ಮಂಗಳೂರು: ದ.ಕ. ಜಿಲ್ಲೆಯ ಮಂಗಳೂರು, ಬಂಟ್ವಾಳ ತಾ|ನ 15 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಕುಡಿ ಯುವ ನೀರಿನ ಸಮಸ್ಯೆ ತಲೆದೋರಿದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಬರ ಪರಿಹಾರ, ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ಸರಕಾರದಿಂದ 6.25 ಕೋ.ರೂ. ಅನುದಾನ ಜಿಲ್ಲೆಗೆ ಬಿಡು ಗಡೆಯಾಗಿದೆ ಎಂದು ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ತುಂಬೆ ಅಣೆಕಟ್ಟಿಗೆ ರವಿವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರ ಜತೆಗೆ ಮಾತನಾಡಿದರು. ಮಂಗಳೂರು ತಾ.ಪಂ.ನ ಕಂದಾವರ, ಗಂಜಿಮಠ, ಕೊಣಾಜೆ, ಮಂಜನಾಡಿ, ಹರೇಕಳ, ಬೆಳ್ಮ, ತಲಪಾಡಿ, ಕುಪ್ಪೆಪದವು, ಚೇಳಾçರು, ಇರುವೈಲು, ಪಾವೂರು, ಅಂಬ್ಲಿಮೊಗರು, ನೆಲ್ಲಿಕಾರು, ಬಂಟ್ವಾಳ ತಾ.ಪಂ.ನ ನರಿಂಗಾನ, ಬಾಳೆಪುಣಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಒಟ್ಟು 18 ಟ್ಯಾಂಕರ್‌ಗಳ ಮೂಲಕ ಪ್ರತೀ ದಿನ 48 ಟ್ರಿಪ್‌ಗ್ಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
ಸಂಗಬೆಟ್ಟು, ಅರಳ, ಮೇರಮಜಲು ಗ್ರಾ.ಪಂ.ಗಳಲ್ಲೂ ನೀರಿನ ಸಮಸ್ಯೆ ಇದ್ದು ಅಗತ್ಯವಿದ್ದರೆ ಅಲ್ಲಿಗೂ ಟ್ಯಾಂಕರ್ ನೀರು ಪೂರೈಸಲಾಗುವುದು. ಇನ್ನುಳಿದ ತಾ.ಪಂ.ಗಳಲ್ಲಿ ಕೊಳವೆ ಬಾವಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯ ಒಟ್ಟು 4 ಸ್ಥಳೀಯ ಸಂಸ್ಥೆಗಳ ಪೈಕಿ ಮೂಲ್ಕಿ ಪ.ಪಂ.ನಲ್ಲಿ 7 ಟ್ಯಾಂಕರ್ ಮೂಲಕ ಪ್ರತೀ ದಿನ 30 ಟ್ರಿಪ್, ಕೋಟೆಕಾರು ಪ.ಪಂ. ವ್ಯಾಪ್ತಿಗೆ 1 ಟ್ಯಾಂಕರ್ ಮೂಲಕ ಪ್ರತೀ ದಿನ 6 ಟ್ರಿಪ್, ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ 1 ಟ್ಯಾಂಕರ್ ಮೂಲಕ 8 ಟ್ರಿಪ್, ಮೂಡುಬಿದಿರೆ ಪುರಸಭೆ ವ್ಯಾಪ್ತಿಯಲ್ಲಿ 1 ಟ್ಯಾಂಕರ್ ಮೂಲಕ 5 ಟ್ರಿಪ್ ನೀರು ಸರಬರಾಜು ಮಾಡಲಾಗುತ್ತಿದೆ. ಡಿಸಿ ಕಚೇರಿಯಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಸಮಸ್ಯೆಗಳಿದ್ದಲ್ಲಿ 1077 ನಂಬರಿಗೆ ಕರೆ ಮಾಡಿ ತಿಳಿಸಬಹುದು ಎಂದರು.
ಸಂಪಾಜೆ: ಮುನ್ನೆಚ್ಚರಿಕೆ ವಹಿಸಲು ಸೂಚನೆ
ಕಳೆದ ಬಾರಿ ಮಳೆಯಿಂದಾಗಿ ಬಹಳಷ್ಟು ಕಷ್ಟ-ನಷ್ಟ ಸಂಭವಿಸಿದ ಸಂಪಾಜೆ ವ್ಯಾಪ್ತಿಯಲ್ಲಿ ಮುಂದಿನ ಮಳೆಗಾಲದ ಸಮಯಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ನೀತಿಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಲು ಸಾಧ್ಯವಿಲ್ಲ. ಜಿಲ್ಲಾಡಳಿತದ ಜತೆಗೆ ಮಾತುಕತೆ ನಡೆಸಲಾಗಿದೆ. ಎನ್‌ಡಿಆರ್‌ಎಫ್ ತಂಡವೊಂದನ್ನು ಈ ಕಾರಣಕ್ಕಾಗಿ ಸುಳ್ಯ ದಲ್ಲಿಯೇ ಠಿಕಾಣಿ ಹೂಡುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ ಎಂದು ಸಚಿವ ಹೇಳಿದರು.
ಮಂಗಳೂರು ರೇಷನಿಂಗ್; 2 ದಿನದಲ್ಲಿ ತೀರ್ಮಾನ ಮಂಗಳೂರಿಗೆ ನೀರುಣಿಸುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ಸದ್ಯ 4.90 ಮೀ. ನೀರು ಸಂಗ್ರಹವಿದೆ. ಪ್ರತೀದಿನ ನೀಡುವುದಾದರೆ ಮುಂದಿನ 28 ದಿನಗಳಿಗೆ ಇದು ಸಾಕು. ರೇಷನಿಂಗ್ (4 ದಿನ ನೀರು-2 ದಿನ ಸ್ಥಗಿತ) ಮಾಡಿದರೆ ಜೂನ್ 15ರ ವರೆಗೆ ಪೂರೈಸಬಹುದು. ಪಾಲಿಕೆಯ ನಿಯಮ ಪ್ರಕಾರ ಮೇ 1, 2ರಂದು ರೇಷನಿಂಗ್‌ಗೆ ನಿಗದಿ ಮಾಡಲಾಗಿದೆ. ಎರಡು ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿಕೊಂಡು ರೇಷನಿಂಗ್ ಕುರಿತಂತೆ ಅಂತಿಮ ತೀರ್ಮಾನ ವನ್ನು ಜಿಲ್ಲಾಡಳಿತದ ನೇತೃತ್ವದಲ್ಲಿ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.