Advertisement

ಮಹಿಳೆ-ಮಕ್ಕಳ ಅಭಿವೃದ್ಧಿಗೆ 5,700 ಕೋಟಿ ಯೋಜನೆ

06:20 AM Feb 01, 2019 | Team Udayavani |

ಬಸವಕಲ್ಯಾಣ: ಅಂಗನವಾಡಿ ನೌಕರರ, ಬುದ್ಧಿ ಮಾಂದ್ಯ ಮಕ್ಕಳ ಮತ್ತು ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾದ ಪ್ರತಿಯೊಬ್ಬ ಮಹಿಳೆಯರ ಸಮಗ್ರ ಅಭಿವೃದ್ಧಿಗಾಗಿ 5,700 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳನ್ನು ಸರ್ಕಾರ ಜಾರಿಗೆ ಮಾಡಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಜಯಮಾಲಾ ಹೇಳಿದರು.

Advertisement

ನಗರದ ಬಸವ ಮಹಾಮನೆಯಲ್ಲಿ ಅಂಗನವಾಡಿ ನೌಕರರ ಏಳನೇ ರಾಜ್ಯ ಮಟ್ಟದ ಸಮ್ಮೇಳನದ ಎರಡನೇ ದಿನವಾದ ಗುರುವಾರ ನಡೆದ ತಾಯಿ-ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಶೋಷಣೆಗೆ ಒಳಗಾದ ಮಹಿಳೆಯರಿಗೆ ಪುನರ್ವಸತಿಕರಣ ಮಾಡುವ ಕೆಲಸವನ್ನು ಕರ್ನಾಟಕ ಸರ್ಕಾರ ಮಾಡುತ್ತಿದೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. ಶೋಷಣೆಗೆ ಒಳಗಾದ ಮಹಿಳೆಯರನ್ನು ಮುಖ್ಯವಾಹಿನಿಗೆ ತರಬೇಕು, ಉದ್ಯೋಗ ನೀಡಬೇಕು, ಅವರ ಮಕ್ಕಳನ್ನು ಸಂರಕ್ಷಿಸಬೇಕು ಎನ್ನುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್‌ 2012ರಲ್ಲಿ ಸಮಗ್ರ ಅಧ್ಯಯನ ಮಾಡಿ ವರದಿ ನೀಡುವಂತೆ ಎಲ್ಲ ರಾಜ್ಯಗಳಿಗೆ ಸೂಚಿಸಿತ್ತು. ಅದರಂತೆ ರಾಜ್ಯದಲ್ಲಿ ಉಮಾಶ್ರೀ ಅವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾಗಿದ್ದ ಸಂದರ್ಭದಲ್ಲಿ ರಾಜ್ಯದ 176 ತಾಲೂಕಿನ ಬಗ್ಗೆ 11 ಸಾವಿರ ಸ್ಯಾಂಪಲ್‌ ನೀಡಿದ ವರದಿ ಬಜೆಟ್‌ನಲ್ಲಿ ಸೇರ್ಪಡೆಯಾಗಿದ್ದು, ಅದನ್ನು ಈ ಬಾರಿ ಅನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದರು.

ದೇಶದ ಸಂವಿಧಾನದಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಸಮಾನ ಅವಕಾಶ ನೀಡಲಾಗಿದೆ. ಮಹಿಳೆಯರು ಮಾತ್ರ ಪ್ರತಿಯೊಂದಕ್ಕೂ ಭಿಕ್ಷೆ ಬೇಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಹಳ್ಳಿ ಗ್ರಾಮಗಳಲ್ಲಿ ವೈದ್ಯರು ಸೇವೆ ಸಲ್ಲಿಸುತ್ತಿಲ್ಲ. ಆದರೆ ಅಂಗನವಾಡಿ ಕಾರ್ಯಕರ್ತೆಯರು ಕುಗ್ರಾಮದಲ್ಲಿ ಮಕ್ಕಳು ಮತ್ತು ಗರ್ಭಿಣಿಯರಿಗಾಗಿ 1975ರಿಂದ ಸೇವೆ ಸಲ್ಲಿಸುತ್ತಾ ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಕುಗ್ರಾಮದಲ್ಲಿ ಮತ್ತು ಕಾಡಿನ ಪಕ್ಕದಲ್ಲಿರುವ ಅಂಗನವಾಡಿಗಳ ಬಗ್ಗೆ ಇಲಾಖೆ ವರದಿ ನೀಡಿದೆ. ಏಕೆಂದರೆ ಇತ್ತೀಚೆಗೆ ಶಿವಮೊಗ್ಗದ ಅಂಗನವಾಡಿ ಕೇಂದ್ರವೊಂದರಲ್ಲಿ ಮಗುವೊಂದು ಹಾವು ಕಚ್ಚಿದ್ದರಿಂದ ಮೃತಪಟ್ಟಿತ್ತು.ಇಂತಹ ಘಟನೆಗಳು ಪುನಃ ನಡೆಯದಂತೆ ಏನಾದರೂ ವ್ಯವಸ್ಥೆ ಮಾಡುವ ಉದ್ದೇಶದಿಂದ ಮಾಹಿತಿ ಕೇಳಲಾಗುತ್ತಿದೆ ಎಂದು ಹೇಳಿದರು.

Advertisement

ನ್ಯಾಯವಾದಿ ಸುಧೀರಕುಮಾರ ಮರೊಳ್ಳಿ ತಾಯಿ-ಮಕ್ಕಳ ಹಕ್ಕುಗಳ ಸಂರಕ್ಷಣೆ ಬಗ್ಗೆ ಮಾತನಾಡಿದರು. ಕರ್ನಾಟಕ ರಾಜ್ಯ ಸಮಿತಿ ಸಹ ಕಾರ್ಯದರ್ಶಿ ಯಮನಾ ಗಾಂವ್ಕರ್‌ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ಭಾರತಿಬಾಯಿ ಶೇರಿಕಾರ್‌, ತಾಪಂ ಅಧ್ಯಕ್ಷೆ ಯಶೋಧಾ ರಾಠೊಡ, ನೀಲಕಂಠ ರಾಠೊಡ, ಸಮ್ಮೇಳನದ ಸ್ವಾಗತಿ ಸಮಿತಿ ಅಧ್ಯಕ್ಷೆ ಶ್ರೀದೇವಿ ಚುಡೆ, ಖಜಾಂಚಿ ಪದ್ಮಾ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಸುಶೀಲಾ ಹತ್ತಿ, ಮಾರುತಿ ಮಾನ್ಪಡೆ ಮತ್ತಿತರರು ಭಾಗವಹಿಸಿದ್ದರು.

ಅನುದಾನ ಹೆಚ್ಚಿಸಲು ಮನವಿ: ಹೈ.ಕ. ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಶೇ.5ರಷ್ಟು ಅನುದಾನವನ್ನು ಅಂಗವಿಕಲರಿಗೆ ಅನುಕೂಲವಾಗುವಂತೆ ನೀಡಬೇಕು ಎಂದು ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದಿಂದ ಸಚಿವೆ ಡಾ| ಜಯಮಾಲಾ ಅವರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯಾಧ್ಯಕ್ಷ ಮಹೇಶ ಗೌಡ, ಎಂಆರ್‌ಡಬ್ಲ್ಯು ಶಿವಕುಮಾರ ಪಾಟೀಲ, ಶಿವಕುಮಾರ ಸಿದ್ದೇಶ್ವರ, ಸಂತೋಷ ಹಲಬರ್ಗಾ, ದೇವೀಂದ್ರ, ಬಂಡೆಪ್ಪಾ, ಬಾಬುರಾವ್‌ ಮುಚಳಂಬ ಮತ್ತಿತರರು ಇದ್ದರು. ಸಮಾರೋಪ ಸಮಾರಂಭ ಇಂದು: ಅಂಗನವಾಡಿ ನೌಕರರ ರಾಜ್ಯ ಮಟ್ಟದ ಸಮಾರೋಪ ಸಮಾರಂಭ ಫೆ.1ರಂದು ಸಂಜೆ 4 ಗಂಟೆಗೆ ನಡೆಯಲಿದೆ.

ಬುಲೇಟ್ ಟ್ರೇನ್‌ಗಾಗಿ, ಬಂಡವಾಳ ಶಾಹಿಗಳ ಸಾಲ ಮನ್ನಾ ಮಾಡಲು ಸರ್ಕಾರದ ಹತ್ತಿರ ಹಣ ಇದೆ. ಆದರೆ, ಮಕ್ಕಳ ಸಂರಕ್ಷಣೆ ಮಾಡುವ ಅಂಗನವಾಡಿ ನೌಕರರಿಗೆ ಸಂಬಳ ನೀಡಲು ಹಣ ಇಲ್ಲ ಎನ್ನಲಾಗುತ್ತಿದೆ. ಹೀಗಾಗಿ ನಮ್ಮ ಬೇಡಿಕೆ ಈಡೇರುವ ವರೆಗೂ ಹೋರಾಟ ನಿರಂತರವಾಗಿರಬೇಕು. ಅಲ್ಲದೇ ಲಿಂಗ ತಾರತಮ್ಯ ಮತ್ತು ಜಾತಿ ದೇಶದ ದೊಡ್ಡ ಪಿಡುಗಾಗಿದೆ. ಮಕ್ಕಳಲ್ಲಿ ಈ ವಿಷ ಬೀಜ ಬೆಳೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರ ಮೇಲಿದೆ.
•ಎಚ್.ಎಸ್‌. ಅನುಪಮ, ಸಾಹಿತಿ

Advertisement

Udayavani is now on Telegram. Click here to join our channel and stay updated with the latest news.

Next