು ಅನಿವಾರ್ಯವಾಗಿತ್ತು.
* ವಿಲ್ ಜಾಕ್ಸ್
ಇಂಗ್ಲೆಂಡ್ ಆಲ್‌ರೌಂಡರ್ ವಿಲ್ ಜಾಕ್ಸ್ ಆರ್‌ಸಿಬಿ ತಂಡದ ಸದಸ್ಯ. ಅವರು ಗಾಯದ ಕಾರಣದಿಂದ ಹಿಂದೆ ಸರಿದಿದ್ದಾರೆ. ಬದಲಿ ಆಟಗಾರನಾಗಿ ಸ್ಥಾನ ಪಡೆದವರು ನ್ಯೂಜಿಲ್ಯಾಂಡ್ ಸವ್ಯಸಾಚಿ ಮೈಕಲ್ ಬ್ರೇಸ್‌ವೆಲ್.
* ಜಾನಿ ಬೇರ್‌ಸ್ಟೊ
ಪಂಜಾಬ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ, ವಿಕೆಟ್ ಕೀಪರ್ ಜಾನಿ ಬೇರ್‌ಸ್ಟೊ ಹಿಂದಡಿ ಇಡಲು ಮುಖ್ಯ ಕಾರಣ ಫಿಟ್‌ನೆಸ್ ಸಮಸ್ಯೆ. ಇವರ ಬದಲು ಆಸ್ಟ್ರೇಲಿಯದ ಮ್ಯಾಥ್ಯೂ ಶಾರ್ಟ್ ಆಯ್ಕೆಯಾಗಿದ್ದಾರೆ.
Related Articles
* ಕೈಲ್ ಜೇಮಿಸನ್
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನ್ಯೂಜಿಲ್ಯಾಂಡ್ ವೇಗಿ ಕೈಲ್ ಜೇಮಿಸನ್ ಈ ಋತುವಿನಲ್ಲಿ ಆಡುವುದಿಲ್ಲ. ಇವರ ಸ್ಥಾನಕ್ಕೆ ಆಯ್ಕೆಯಾದವರು ದಕ್ಷಿಣ ಆಫ್ರಿಕಾದ ಸಿಸಂಡ ಎಮ್‌ಗಾಲ.
* ಪ್ರಸಿದ್ಧ್ ಕೃಷ್ಣ
ಕರ್ನಾಟಕದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿರುವ ಪ್ರಸಿದ್ಧ್ ಕೃಷ್ಣ ರಾಜಸ್ಥಾನ್ ರಾಯಲ್ಸ್ ಪರ ಆಡಬೇಕಿತ್ತು. ಆದರೆ ಗಾಯಾಳಾದ ಕಾರಣ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ಇವರ ಬದಲು ಸಂದೀಪ್ ಶರ್ಮ ಅವರನ್ನು ಆರಿಸಲಾಗಿದೆ.
* ಜೇ ರಿಚರ್ಡ್‌ಸನ್
ಮುಂಬೈ ಇಂಡಿಯನ್ಸ್ ತಂಡದ ಆಸ್ಟ್ರೇಲಿಯದ ವೇಗಿ ಜೇ ರಿಚರ್ಡ್‌ಸನ್ ಕೂಡ ಈ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಹೀಗಾಗಿ ಮುಂಬೈನ ವೇಗದ ಬೌಲಿಂಗ್ ವಿಭಾಗ ಅವಳಿ ಆಘಾತಕ್ಕೆ ಸಿಲುಕಿದೆ. ಬುಮ್ರಾ ಕೂಡ ಇಲ್ಲದಿರುವುದು ದೊಡ್ಡ ಹಿನ್ನಡೆ. ರಿಚರ್ಡ್‌ಸನ್ ಬದಲು ಯಾರು ಎಂಬುದಿನ್ನೂ ಖಾತ್ರಿಯಾಗಿಲ್ಲ.
* ಶ್ರೇಯಸ್ ಅಯ್ಯರ್
ಕೆಕೆಆರ್ ತಂಡವನ್ನು ಮುನ್ನಡೆಸಬೇಕಿದ್ದ ಶ್ರೇಯಸ್ ಅಯ್ಯರ್ ಬೆನ್ನುನೋವಿನಿಂದಾಗಿ ಐಪಿಎಲ್‌ನಿಂದ ಬೇರ್ಪಟ್ಟಿದ್ದಾರೆ. ಇವರ ಬದಲು ನಿತೀಶ್ ರಾಣಾ ಅವರಿಗೆ ನಾಯಕತ್ವ ವಹಿಸಲಾಗಿದೆ. ಅಯ್ಯರ್ ಚೇತರಿಸಿಕೊಂಡರೆ ದ್ವಿತೀಯಾರ್ಧದಲ್ಲಿ ಆಡಲಿಳಿಯಬಹುದು.