ಬೆಂಗಳೂರು: ಬಿಜೆಪಿಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ 55 ಹಾಗೂ ಮಂಡಲ ಅಧ್ಯಕ್ಷ ಸ್ಥಾನಕ್ಕೆ 45ರ ವಯೋಮಿತಿ ನಿಗದಿ ಮಾಡಲಾಗಿದೆ. ಯುವ ಮುಖಂಡರಿಗೆ ಹೆಚ್ಚಿನ ಅವಕಾಶ ನೀಡುವ ಸಲುವಾಗಿ ಹಾಗೂ ಪಕ್ಷ ಸಂಘಟನೆ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಅನುಕೂಲವಾಗುವಂತೆ ಈ ಬದಲಾವಣೆ ಮಾಡಲಾಗಿದೆ.
ರಾಜ್ಯದಲ್ಲಿ ಬಿಜೆಪಿ ಸಂಘಟನ ಪರ್ವ ನಡೆದಿದ್ದು, ಮಂಡಲ ಅಧ್ಯಕ್ಷರ ನೇಮಕ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ತಾಲೂಕು ಘಟಕದ ಅಧ್ಯಕ್ಷರ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದೇ ಹೊತ್ತಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು ಅವರು ಜಿಲ್ಲಾಧ್ಯಕ್ಷರಿಗೆ 55 ವರ್ಷ ಹಾಗೂ ಮಂಡಲ ಅಧ್ಯಕ್ಷರಿಗೆ 45 ವರ್ಷ ವಯೋಮಿತಿ ನಿಗದಿಪಡಿಸಿದ್ದು, ಅದರಂತೆ ನೇಮಕ ಪ್ರಕ್ರಿಯೆ ನಡೆಸುವಂತೆ ಸೂಚನೆ ನೀಡಿದ್ದಾರೆ.
ಸದ್ಯ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 55 ವರ್ಷ ಮೀರಿದವರು ಅಧ್ಯಕ್ಷರಾಗಿದ್ದಾರೆ. ಆ ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, 55 ವರ್ಷದೊಳಗಿನವರನ್ನು ಆಯ್ಕೆ ಮಾಡಲು ಸಿದ್ಧತೆ ನಡೆದಿದೆ. ಕೆಲವು ಮಂಡಲಗಳಿಗೆ 46, 47 ವರ್ಷದವರನ್ನು ಆಯ್ಕೆ ಮಾಡಿರುವ ಒಂದೆರಡು ಉದಾಹರಣೆ ಹೊರತುಪಡಿಸಿದರೆ ಬಹುತೇಕ ಕಡೆ ವಯೋಮಿತಿಯಂತೆಯೇ ನೇಮಕ ನಡೆದಿದೆ ಎಂದು ಮೂಲಗಳು ಹೇಳಿವೆ.
ಸಂಘಟನೆ ಕಾರ್ಯವನ್ನು ಪರಿಣಾಮಕಾರಿ ಯಾಗಿ ಕೈಗೊಳ್ಳುವ ಉದ್ದೇಶದಿಂದ ಪಕ್ಷದ ರಾಜ್ಯಾಧ್ಯಕ್ಷರು ಜಿಲ್ಲಾಧ್ಯಕ್ಷರಿಗೆ 55 ವರ್ಷ ಹಾಗೂ ಮಂಡಲ ಅಧ್ಯಕ್ಷರಿಗೆ 45 ವರ್ಷ ವಯೋಮಿತಿ ನಿಗದಿಪಡಿಸಿದ್ದಾರೆ. ಅದರಂತೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇದರಿಂದ ಯುವ ಮುಖಂಡರಿಗೆ ಹೆಚ್ಚಿನ ಅವಕಾಶ ಸಿಗಲಿದೆ. ರಾಜ್ಯಕ್ಕೆ ಸೀಮಿತವಾಗಿ ಈ ವಯೋಮಿತಿ ನಿಗದಿಪಡಿಸಿ ಕೊಳ್ಳಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದರು.
ವ್ಯಾಪಕ ಜಾಗೃತಿ
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜಾಗೃತಿ ಕಾರ್ಯ ಭರದಿಂದ ಸಾಗಿದೆ. ರಾಜ್ಯದಲ್ಲಿ ಸಂಘಟನಾತ್ಮಕವಾಗಿ 10 ವಿಭಾಗಗಳಿದ್ದು, ಬಹುತೇಕ ಕಡೆ ಪ್ರಮುಖರ ಕಾರ್ಯಾಗಾರ ನಡೆದಿದ್ದು ಸೋಮವಾರದೊಳಗೆ ಪೂರ್ಣಗೊಳ್ಳಲಿದೆ. ಅನಂತರ ಜಿಲ್ಲಾ ಮಟ್ಟದಲ್ಲಿ ಬಳಿಕ ಮಂಡಲ ಹಂತದಲ್ಲಿ ಸಾರ್ವಜನಿಕರನ್ನು ಒಳಗೊಂಡಂತೆ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಅಂತಿಮವಾಗಿ ಜಿಲ್ಲಾ ಮಟ್ಟದಲ್ಲಿ ಬೃಹತ್ ರ್ಯಾಲಿ ನಡೆಸಲು ಚಿಂತಿಸಲಾಗಿದೆ ಎಂದು ಮೂಲಗಳು ಹೇಳಿವೆ.