ಬೆಂಗಳೂರು: ರಾಜ್ಯದಲ್ಲಿ ಎಲೆಚುಕ್ಕೆ ಮತ್ತು ಹಳದಿ ಎಲೆ ರೋಗ ಬಾಧೆ ತೀವ್ರವಾಗಿ ಕಾಡುತ್ತಿದ್ದು, ಇದುವರೆಗೆ ಒಟ್ಟು 56,329 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆ ಇದಕ್ಕೆ ತುತ್ತಾಗಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದರು.
ಬಿಜೆಪಿಯ ಪ್ರತಾಪ್‌ಸಿಂಹ ನಾಯಕ್ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಈ ಎರಡೂ ರೋಗಗಳಿಂದ ಕ್ರಮವಾಗಿ 42,504 ಹೆಕ್ಟೇರ್ ಮತ್ತು 13,825 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆ ಬಾಧಿತವಾಗಿದೆ. ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಎಲೆಚುಕ್ಕೆ ಮತ್ತು ಹಳದಿ ಎಲೆ ರೋಗಕ್ಕೆ 30 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಅಡಿಕೆ ಬೆಳೆಗೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಎಲೆಚುಕ್ಕೆ ರೋಗಕ್ಕೆ ತುತ್ತಾದ ಬೆಳೆಗಾರರಿಗೆ ಪ್ರತೀ ಹೆಕ್ಟೇರ್‌ಗೆ 4 ಸಾವಿರ ರೂ.ಗಳಂತೆ 2 ಕೋಟಿ ರೂ. ವೆಚ್ಚದಲ್ಲಿ ಸಸ್ಯ ಸಂರಕ್ಷಣ ಔಷಧಗಳನ್ನು 17,264 ರೈತರಿಗೆ ವಿತರಿಸಲಾಗಿದೆ. ಹಳದಿ ಎಲೆ ರೋಗ ನಿಯಂತ್ರಣಕ್ಕಾಗಿ ಪರ್ಯಾಯ ತೋಟಗಾರಿಕೆ ಬೆಳೆ ಬೆಳೆಯಲು ಪ್ರತೀ ಹೆಕ್ಟೇರ್‌ಗೆ 15 ಸಾವಿರ ರೂ.ಗಳಂತೆ ಗರಿಷ್ಠ 2 ಹೆಕ್ಟೇರ್‌ಗಳ ವರೆಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಇದುವರೆಗೆ 2,491 ಹೆಕ್ಟೇರ್ ಪ್ರದೇಶ ವಿಸ್ತೀರ್ಣಕ್ಕೆ 3.74 ಕೋಟಿ ರೂ. ವೆಚ್ಚ ಭರಿಸಲಾಗಿದೆ. ಎರಡೂ ರೋಗ ನಿಯಂತ್ರಣ ಮತ್ತು ಸಂಶೋಧನೆಗಾಗಿ ಕೊಚ್ಚಿಯ ಸಿಪಿಸಿಆರ್‌ಐ ಮೂಲಕ ಕೇಂದ್ರಕ್ಕೆ 197.66 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಸಂಶೋಧನೆ ಪ್ರಗತಿಯಲ್ಲಿದೆ
ರೋಗಗಳಿಗೆ ಶಾಶ್ವತ ಪರಿಹಾರಕ್ಕಾಗಿ ಶೃಂಗೇರಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿ.ವಿ. ವ್ಯಾಪ್ತಿಯಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪಿಸಲಾಗಿದ್ದು, ಸಂಶೋಧನೆ ಪ್ರಗತಿಯಲ್ಲಿದೆ. 2023ರ ಜನವರಿಯಲ್ಲಿ ಕೇಂದ್ರ ಸರಕಾರದಿಂದ ವಿಜ್ಞಾನಿಗಳ ತಂಡವು ರಾಜ್ಯದ ಅಡಿಕೆ ಎಲೆಚುಕ್ಕೆ ರೋಗ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರೋಪಾಯಗಳನ್ನು ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದ್ದಾರೆ.