Advertisement

5ನೇ ಹಂತದಲ್ಲಿ ಹಿಂಸಾಚಾರ : ಶೇ.62.5 ಮತ

02:14 AM May 07, 2019 | sudhir |

ನವದೆಹಲಿ: ಗ್ರೆನೇಡ್‌ ಎಸೆತ, ಉಗ್ರರಿಂದ ಸ್ಫೋಟ, ಹಿಂಸಾಚಾರದಂಥ ಘಟನೆಗಳೊಂದಿಗೆ ಪ್ರಸಕ್ತ ಲೋಕಸಭೆ ಚುನಾವಣೆಯ 5ನೇ ಹಂತದ ಮತದಾನಕ್ಕೆ ತೆರೆಬಿದ್ದಿದೆ. 7 ರಾಜ್ಯಗಳ 51 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಸುಮಾರು ಶೇ.62.5ರಷ್ಟು ಮತದಾನ ದಾಖಲಾಗಿದೆ. 2014ರ ಚುನಾವಣೆಯಲ್ಲಿ ಶೇ.61.76 ಮತದಾನವಾಗಿತ್ತು.

Advertisement

ಪ್ರತಿ ಹಂತದ ಮತದಾನದಲ್ಲೂ ಹಿಂಸಾಚಾರಕ್ಕೆ ಸಾಕ್ಷಿಯಾದ ಪಶ್ಚಿಮ ಬಂಗಾಳದಲ್ಲಿ 5ನೇ ಹಂತದಲ್ಲೂ ವ್ಯಾಪಕ ಹಿಂಸೆ ತಾಂಡವವಾಡಿದೆ. ಪ್ರತ್ಯೇಕ ಘಟನೆಗಳಲ್ಲಿ ಬಿಜೆಪಿ ಅಭ್ಯರ್ಥಿ ಅರ್ಜುನ್‌ ಸಿಂಗ್‌ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಲಾಕೆಟ್ ಚಟರ್ಜಿ ಅವರ ಕಾರಿನ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಜಮ್ಮು-ಕಾಶ್ಮೀರದ ಪುಲ್ವಾಮಾದ ಮತಗಟ್ಟೆಯ ಮೇಲೆ ದುಷ್ಕರ್ಮಿಗಳು ಗ್ರೆನೇಡ್‌ ಎಸೆದಿದ್ದಾರೆ. ಮತ್ತೂಂದು ಮತಗಟ್ಟೆ ಸಮೀಪ ಉಗ್ರರು ಸ್ಫೋಟಕ ಎಸೆದು ಸ್ಫೋಟಿಸಿದ್ದಾರೆ. ಅದೃಷ್ಟವಶಾತ್‌ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಪುಲ್ವಾಮಾದಲ್ಲಿ ಬಹಿಷ್ಕಾರ: ಫೆ.14ರಂದು 40 ಸಿಆರ್‌ಪಿಎಫ್ ಯೋಧರ ಸಾವಿಗೆ ಪುಲ್ವಾಮಾ ಜಿಲ್ಲೆಯ 19 ವರ್ಷದ ಆತ್ಮಾಹುತಿ ಬಾಂಬರ್‌ ಆದಿಲ್ ದರ್‌ನ ಗ್ರಾಮಸ್ಥರು ಚುನಾವಣೆಯನ್ನೇ ಬಹಿಷ್ಕರಿಸಿದ್ದಾರೆ. ಗಂಡಿಬಾಗ್‌ ಗ್ರಾಮದ ಒಬ್ಬರು ಕೂಡ ಹಕ್ಕು ಚಲಾಯಿಸಿಲ್ಲ. ವ್ಯವಸ್ಥೆಯಿಂದ ಬೇಸತ್ತು ಈ ತೀರ್ಮಾನ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ. ವಿಚಿತ್ರವೆಂದರೆ, ಜಮ್ಮು-ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ನಡೆದ 2ನೇ ಹಂತದ ಚುನಾವಣೆಯಲ್ಲಿ ಶೇ.2ಕ್ಕಿಂತಲೂ ಕಡಿಮೆ ಮತದಾನ ದಾಖಲಾಗಿದೆ. ಉ.ಪ್ರದೇಶ, ರಾಜಸ್ಥಾನ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಇವಿಎಂ ಸಮಸ್ಯೆಯೂ ತಲೆದೋರಿದೆ.

ಈ ಹಂತದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ಗಾಂಧಿ, ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ಸ್ಮತಿ ಇರಾನಿ ಸೇರಿದಂತೆ ಅನೇಕ ರಾಜಕೀಯ ಪ್ರಮುಖರ ಭವಿಷ್ಯ ನಿರ್ಧಾರವಾಗಿದೆ. ಅಲ್ಲದೆ, ಇದು ಕಾಂಗ್ರೆಸ್‌, ಬಿಜೆಪಿ, ಎಸ್ಪಿ-ಬಿಎಸ್ಪಿ ಮೈತ್ರಿಗೂ ಮಹತ್ವದ ಹಂತ ಎನಿಸಿಕೊಂಡಿತ್ತು. ಮೇ 12ರಂದು 6ನೇ ಹಂತದ ಮತದಾನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next