Advertisement
ಒಂದು ಕಡೆ, ಸೋಂಕಿತರ ಸಂಖ್ಯೆಯು ದಿನಕಳೆದಂತೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದ್ದರೆ, ಮತ್ತೂಂದು ಕಡೆ ದೇಶದ 736 ಜಿಲ್ಲೆಗಳ ಪೈಕಿ 550 ಜಿಲ್ಲೆಗಳಿಗೆ ಕೋವಿಡ್ ವ್ಯಾಪಿಸಿದೆ. ಅಂದರೆ ಕೇವಲ 14 ದಿನಗಳಲ್ಲಿ ಸುಮಾರು 180 ಜಿಲ್ಲೆಗಳಿಗೆ ಈ ಸೋಂಕು ಪ್ರವೇಶಿಸಿದೆ.
Related Articles
Advertisement
ಇದಾದ ಬಳಿಕ ನಮ್ಮ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸೋಂಕು ವ್ಯಾಪಿಸಿದೆ. ಹೀಗಿರುವಾಗ, ಎಲ್ಲ ವಲಸೆ ಕಾರ್ಮಿಕರೂ ಊರುಗಳಿಗೆ ಮರಳಿದರೆ ಪರಿಸ್ಥಿತಿ ಏನಾಗಬಹುದೆಂದು ಕಲ್ಪಿಸಿಕೊಳ್ಳಿ. ಅವರೆಲ್ಲರನ್ನೂ ಕ್ವಾರಂಟೈನ್‌ನಲ್ಲಿ ಇಡುವುದಾದರೂ ಹೇಗೆ’ ಎಂದು ಬಿಹಾರದ ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.
ಹಲವು ಸವಾಲುಗಳು: ಬಿಹಾರ, ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಲಗಳಲ್ಲಿ ವಲಸೆ ಕಾರ್ಮಿಕರು ಕ್ವಾರಂಟೈನ್ ಕೇಂದ್ರಗಳಿಂದ ತಪ್ಪಿಸಿಕೊಂಡು ಹೋಗಿರುವ ಎಷ್ಟೋ ಪ್ರಕರಣಗಳು ವರದಿಯಾಗುತ್ತಿವೆ. ಇಂಥ ಪ್ರಕರಣ ಹೆಚ್ಚಾದಷ್ಟೂ ಸೋಂಕಿತರ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆಯಿದ್ದು, ಈ ಎಲ್ಲ ಬೆಳವಣಿಗೆಗಳು ಸರಕಾರಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿವೆ. ಅಲ್ಲದೆ, ಈ ರಾಜ್ಯಗಳಲ್ಲಿ ಕೋವಿಡ್ ಮುಕ್ತ ಜಿಲ್ಲೆಗಳು ಎಂದು ಪರಿಗಣಿಸಲ್ಪಟ್ಟಿರುವ ಪ್ರದೇಶಗಳೆಲ್ಲ ದೂರದ ಬುಡಕಟ್ಟು ಜನರಿರುವ ಹಾಗೂ ಬಡ ಜಿಲ್ಲೆಗಳೇ ಆಗಿವೆ. ಈ ಪ್ರದೇಶಗಳಲ್ಲಿ ಸಾಕಷ್ಟು ಪರೀಕ್ಷೆಗಳು ಕೂಡ ನಡೆದಿಲ್ಲ ಎನ್ನುತ್ತಾರೆ ಅಧಿಕಾರಿಗಳು.
ಎಷ್ಟು ಜಿಲ್ಲೆಗಳಲ್ಲಿ ಪ್ರವೇಶ?: ಬಿಹಾರದ ಎಲ್ಲ 36 ಜಿಲ್ಲೆಗಳು, ಒಡಿಶಾದ 30 ಜಿಲ್ಲೆಗಳ ಪೈಕಿ ಮೂರನೇ ಎರಡರಷ್ಟು ಜಿಲ್ಲೆಗಳು, ಮಧ್ಯಪ್ರದೇಶದ 55 ಜಿಲ್ಲೆಗಳ ಪೈಕಿ ಶೇ.80, ಜಾರ್ಖಂಡ್ ನ 24 ಜಿಲ್ಲೆಗಳ ಪೈಕಿ ಅರ್ಧಕ್ಕೂ ಹೆಚ್ಚು, ರಾಜಸ್ಥಾನದ 33 ಜಿಲ್ಲೆಗಳು, ಛತ್ತೀಸ್‌ಗಢದ 28 ಜಿಲ್ಲೆಗಳ ಪೈಕಿ ಮೂರನೇ ಒಂದರಷ್ಟು ಜಿಲ್ಲೆಗಳಿಗೆ ಈಗಾಗಲೇ ಕೋವಿಡ್ ವ್ಯಾಪಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ದೇಶದ ಒಟ್ಟಾರೆ ಸೋಂಕಿತರ ಪೈಕಿ ಶೇ.21ರಷ್ಟು ಪ್ರಕರಣಗಳು ಪತ್ತೆಯಾಗಿರುವುದು ಗ್ರಾಮೀಣ ಪ್ರದೇಶದ ಜಿಲ್ಲೆಗಳಲ್ಲಿ. ಆದರೆ, ಈ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ದಿನ ದೂರವಿಲ್ಲ ಎಂದೂ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಒಡಿಶಾದ ಗಂಜಾಮ್ ಜಿಲ್ಲೆ (292 ಪ್ರಕರಣ) ಮತ್ತು ಬಿಹಾರದ ಮುಂಗೇರ್ (195 ಪ್ರಕರಣ) ಜಿಲ್ಲೆ ಹೊರತುಪಡಿಸಿದರೆ, ದೇಶದ ಬಹುತೇಕ ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಒಂದಂಕಿ ಯಲ್ಲಿವೆ ಎಂದೂ ಅವರು ಹೇಳಿದ್ದಾರೆ.
ಒಂದೇ ದಿನ 5242 ಮಂದಿಗೆ ಸೋಂಕುಕೋವಿಡ್ ವೈರಸ್ ವ್ಯಾಪಿಸುವಿಕೆಗೆ ಕಡಿವಾಣ ಹಾಕಲು ಸರಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಸೋಂಕಿತರ ಸಂಖ್ಯೆ ಮಾತ್ರ ಇಳಿಮುಖವಾಗುವ ಲಕ್ಷಣ ಕಾಣುತ್ತಿಲ್ಲ. ದೇಶಾದ್ಯಂತ ಲಾಕ್ ಡೌನ್ 4.0 ಜಾರಿಯಾಗುತ್ತಿದ್ದಂತೆಯೇ, ಸೋಂಕಿತರ ಸಂಖ್ಯೆ ಒಂದು ಲಕ್ಷದ ಸಮೀಪಕ್ಕೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ. ರವಿವಾರ ಬೆಳಗ್ಗೆ 8 ರಿಂದ ಸೋಮವಾರ ಬೆಳಗ್ಗೆ 8ರವರೆಗೆ ಅಂದರೆ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ ಬರೋಬ್ಬರಿ 5,242 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, 157 ಮಂದಿ ಸಾವಿಗೀಡಾಗಿದ್ದಾರೆ. ಒಂದೇ ದಿನ ಇಷ್ಟೊಂದು ಪ್ರಕರಣ ಪತ್ತೆಯಾಗಿರುವುದು ಇದೇ ಮೊದಲು. ಇದೇ ವೇಳೆ, 36,823 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಅಂದರೆ ಒಟ್ಟಾರೆ ಶೇ.38.29ರಷ್ಟು ರೋಗಿಗಳು ಗುಣಮುಖರಾದಂತಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ 23 ಜಿಲ್ಲೆಗಳಲ್ಲಿ ಕೋವಿಡ್ ಕೇಸ್ ಪತ್ತೆ
ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರನ್ನು ಬರಮಾಡಿಕೊಳ್ಳುತ್ತಿರುವ ರಾಜ್ಯಗಳು ಮಾತ್ರವಲ್ಲದೆ, ಕರ್ನಾಟಕ, ತಮಿಳುನಾಡು, ಹರ್ಯಾಣದಂಥ ರಾಜ್ಯಗಳ ಜಿಲ್ಲೆಗಳಿಗೂ ಕೋವಿಡ್ ವ್ಯಾಪಿಸಿದೆ. ಕರ್ನಾಟಕದ 30 ಜಿಲ್ಲೆಗಳ ಪೈಕಿ 23ರಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ತಮಿಳುನಾಡಿನಲ್ಲಿ ಎಲ್ಲ 38 ಹಾಗೂ ಹರ್ಯಾಣದಲ್ಲಿ ಎಲ್ಲ 22 ಜಿಲ್ಲೆಗಳಲ್ಲೂ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರವೊಂದರಲ್ಲೇ 3ನೇ ಒಂದರಷ್ಟು ಪ್ರಕರಣ ದೇಶಾದ್ಯಂತ ಕೋವಿಡ್ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿದೆ. ದೇಶದ ಒಟ್ಟು ಸರಾಸರಿಯ ಮೂರನೇ ಒಂದರಷ್ಟು ಪ್ರಕರಣ ಮಹಾರಾಷ್ಟ್ರದಲ್ಲೇ ದಾಖಲಾಗಿದೆ.
ಇಲ್ಲಿ ಸೋಂಕಿತರ ಸಂಖ್ಯೆ 33 ಸಾವಿರದ ಗಡಿ ದಾಟಿದ್ದು, ಸಾವಿನ ಸಂಖ್ಯೆಯೂ 2 ಸಾವಿರ ಆಗಿದೆ. ಇನ್ನು, ಎರಡನೇ ಸ್ಥಾನದಲ್ಲಿರುವ ಗುಜರಾತ್‌ನಲ್ಲಿ 12 ಸಾವಿರದಷ್ಟು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈವರೆಗೆ 659 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. ತಮಿಳುನಾಡಿನಲ್ಲೂ ದಿನೇ ದಿನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ದಿಲ್ಲಿಯಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಸೋಂಕಿತರಿದ್ದರೆ, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬೇಡಿಕೆಗೆ ಒಪ್ಪಿದ ಉ.ಪ್ರ.ಸಿಎಂ
‘ರಾಜಸ್ಥಾನದಿಂದ ವಲಸೆ ಕಾರ್ಮಿಕರಿಗಾಗಿ ನಿಯೋಜಿಸಿರುವ ಒಂದು ಸಾವಿರ ಬಸ್‌ಗಳು ಉತ್ತರ ಪ್ರದೇಶಕ್ಕೆ ಪ್ರವೇಶಿಸಲು ಅನುಮತಿ ನೀಡಬೇಕು’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮನವಿಯನ್ನು ಉತ್ತರ ಪ್ರದೇಶ ಸರ್ಕಾರ ಪುರಸ್ಕರಿಸಿದೆ. ಈ ಸಂಬಂಧ ಬಸ್‌ಗಳ ವಿವರ, ಚಾಲಕರು, ನಿರ್ವಾಹಕರ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದೆ. ಇತ್ತೀಚೆಗೆ ಪ್ರಿಯಾಂಕಾ ಗಾಂಧಿ, ಉತ್ತರ ಪ್ರದೇಶ ಸರ್ಕಾರ ಕಾರ್ಮಿಕ ವಿಷಯದಲ್ಲಿ ನಿರ್ಲಕ್ಷ್ಯ ತೋರಿದೆ. ವಲಸೆ ಕಾರ್ಮಿಕರಿಗಾಗಿ ಒಂದು ಸಾವಿರ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಈ ಬಸ್‌ಗಳು ಉತ್ತರ ಪ್ರದೇಶದ ಗಡಿಯಲ್ಲಿದ್ದು, ರಾಜ್ಯವನ್ನು ಪ್ರವೇಶಿಸಲು ಸರ್ಕಾರ ಅವಕಾಶ ನೀಡುತ್ತಿಲ್ಲ. ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ದೂರಿದ್ದರು. ಕೋಲ್ಕತಾಗೆ ಬಂತು ವಿಮಾನ
ಪ. ಬಂಗಾಳ ಮತ್ತು ಕೇಂದ್ರದ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದ್ದ ‘ವಂದೇ ಭಾರತ್’ ಏರ್‌ಲಿಫ್ಟ್ ವಿವಾದಕ್ಕೆ ತೆರೆಬಿದ್ದಿದೆ. ಬಾಂಗ್ಲಾದೇಶದಿಂದ 169 ಭಾರತೀಯ ಪ್ರಜೆಗಳು, ಕೋಲ್ಕತ್ತಾದಲ್ಲಿ ಸೋಮವಾರ ಇಳಿದಿದ್ದಾರೆ. ತುರ್ತು ಚಿಕಿತ್ಸೆಯ ಅವಶ್ಯಕತೆ ಇದ್ದ 16 ರೋಗಿಗಳು, ಒಬ್ಬರು ಗರ್ಭಿಣಿ ತಾಯ್ನಾಡಿಗೆ ಆಗಮಿಸಿದ್ದಾರೆ. ಇದೇ ವೇಳೆ ದ್ವೀಪರಾಷ್ಟ್ರ ಶ್ರೀಲಂಕಾಕ್ಕೆ ಯಾವುದೇ ವಿಮಾನಗಳನ್ನು ಮೀಸಲಿಡದೆ ಇರುವುದು, ಅಲ್ಲಿನ ಭಾರತೀಯರ ಬೇಸರಕ್ಕೆ ಎಡೆಮಾಡಿಕೊಟ್ಟಿದೆ.