ಮುಂಬಯಿ: ಕೌಟುಂಬಿಕ ಕಲಹದಿಂದಾಗಿ ತಾಯಿ ತನ್ನ ಆರು ಮಂದಿ ಮಕ್ಕಳನ್ನು ಬಾವಿಗೆ ಎಸೆದು ಹತ್ಯೆಗೈದಿರುವ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ಮಹಾಡ್ ತಾಲೂಕಿನ ರಾಯ್ ಗಡ್ ನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ವಿಚ್ಛೇದಿತ ದಂಪತಿ ಮತ್ತು ಮಕ್ಕಳ 10 ದಿನದ ನೇಪಾಳ ಪ್ರವಾಸ ದುರಂತದಲ್ಲಿ ಅಂತ್ಯ!
ಘಟನೆ ನಂತರ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ಮಕ್ಕಳು ನಾಪತ್ತೆಯಾಗಿರುವುದಾಗಿ ದೂರು ನೀಡಿದ್ದಳು. ಆದರೆ ತನಿಖೆಯಲ್ಲಿ ಸ್ವತಃ ತಾಯಿಯೇ ಆರು ಮಕ್ಕಳನ್ನು ಕೊಂದಿರುವ ಘಟನೆ ಬೆಳಕಿಗೆ ಬಂದಿರುವುದಾಗಿ ಪೊಲೀಸರು ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.
ಮಹಿಳೆಯನ್ನು ರುನಾ ಸಹಾನಿ (35ವರ್ಷ) ಎಂದು ಗುರುತಿಸಲಾಗಿದ್ದು, ಈಕೆ ಉತ್ತರಪ್ರದೇಶದ ನಿವಾಸಿಯಾಗಿದ್ದು, ಮಹಾಡ್ ನಲ್ಲಿ ವಾಸವಾಗಿದ್ದಾಳೆ. ಈಕೆಯ ಪತಿ ಮೇಸ್ತ್ರಿ ಕೆಲಸ ಮಾಡುತ್ತಿರುವುದಾಗಿ ವರದಿ ತಿಳಿಸಿದೆ.
ಸೋಮವಾರ ಮಧ್ಯಾಹ್ನ ರುನಾ, ತನ್ನ ಐವರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವನ್ನು ಬಾವಿಗೆ ಎಸೆದಿದ್ದಳು. ಮೃತಪಟ್ಟ ಆರು ಮಕ್ಕಳೂ ಹತ್ತು ವರ್ಷದ ಒಳಗಿನವರಾಗಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಎಲ್ಲಾ ಶವಗಳನ್ನು ಬಾವಿಗೆ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ರುನಾ ಸಹಾನಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.