Advertisement

ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸೋಣ: ಇಂದ್ರಾಳಿ ದಿವಾಕರ ಶೆಟ್ಟಿ

10:36 AM Apr 02, 2021 | Team Udayavani |

ಡೊಂಬಿವಲಿ: ಯಾವುದೇ ಭಾಷೆ, ಸಂಸ್ಕೃತಿ, ಸಾಹಿತ್ಯ ಹಾಗೂ ಕಲೆಗೆ ಯಾವುದೇ ರೀತಿಯ ಗಡಿಯ ನಿರ್ಬಂಧವಿಲ್ಲ. ಆದರೆ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಮುಖ್ಯ. ಆದ್ದರಿಂದ ನಮ್ಮ ಕನ್ನಡ ಭಾಷೆಯ ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಗಳನ್ನು ಸಂಘಟನೆಗಳ ಮೂಲಕ ಸಪ್ತ ಸಾಗರದಾಚೆಯೂ ಉಳಿಸಿ-ಬೆಳೆಸಿಕೊಂಡು ಹೋಗೋಣ ಎಂದು ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ  ಹೇಳಿದರು.

Advertisement

ಮಾ. 28ರಂದು ಡೊಂಬಿವಲಿ ಪೂರ್ವದ ಮಂಜುನಾಥ ವಿದ್ಯಾಲಯದ ಸಭಾಗೃಹದಲ್ಲಿ  ನಡೆದ ಸಂಘದ 53ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 53 ವರ್ಷಗಳ ಹಿಂದೆ ನಮ್ಮ ಹಿರಿಯರು ನೆಟ್ಟ ಡೊಂಬಿವಲಿ ಕರ್ನಾಟಕ ಸಂಘ ಎಂಬ ಪುಟ್ಟ ಸಸಿ ಸಮಸ್ತ ಕನ್ನಡ ಮನಸ್ಸುಗಳ ಅಮೂಲ್ಯ ಸಹಕಾರದಿಂದ ವಿಶಾಲ ವೃಕ್ಷವಾಗಿ ಕನ್ನಡದ ರಾಯಭಾರಿಯಾಗಿ ಹೊರನಾಡಿನಲ್ಲಿ ಕನ್ನಡದ ಕಂಪನ್ನು ಬೀರುವ ಜತೆಗೆ ಸಹಸ್ರಾರು ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ನೀಡಿ ನಾಡಿನ ಜನತೆಯ ಗಮನ ಸೆಳೆಯುತ್ತಿರುವುದು ಹೆಮ್ಮೆಯ ಸಂಗತಿ. ನಿಮ್ಮೆಲ್ಲರ ಕನ್ನಡಾಭಿಮಾನ, ಸಹಾಯ, ಸಹಕಾರದ ಮನೋಭಾವದಿಂದ ಡೊಂಬಿವಲಿ ಕರ್ನಾಟಕ ಸಂಘವು ಪ್ರಸಿದ್ಧಿ  ಪಡೆದಿದೆ. ನಮ್ಮ ಕನ್ನಡಾಭಿಮಾನ ಶಾಶ್ವತವಾಗಿರಬೇಕು. ಅದು ಆಡಳಿತ ಮಂಡಳಿಯ ಚುನಾವಣೆಗೆ ಸ್ಪರ್ಧಿಸುವಲ್ಲಿ  ಮಾತ್ರ ಸೀಮಿತವಾಗಿರಬಾರದು. ಸಂಘದಲ್ಲಿ  ಸಾಕಷ್ಟು ಕೆಲಸಗಳಿವೆ. ಅಧಿಕಾರ ಶಾಶ್ವತವಲ್ಲ, ಚುನಾವಣೆಯಲ್ಲಿ ಪರಾಭವಗೂಂಡ ಮಾತ್ರಕ್ಕೆ ಸಂಘದ ಕಾರ್ಯಚಟುವಟಿಕೆಗಳಿಂದ ದೂರ ಉಳಿಯಬಾರದು ಎಂದು ತಿಳಿಸಿ ಇತ್ತೀಚೆಗೆ ನಡೆದ ಡೊಂಬಿವಲಿ ಕರ್ನಾಟಕ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಮ್ಮೆಲ್ಲರ ಗೆಲುವಿಗೆ ಕಾರಣರಾದ ಸದಸ್ಯ ಬಾಂಧವರನ್ನು ಅಭಿನಂದಿಸಿ ಶುಭ ಹಾರೈಸಿದರು.

ಸಂಘದ ಕಾರ್ಯಾಧ್ಯಕ್ಷ ಸುಕುಮಾರ ಎನ್‌. ಶೆಟ್ಟಿ  ಸ್ವಾಗತಿಸಿ, ಪ್ರಸ್ತಾವಿಸಿ, ಡೊಂಬಿವಲಿ ಕರ್ನಾಟಕ ಸಂಘ ಕನ್ನಡವು ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಯನ್ನು ಉಳಿಸಿ ಬೆಳೆಸುತ್ತಿರುವುದರ ಜತೆಗೆ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ನಿರ್ಮಿಸಿಕೊಂಡು ಮಂಜುನಾಥ ವಿದ್ಯಾಲಯ ಹಾಗೂ ಮಹಾವಿದ್ಯಾಲಯದ ಮುಖಾಂತರ ಸಹಸ್ರಾರು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಸಮಾಜದ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಬಡ ಕನ್ನಡಿಗರ ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಸಹೃದಯಿ ಕನ್ನಡಿಗರು ಹಾಗೂ ಉದಾರ ದಾನಿಗಳ ಕೊಡುಗೆ ಅಪಾರವಾಗಿದೆ. ಈಗಾಗಲೇ ಸುವರ್ಣ ಮಹೋತ್ಸವ ಶೈಕ್ಷಣಿಕ ನಿಧಿಗೆ 1.5 ಕೋ. ರೂ. ಗಳ ನಿಧಿ ಸಂಗ್ರಹಿಸಲಾಗಿದ್ದು, ಇದರ ಬಡ್ಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಕನ್ನಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದರು.

ಆಡಳಿತ ಮಂಡಳಿಯ ಚುನಾವಣೆ ಯಲ್ಲಿ ಭಾರೀ ಬಹಮತದಿಂದ ಗೆಲುವು ಸಾಧಿಸಲು ಸಹಕರಿಸಿದ ಸಮಸ್ತ ಸದಸ್ಯರನ್ನು ಅಭಿನಂದಿಸಿದ ಅವರು, ಸೋಲು-ಗೆಲುವು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ. ಆದ್ದರಿಂದ ನಾವೆಲ್ಲರೂ ಒಂದಾಗಿ ಕನ್ನಡದ ಕೈಂಕರ್ಯದಲ್ಲಿ ತೊಡಗೋಣ. ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಹೆಚ್ಚಿನ ಕಾರ್ಯಕ್ರಮಗಳು ನಡೆಯಲು ಸಾಧ್ಯವಾಗಲಿಲ್ಲ. ಆದರೂ ಸಂಕಷ್ಟದಲ್ಲಿದ್ದ ಸದಸ್ಯರಿಗೆ ಸಹಕರಿಸಿದ್ದೇವೆ ಎಂದು ತಿಳಿಸಿದರು.

ಸುನಂದಾ ಶೆಟ್ಟಿ ಹಾಗೂ ಯೋಗಿನಿ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಗಣ್ಯರು ಜ್ಯೋತಿ ಬೆಳಗುವುದರ ಮೂಲಕ ಮಹಾಸಭೆಯನ್ನು  ಉದ್ಘಾಟಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್‌ ಕುಲಾಲ್‌ ಅವರು 53ನೇ ವಾರ್ಷಿಕ ವರದಿ ವಾಚಿಸಿ, ಹಿರಿಯ ಸದಸ್ಯ ರವಿ ಸನಿಲ್‌ ಅವರ ಸೂಚನೆ ಮತ್ತು ಬಾಬು ಮೊಗವೀರ ಅನುಮೋದನೆ ನೀಡಿದರು. ಜತೆ ಕೋಶಾಧಿಕಾರಿ ಚಿತ್ತರಂಜನ ಆಳ್ವ ಅವರು 2020-2021ನೇ ಸಾಲಿನ ಲೆಕ್ಕಪತ್ರ ಮಂಡಿಸಿ, ಸಂತೋಷ್‌ ಶೆಟ್ಟಿ ಸೂಚನೆಯೊಂದಿಗೆ ಗಂಗಾಧರ ಶೆಟ್ಟಿಗಾರ್‌ ಅನುಮೋದಿಸಿದರು.

Advertisement

2019-20ನೇ ಸಾಲಿನ ಲೆಕ್ಕಪತ್ರ ಕೋಶಾಧಿಕಾರಿ ಲೋಕನಾಥ ಶೆಟ್ಟಿ ಮಂಡಿಸಿ, ಸಂತೋಷ್‌ ಶೆಟ್ಟಿ ಸೂಚನೆಯೊಂದಿಗೆ ಗಂಗಾಧರ ಶೆಟ್ಟಿಗಾರ ಅನುಮೋದಿಸಿದರು. ಮಹಾಸಭೆಯ ಅತ್ಯಂತ ಮಹತ್ವದ ನಿರ್ಣಯಗಳಲ್ಲಿ ಒಂದಾದ ಸುವರ್ಣ ಮಹೋತ್ಸವ ಶಿಕ್ಷಣ ನಿಧಿ ಯೋಜನೆ ಕುರಿತಾದ ವಿಷಯದ ಪ್ರಸ್ತಾವವನ್ನು ಆಡಳಿತ ಮಂಡಳಿ ಮಂಡಿಸಿ, ಗುರುರಾಜ ಪೋತನೀಸ್‌ ಅನುಮೋದಿಸಿದರು.  ಹಿರಿಯ ಸದಸ್ಯರಾದ ಡಾ| ಬಿ. ಆರ್‌. ದೇಶಪಾಂಡೆ, ಗಂಗಾಧರ ಶೆಟ್ಟಿಗಾರ, ಪವನಂಜಯ ಬಲ್ಲಾಳ, ವಸಂತ ಸುವರ್ಣ, ಸಂಜಯ ಪದಕಿ ಮೊದಲಾದವರು ಸಲಹೆ, ಸೂಚನೆ ನೀಡಿದರು.

ಇದೆ ಸಂದರ್ಭ ಫೆ. 28ರಂದು 2021-2023ನೇ ಸಾಲಿಗಾಗಿ ನಡೆದ ನೂತನ ಆಡಳಿತ ಮಂಡಳಿ ಚುನಾವಣೆ ಯಲ್ಲಿ ವಿಜೇತರಾದ ಅಭ್ಯರ್ಥಿಗಳನ್ನು ಚುನಾವಣಾಧಿಕಾರಿ ಡಾ| ರಾಜಶೇಖರ್‌ ಪಾಟೀಲ್‌ ಘೋಷಿಸಿದರು. ಚುನಾವಣೆ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆಸಿಕೂಟ್ಟ  ಡಾ| ರಾಜಶೇಖರ್‌ ಪಾಟೀಲ್‌ ಅವರನ್ನು ಸಂಘದ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಸಂಘದ ನೂತನ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಎ ವಸಂತ್‌ ಕುಮಾರ್‌ ಅವರನ್ನು ಗೌರವಿಸಲಾಯಿತು. ಡಾ| ವಿ. ಎಂ. ಶೆಟ್ಟಿ,  ಡಾ| ದಿಲೀಪ್‌ ಕೊಪರ್ಡೆ, ಜಗನ್ನಾಥ ಶೆಟ್ಟಿ, ಇಂ. ಸತೀಶ್‌ ಆಲಗೂರ, ರಾಜೀವ್‌ ಭಂಡಾರಿ, ರಮೇಶ ಶೆಟ್ಟಿ, ಪ್ರೊ| ಅಜೀತ ಉಮರಾಣಿ, ಪ್ರಭಾಕರ ಶೆಟ್ಟಿ, ಆನಂದ ಶೆಟ್ಟಿ, ನ್ಯಾಯವಾದಿ ಆರ್‌. ಎಂ. ಭಂಡಾರಿ, ದಿನೇಶ್‌ ಕುಡ್ವಾ, ವಸಂತ ಸುವರ್ಣ, ಸುಷ್ಮಾ ಡಿ. ಶೆಟ್ಟಿ, ಯೋಗಿನಿ ಶೆಟ್ಟಿ, ಗೀತಾ ಮೆಂಡನ್‌, ಮಾಧುರಿಕಾ ಬಂಗೇರ, ಅಂಜಲಿ ತೋರವಿ, ಮಂಜುನಾಥ ವಿದ್ಯಾಲಯದ ಮುಖ್ಯ ಶಿಕ್ಷಕ ಆನಂದ ಪಡಸಲಗಿ ಮತ್ತಿತರರಿದ್ದರು.

ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್‌ ಎಲ್‌. ಕುಲಾಲ್‌ ನಿರೂಪಿಸಿದರು. ಜತೆ ಕಾರ್ಯದರ್ಶಿ ರಮೇಶ್‌ ಕಾಖಂಡಕಿ ವಂದಿಸಿದರು. ರಮೇಶ್‌ ಸುವರ್ಣ, ಕಾಂತಿಲಾಲ ಪಾಟೀಲ್‌, ಚಂಚಲಾ ಸಾಲ್ಯಾನ್‌, ಸ್ವಪ್ನಾ ಮೋರೆ ಮಹಾಸಭೆಯ ಯಶಸ್ಸಿಗೆ ಸಹಕರಿಸಿದರು. ಕೊರೊನಾ ಮಾರ್ಗಸೂಚಿ ಯಂತೆ ಅತ್ಯಂತ ಶಿಸ್ತುಬದ್ಧವಾಗಿ ಮಹಾಸಭೆ ನಡೆಯಿತು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ನನ್ನಂತಹ ಓರ್ವ ಸಾಮಾನ್ಯ ಕನ್ನಡಿಗನಿಗೆ ಕನ್ನಡದ ಸೇವೆಗೆ ಅನುವು ಮಾಡಿಕೂಟ್ಟ ಡೊಂಬಿವಲಿ ಕರ್ನಾಟಕ ಸಂಘಕ್ಕೆ ಚಿರಋಣಿಯಾಗಿದ್ದೇನೆ. ಕನ್ನಡಕ್ಕಾಗಿ ಎತ್ತಿದ ತಮ್ಮ ಕೈಗಳು ಕಲ್ಪವೃಕ್ಷವಾಗಲಿ. ನಿಮ್ಮ ಕನ್ನಡದ ಸೇವೆಗೆ ನನ್ನ ಸದಾ ಬೆಂಬಲವಿದೆ. ಡೊಂಬಿವಲಿ ಕರ್ನಾಟಕ ಸಂಘದ ಕೀರ್ತಿ ಎಲ್ಲೆಡೆ ಪಸರಿಸಲಿ. -ಡಾ| ರಾಜಶೇಖರ್‌ ಪಾಟೀಲ್‌, ಸಮ್ಮಾನಿತರು

ಕೋವಿಡ್ ಸಂಕಷ್ಟದ ಮಧ್ಯೆಯೂ ಮಂಜುನಾಥ್‌ ಮಹಾವಿದ್ಯಾನಿಲಯದ ಸಾಧನೆ ಅಭಿನಂದನೀಯ. ಡೊಂಬಿವಲಿಯ ಅಗ್ರಗಣ್ಯ ಮಹಾವಿದ್ಯಾನಿಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಆಡಳಿತ ಮಂಡಳಿಯ ಅಮೂಲ್ಯ ಸಹಕಾರ, ಶಿಕ್ಷಕ-ಶಿಕ್ಷಕೇತರ ಸಿಬಂದಿಯ ಸತತ ಪರಿಶ್ರಮವೇ ಕಾರಣವಾಗಿದೆ. ಸಹಕರಿಸಿದ ಎಲ್ಲರಿಗೂ ವಂದನೆಗಳು.-ಡಾ| ವಿ. ಎಸ್‌. ಅಡಿಗಲ್‌ ಪ್ರಾಂಶುಪಾಲರು, ಡೊಂಬಿವಲಿ ಕರ್ನಾಟಕ ಸಂಘ ಸಂಚಾಲಿತ ಮಂಜುನಾಥ ಮಹಾವಿದ್ಯಾನಿಲಯ

 

-ಚಿತ್ರ-ವರದಿ: ಗುರುರಾಜ ಪೋತನೀಸ್‌

 

Advertisement

Udayavani is now on Telegram. Click here to join our channel and stay updated with the latest news.

Next