ಹೊನ್ನಾವರ: ಹಲವು ಹುದ್ದೆಗಳಲ್ಲಿ ಹಂಗಾಮಿ ನೌಕರನಾಗಿ ಕೆಲಸ ಮಾಡಿ 1994ರಲ್ಲಿ ನೊಂದಣಿ ಅಧಿಕಾರಿಯಾಗಿ ನೇಮಕಗೊಂಡ ಕೆ.ಎಸ್. ಶಾಂತಯ್ಯ ಯಾರೂ ನಕಲು ಮಾಡದಂತೆ ದೀರ್ಘವಾದ ಹಲವು ಸುಳಿಗಳನ್ನೊಳಗೊಂಡು ತಮ್ಮ ಸಹಿ ಮಾಡತೊಡಗಿದರು.
ಈ ಸಹಿ ಲಿಮ್ಕಾ ದಾಖಲೆಯ ಗಮನ ಸೆಳೆದಿದೆ. ಕೇರಳ ಮತ್ತು ಕರ್ನಾಟಕದ ಕೆಲವು ನ್ಯಾಯಾಧೀಶರು ಸಹಿ ನೋಡಿ, ನನ್ನನ್ನು ಕರೆಸಿಕೊಂಡು ಮಾಹಿತಿ ಪಡೆದುಕೊಂಡಿದ್ದಾರೆ. ನೋಂದಣಿ ಅಧಿಕಾರಿಗಳ ಹುದ್ದೆ ಸಹಿ ಆಸ್ತಿಗೆ ಸಂಬಂಧಪಟ್ಟದ್ದು. ನಕಲಿ ಮಾಡುವವರಿಗೆ ಅವಕಾಶ ಮಾಡಿಕೊಟ್ಟರೆ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂಬ ಕಾರಣಕ್ಕಾಗಿ ಈ ರೀತಿ ಸಹಿ ಮಾಡತೊಡಗಿದೆ. ಇದಕ್ಕೆ ಅಪಾರ ತಾಳ್ಮೆ, ಶ್ರದ್ಧೆ ಬೇಕು. ಸಾಮಾನ್ಯವಾಗಿ ಹೆಚ್ಚಿನವರ ಸಹಿಗಳು ಒಂದಕ್ಕೊಂದು ತಾಳೆ ಆಗುವುದಿಲ್ಲ. ನನ್ನ ಸಹಿಗಳಲ್ಲಿ ಯಾವ ಬದಲಾವಣೆಯೂ ಇಲ್ಲ. ಕಂಬಾಳು ಸಿದ್ಧಪ್ಪ ಶಾಂತಯ್ಯ ಎಂಬುದನ್ನು ನನ್ನ ಸಹಿಯಲ್ಲಿ ಗುರುತಿಸಬಹುದು ಎಂದರು.
ಸರ್ಕಾರಿ ಅಧಿಕಾರಿಗಳ ಮಾತ್ರವಲ್ಲ ಜನರ ಸಹಿಗೂ ಮಹತ್ವವಿರುತ್ತದೆ. ನಕಲಿ ಸಹಿ ಮಾಡಿ, ಆಸ್ತಿ ಲಪಟಾಯಿಸುವ, ಬ್ಯಾಂಕಿನ ಹಣ ಲೂಟಿ ಮಾಡುವ, ಪಾಸ್‌ಪೋರ್ಟ್, ವೀಸಾಗಳಲ್ಲಿ ಮೋಸ ಮಾಡುವ ದೊಡ್ಡ ದಂಧೆಯೇ ನಡೆದಿರುವಾಗ ಎಲ್ಲರೂ ಕಾಳಜಿಯಿಂದ, ಜವಾಬ್ದಾರಿಯಿಂದ ಸಹಿ ಮಾಡಬೇಕು ಅನ್ನುತ್ತಾರೆ ಅವರು. 20-1-2017ರಂದು ಹೊನ್ನಾವರದ ಉಪನೋಂದಣಿ ಅಧಿಕಾರಿಯಾಗಿ ಕೆಲಸ ಆರಂಭಿಸಿದ ಅವರಿಗೆ ಇನ್ನು 9ತಿಂಗಳು ಮಾತ್ರ ಸೇವಾವಧಿ ಇದೆ. ಬೆಂಗಳೂರು ಗ್ರಾಮಾಂತರ ಭಾಗದ ಶಿವಗಂಗೆ ಊರಿನವರಾದ ಇವರ ಕುಟುಂಬ ಊರಲ್ಲಿದೆ, ಜನಕ್ಕೆ ಉತ್ತಮ ಸೇವೆ ನೀಡುತ್ತಿದ್ದಾರೆ. ನೂಲು ಹಿಡಿದು ಲೆಕ್ಕಹಾಕಿದರೆ ಇವರ ಸಹಿ 2.6 ಅಡಿ ಉದ್ದ. ತಮ್ಮ ಎರಡೂ ಸಹಿಗಳನ್ನು ಉದಯವಾಣಿಗೆ ಶುಭಾಶಯ ಕೋರಿ ನೀಡಿದರು.
•ಜೀಯು, ಹೊನ್ನಾವರ