Advertisement

ಹಿರೇಹಳ್ಳಕ್ಕೆ 6 ಸೇತುವೆ ಮಂಜೂರು

02:55 PM Oct 01, 2019 | Team Udayavani |

ಕೊಪ್ಪಳ: ಜಿಲ್ಲೆಯಲ್ಲಿನ ಬರದ ಸ್ಥಿತಿ ಹೋಗಲಾಡಿಸಲು ಪಣ ತೊಟ್ಟಿದ್ದ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಅವರ ಕನಸು ನನಸು ಮಾಡಲು ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. 26ಕಿಮೀ ಉದ್ದದ ಹಿರೇಹಳ್ಳದಲ್ಲಿ ಪ್ರತಿ 2-3 ಕಿಮೀ ಅಂತರದಲ್ಲಿ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಿಸಲು ಪ್ರಸ್ತುತ 6 ಸೇತುವೆಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ಜಿಲ್ಲೆಯು ಪದೇ ಪದೆ ಬರಕ್ಕೆ ತುತ್ತಾಗುತ್ತಿದೆ. ತುಂಗಭದ್ರೆ ಪಕ್ಕದಲ್ಲೇ ಇದ್ದರೂ ಜಿಲ್ಲೆಯ ಜನತೆ ನೀರಿನ ಬವಣೆ ತಪ್ಪಿಲ್ಲ. ಒಣ ಬೇಸಾಯದ ಭೂಮಿಯ ರೈತರಿಗೆ ಮಳೆರಾಯ ಆಸರೆಯಾಗಬೇಕಿದೆ.

Advertisement

ಇಂತಹ ಕ್ಲಿಷ್ಟಕರ ಪರಿಸ್ಥಿತಿ ಅರಿತ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಕಳೆದ ಫೆಬ್ರುವರಿಯಲ್ಲಿ ತಾಲೂಕಿನಲ್ಲಿನ 26 ಕಿಮೀ ಉದ್ದದ ಹಿರೇಹಳ್ಳ ಸ್ವಚ್ಛಹಳ್ಳದ ತಟದಲ್ಲಿ ನೀರು ನಿಂತರೆ ಅಂತರ್ಜಲ ಹೆಚ್ಚಳವಾಗಿ ರೈತರ ಪಂಪ್‌ಸೆಟ್‌ಗಳಲ್ಲಿ ನೀರು ಬರಲಿದೆ. ಇದರಿಂದ ಅವರ ಜೀವನ ಬೆಳಕಾಗಲಿದೆ ಎಂದು ಆಲೋಚಿಸಿ, ಬರ ನಿವಾರಣೆಗೆ ಜಲಮೂಲಗಳನ್ನು ರಕ್ಷಣೆ ಮಾಡುವುದೊಂದೇ ಮಾರ್ಗವೆಂದು ನಿರ್ಧರಿಸಿ ಮಾರ್ಚ್‌ ಮೊದಲ ದಿನ ಇಲ್ಲಿನ ಜನಪ್ರತಿನಿಧಿಗಳ, ಅಧಿಕಾರಿ, ರೈತ ಮಿತ್ರರು ಸೇರಿದಂತೆ ಸರ್ವ ಸಮೂಹದ ಸಹಭಾಗಿತ್ವದಲ್ಲಿ 26 ಕಿಮೀ ಹಳ್ಳದಲ್ಲಿ ವರ್ಷಗಳ ಕಾಲ ಹುದುಗಿದ್ದ ತ್ಯಾಜ್ಯ, ಹೂಳು, ಕೊಳಚೆ ಸೇರಿ ಗಿಡಗಂಟೆಗಳನ್ನು ಜೆಸಿಬಿಗಳ ಮೂಲಕ ತೆರವುಗೊಳಿಸಿ ಹಳ್ಳದ ಎರಡೂ ಬದಿಯಲ್ಲಿ ಬಂಡ್‌ ಹಾಕಿಸಿದ್ದರು.

ಈಗಾಗಲೆ ಹಿರೇಹಳ್ಳದಲ್ಲಿ ಕೋಳೂರು, ಬೂದಿಹಾಳ ಹಾಗೂ ಡೊಂಬರಹಳ್ಳಿ ಬಳಿ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಿಸಲಾಗಿದ್ದು, ಮಳೆಗಾಲ ಸಂದರ್ಭದಲ್ಲಿ ನೀರು ನಿಂತು ಸುತ್ತಲಿನ ಸಾವಿರಾರು ಎಕರೆ ಪ್ರದೇಶ ರೈತರಿಗೆ ಆಸರೆಯಾಗುತ್ತಿರುವುದನ್ನು ಅರಿತು ಹಳ್ಳದಲ್ಲಿ ಪ್ರತಿ 2-3 ಕಿಮೀ ಅಂತರದಲ್ಲಿ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಾಣಕ್ಕೆ ಗವಿಶ್ರೀಗಳು ಕನಸು ಕಂಡಿದ್ದರು. ಅವರ ಕನಸಿಗೆ ಶಾಸಕ-ಸಂಸದರು ಸೇರಿದಂತೆ ಸರ್ಕಾರ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದೆ. ಹಳ್ಳದಲ್ಲಿ 6 ಸೇತುವೆ ನಿರ್ಮಾಣಕ್ಕೆ ಸಮ್ಮತಿಸಿದೆ.

ಎಲೆಲ್ಲಿ ಸೇತುವೆ ನಿರ್ಮಾಣ? :  ಹಿರೇಹಳ್ಳಕ್ಕೆ ಈಗಾಗಲೆ ಮೂರು ಕಡೆ ಬ್ರಿಜ್ಡ್ ಕಂ ಬ್ಯಾರೇಜ್‌ ನಿರ್ಮಿಸಲಾಗಿದೆ. ಪ್ರಸ್ತುತ ಚಿಕ್ಕ ಸಿಂದೋಗಿ-ಹಿರೇ ಸಿಂದೋಗಿ ಮಧ್ಯೆ, ಕಾಟ್ರಳ್ಳಿ-ಗುನ್ನಾಳ ಸಮೀಪ, ದದೇಗಲ್‌, ಯತ್ನಟ್ಟಿ-ಓಜಿನಹಳ್ಳಿ ಸಮೀಪ, ಭಾಗ್ಯನಗರ ರೈಲ್ವೆ ಗೇಟ್‌ ಸಮೀಪ, ಮಾದಿನೂರು-ದೇವಲಾಪುರ ಸಮೀಪ ಹೀಗೆ ಒಟ್ಟು ಆರು ಸೇತುವೆಗಳ ನಿರ್ಮಾಣಕ್ಕೆ ಸರ್ಕಾರ ಈಗಾಗಲೆ ತಾಂತ್ರಿಕ ಸಲಹಾ ಸಮಿತಿಯಲ್ಲಿ ಒಪ್ಪಿಗೆ ಸೂಚಿಸಿದೆ.

ಪ್ರತಿ ಸೇತುವೆಗೆ ಎಷ್ಟು ಅನುದಾನ? :  ಒಟ್ಟು 6 ಸೇತುವೆಗಳ ಪೈಕಿ ಹಿರೇ ಸಿಂದೋಗಿ ಸೇತುವೆಗೆ-8.50 ಕೋಟಿ, ಕಾಟ್ರಳ್ಳಿ ಸೇತುವೆಗೆ-9.90 ಕೋಟಿ, ದದೇಗಲ್‌ ಸೇತುವೆಗೆ 8 ಕೋಟಿ, ಯತ್ನಟ್ಟಿ ಸೇತುವೆಗೆ 8.50 ಕೋಟಿ, ಭಾಗ್ಯನಗರ ಸೇತುವೆಗೆ 9.50 ಕೋಟಿ, ದೇವಲಾಪೂರ ಸೇತುವೆಗೆ 9.90 ಕೋಟಿ ರೂ. ಮಂಜೂರಾತಿ ನೀಡಲಾಗಿದೆ. ಆರು ಸೇತುವೆಗೆ ಒಟ್ಟು 56 ಕೋಟಿ ರೂ. ಅನುದಾನ ವೆಚ್ಚವಾಗಲಿದೆ. 6 ಸೇತುವೆಗಳಲ್ಲಿ 4 ಸೇತುವೆಗಳಿಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದರೆ, 2 ಸೇತುವೆಗಳಿಗೆ ತಾಂತ್ರಿಕ ಸಲಹಾ ಸಮಿತಿಯಲ್ಲಿ ಚರ್ಚಿಸಲಾಗಿದ್ದು, ಅನುಮತಿ ಬಹುತೇಕ ಪಕ್ಕಾ ಆಗಿದೆ.

Advertisement

ಡ್ಯಾಂನಿಂದಲೂ ಸೇತುವೆಗೆ ನೀರು ! ಮಳೆ ಬಂದರೆ ಮಾತ್ರ ಹಿರೇ ಹಳ್ಳದ ಸೇತುವೆಗಳು ತುಂಬಿಕೊಳ್ಳಲಿವೆ. ಒಂದು ವೇಳೆ ಮಳೆ ಕೊರತೆಯಾದರೆ ರೈತರು ಪರಿತಪಿಸುವುದನ್ನು ತಪ್ಪಿಸಲು ಸಣ್ಣ ನೀರಾವರಿ ಇಲಾಖೆ ತುಂಗಭದ್ರಾ ಡ್ಯಾಂನಿಂದಲೂ ಸೇತುವೆಗಳಿಗೆ ನೀರು ಹರಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂಬ ಮಾಹಿತಿ ಇಲಾಖೆ ಮೂಲಗಳಿಂದ ಲಭ್ಯವಾಗಿದೆ. ಇದಕ್ಕೊಂದು ಪ್ರತ್ಯೇಕ ಯೋಜನೆ ರೂಪಿಸಲು ಸಿದ್ಧತೆ ನಡೆಸಿದೆಯಂತೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

2335 ಹೆಕ್ಟೇರ್‌ ನೀರಾವರಿ ಸೌಲಭ್ಯ : ಹಿರೇಹಳ್ಳದಲ್ಲಿ ಸರ್ಕಾರದಿಂದ ನಿರ್ಮಿಸಲಿರುವ ಬ್ರಿಜ್‌ ಕಂ ಬ್ಯಾರೇಜ್‌ನಲ್ಲಿ ಹಿರೇ ಸಿಂದೋಗಿ ಬಳಿ ನಿರ್ಮಾಣವಾಗುವ ಸೇತುವೆಯಿಂದ 250 ಹೆಕ್ಟೇರ್‌, ಭಾಗ್ಯನಗರದ ಸೇತುವೆಯಡಿ 250 ಹೆಕ್ಟೇರ್‌, ಯತ್ನಟ್ಟಿ ಸೇತುವೆಯಡಿ 115 ಹೆಕ್ಟೇರ್‌, ದದೇಗಲ್‌ ಸೇತುವೆಯಡಿ 85 ಹೆಕ್ಟೇರ್‌, ಕಾಟ್ರಳ್ಳಿ ಸೇತುವೆಯಡಿ 125 ಹೆಕ್ಟೇರ್‌, ದೇವಲಾಪೂರ ಸೇತುವೆಯಡಿ 120 ಹೆಕ್ಟೇರ್‌ ಸೇರಿ ಒಟ್ಟು 2335 ಹೆಕ್ಟೇರ್‌ ಪ್ರದೇಶ ನೀರಾವರಿ ವ್ಯಾಪ್ತಿಗೆ ಒಳಪಡಲಿದೆ.

ಶ್ರೀಗಳ ಸಂಕಲ್ಪದಿಂದ ಇಷ್ಟೆಲ್ಟ  ಕ್ರಾಂತಿ :  ರೈತರ ಹಿತಕ್ಕಾಗಿ ಶ್ರೀಗಳು ಮಾಡಿದ ಒಂದು ಸಣ್ಣ ಸಂಕಲ್ಪ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರತಿಫಲ ನೀಡಲಾರಂಭಿಸಿದೆ. ಸರ್ಕಾರವೇ ಇಂತಹ ಯೋಜನೆ ಕೈಗೆತ್ತಿಕೊಂಡಿದ್ದರೆ ಏಳೆಂಟು ವರ್ಷಗಳೇ ಕಾಲಹರಣ ಮಾಡುತ್ತಿತ್ತು. ಆದರೆ ಶ್ರೀಗಳು ಈಗಲೂ ನಿತ್ಯ ನಿರಂತರ ಹಳ್ಳದ ಕಾರ್ಯ ವೈಖರಿ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಟೆಂಡರ್‌ ಪ್ರಕ್ರಿಯೆ ಆರಂಭಿಸಿವೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಆರಂಭಕ್ಕೂ ಸಣ್ಣ ನೀರಾವರಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಇದಲ್ಲದೇ ಹೆಚ್ಚುವರಿಯಾಗಿ ಇನ್ನೆರಡು ಸೇತುವೆ ನಿರ್ಮಾಣಕ್ಕೂ ಇಲಾಖೆ ಯೋಜನೆ ರೂಪಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹಿರೇಹಳ್ಳದ ವಿವಿಧೆಡೆ 6 ಬ್ರಿಡ್ಜ್ ಕಂ ಬ್ಯಾರೇಜ್‌ ಮಂಜೂರಾಗಿವೆ. 63 ಕೋಟಿ ರೂ.ಗೆ ಅನುಮೋದನೆ ದೊರೆತಿದ್ದು, ಈ ಪೈಕಿ ಕೆಲವೊಂದು ಬ್ರಿಡ್ಜ್ಗಳಿಗೆ ಈಗಾಗಲೆ ಟೆಂಡರ್‌ ಪ್ರಕ್ರಿಯೆ ಆರಂಭವಾಗಲಿದೆ. ಇನ್ನೂ ಕೆಲವೇ ದಿನದಲ್ಲಿ ಕಾಮಗಾರಿ ಆರಂಭವಾಗಲಿವೆ. ಹಿರೇಹಳ್ಳ ವ್ಯಾಪ್ತಿಯ ರೈತಾಪಿ ಸಮೂಹಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. – ರಾಘವೇಂದ್ರ ಹಿಟ್ನಾಳ, ಶಾಸಕ

 

-ದತ್ತು ಕಮ್ಮಾ

Advertisement

Udayavani is now on Telegram. Click here to join our channel and stay updated with the latest news.

Next