Advertisement

ಸೋಂಕಿತರಿಂದ 53 ನವಜಾತ ಶಿಶುಗಳಿಗೆ ಜನನ

04:30 AM Jul 09, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ವೈರಸ್ ಸೋಂಕು ಹೆಚ್ಚಳವಾಗಿ ಎಲ್ಲಡೆ ಸಾವು – ನೋವು ಆತಂಕದ ಛಾಯೆ ಆವರಿಸಿದೆ. ಇಂತಹ ನಕಾರಾತ್ಮಕ ಅಂಶಗಳ ನಡುವೆಯೂ ಅದೇ ಸೋಂಕಿತರಿಂದ ಭವಿಷ್ಯದ ಭರವಸೆಯ ಕುಡಿಗಳು ಜನ್ಮತಳೆಯುತ್ತಿವೆ. ಇದಕ್ಕೆ ನಗರದ ವಿಕ್ಟೋರಿಯಾ ಆವರಣದ ಟ್ರಾಮಾ ಮತ್ತು ತುರ್ತು ಆರೈಕೆ ಕೇಂದ್ರ ಸಾಕ್ಷಿಯಾಗಿದೆ. ಕೋವಿಡ್‌ 19 ವೈರಸ್ ಸೋಂಕು ಎಂದರೆ ಬದುಕುವುದೇ ಕಷ್ಟ ಎಂಬ ಕಲ್ಪನೆ ಇಂದಿಗೂ ಹಲವರಲ್ಲಿದೆ. ಆದರೆ, ನಗರದಲ್ಲಿ ಸೋಂಕಿತರಾಗಿದ್ದ 50 ಗರ್ಭಿಣಿಯರಿಗೆ ನಿರಾತಂಕವಾಗಿ ಹೆರಿಗೆಯಾಗಿದೆ.

Advertisement

ಮೂವರಿಗೆ ಅವಳಿ ಮಕ್ಕಳಾಗಿದ್ದು, ಒಟ್ಟು 53 ನವಜಾತ ಶಿಶುಗಳು ಜನಿಸಿವೆ. ಅಚ್ಚರಿ ಎಂದರೆ ಯಾವ ಶಿಶುವಿಗೂ ಕೋವಿಡ್‌ 19 ಸೋಂಕು ದೃಢಪಟ್ಟಿಲ್ಲ. ನಗರದಲ್ಲಿ ಸೋಂಕು ತೀವ್ರಗೊಂಡಿದ್ದು, ಅನೇಕ ಗರ್ಭಿಣಿಯರು ಕೂಡಾ ಸೋಂಕಿತರಾಗುತ್ತಿದ್ದಾರೆ. ಅಂತಹವರನ್ನು ನಗರದ ವಿಕ್ಟೋರಿಯಾ ಆವರಣದ ಟ್ರಾಮ ಮತ್ತು ತುರ್ತು ನಿಗಾ ಆಸ್ಪತ್ರೆಯಲ್ಲಿ ದಾಖಲಿಸಲಾಗುತ್ತಿದೆ. ಬಳಿಕ ವಾಣಿವಿಲಾಸ ಆಸ್ಪತ್ರೆಯ ವೈದ್ಯರ ಸಮನ್ವಯತೆಯೊಂದಿಗೆ ಹೆರಿಗೆ ಮಾಡಿಸಲಾಗುತ್ತಿದೆ.

ಜನಿಸಿದ ಶಿಶುವನ್ನು ತಾಯಿಯಿಂದ ಬೇರ್ಪಡಿಸಿ ವಾಣಿವಿಲಾಸ ಆಸ್ಪತ್ರೆಯಲ್ಲಿಟ್ಟು ಆರೈಕೆ ಮಾಡಲಾಗುತ್ತಿದೆ. ಇನ್ನು ತಾಯಿಗೆ ಸೋಂಕು ಗುಣಮುಖವಾಗುವವರೆಗೂ ನಿಗಾ ಆರೈಕೆ ಕೇಂದ್ರದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇ.8 ರಂದು ಮೊದಲ ಸೋಂಕಿತ ಗರ್ಭಿಣಿಗೆ ಹೆರಿಗೆಯಾಗಿತ್ತು. ಅಲ್ಲಿಂದ ಜು.8ರವರೆಗೂ 50 ಸೋಂಕಿತ ಗರ್ಭಿಣಿಯರಿಗೆ ಹೆರಿಗೆಯಾಗಿದೆ. ಈ ಪೈಕಿ 13 ಸಾಮಾನ್ಯ ಹೆರಿಗೆ ಆಗಿದ್ದು, ಉಳಿದವು ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ. ಹೆರಿಗೆ ಸಂದರ್ಭದಲ್ಲಿ ಸಿಬ್ಬಂದಿ ಸೇರಿದಂತೆ ಶಿಶುವಿಗೂ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ.

ಈವರೆಗೂ ಹೆರಿಗೆಯಾದ ತಾಯಂದಿರು ಮತ್ತು ನವಜಾತ ಶಿಶುಗಳು ಇಬ್ಬರು ಆರೋಗ್ಯವಾಗಿದ್ದಾರೆ. ತಾಯಿಗೆ ಸೋಂಕು ದೃಢಪಟ್ಟು 14 ದಿನಗಳ ಬಳಿಕ ಮತ್ತೊಮ್ಮೆ ಸೋಂಕು ಪರೀಕ್ಷೆ ಕೈಗೊಂಡು ವರದಿ ನೆಗೆಟಿವ್ ಬಂದ ಬಳಿಕ ಮಗುವನ್ನು ನೀಡಲಾಗುತ್ತಿದೆ ಎಂದು ಈ ವಿಕ್ಟೋರಿಯಾ ಟ್ರಾಮ ಮತ್ತು ತುರ್ತು ಆರೈಕೆ ಕೇಂದ್ರದ ನೋಡಲ್ ಅಧಿಕಾರಿ ಡಾ.ಆಸೀಮಾ ಬಾನು ಮಾಹಿತಿ ನೀಡಿದರು. ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಾರ್ಡ್ ಅನ್ನು ಹೆರಿಗೆ ವಾರ್ಡ್ ಆಗಿ ಪರಿವರ್ತಿಸಲಾಗಿದೆ. ಹೆರಿಗೆ ಮತ್ತು ಗರ್ಭಿಣಿಯರ ಆರೈಕೆಗೆ 15 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ತಾಯಿ ಹಾಲಿನ ಬದಲಿಗೆ ಲ್ಯಾಕ್ಟೋಜನ್: ಟ್ರಾಮಾ ಸೆಂಟರ್‍ನಲ್ಲಿ ಮಗು ಜನಿಸಿದ ಕೂಡಲೇ ವಾಣಿವಿಲಾಸ ಆಸ್ಪತ್ರೆ ಸ್ಥಳಾಂತರಿಸಲಾಗುತ್ತಿದೆ. ಸೋಂಕಿತೆಯರಿಗೆ ಜನಿಸಿದ ಮಗುವಿಗೆ ಪ್ರತ್ಯೇಕ ವಾರ್ಡ್ ಮಾಡಿ ಮುಂಜಾಗ್ರತಾ ಕ್ರಗೊಳೊಂದಿಗೆ ಆರೈಕೆ ಮಾಡಲಾಗುತ್ತಿದೆ. ಸಾಮಾನ್ಯ ನವಜಾತ ಶಿಶುಗಳಂತೆ ಸೋಂಕಿತೆಯರ ಶಿಶುಗಳನ್ನು ಮಕ್ಕಳ ತಜ್ಞರು ಆರೈಕೆ ಮಾಡುತ್ತಿದ್ದಾರೆ. ತಾಯಿ ಹಾಲಿನ ಬದಲು ಲ್ಯಾಕ್ಟೋಜನ್ ನೀಡಲಾಗುತ್ತದೆ. ಶಿಶು ಜನಿಸಿದ 24 ರಿಂದ 48 ಗಂಟೆಯೊಳಗೆ ಗಂಟಲು ದ್ರವ ತೆಗೆದು ಸೋಂಕು ಪರೀಕ್ಷೆಗೊಳಪಡಿಸಲಾಗುತ್ತಿದೆ.

Advertisement

ತಾಯಿ ಗುಣಮುಖರಾದ ಹಿನ್ನೆಲೆ ಕಳೆದ ಎರಡು ದಿನಗಳಿಂದ 14 ಶಿಶುಗಳ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವಾಣಿವಿಲಾಸ ಆಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಡಾ.ಸಂತೋಷ್ ಪ್ರಭಾ ತಿಳಿಸಿದರು. ಇನ್ನು ಶಿಶುವಿನ ಸೋಂಕು ಪರೀಕ್ಷಾ ವರದಿ ನೆಗೆಟಿವ್ ಬಂದ ಕೂಡಲೇ ತಾಯಿಯ ಸಂಬಂಧಿಗಳು ಆರೈಕೆ ಮಾಡುತ್ತಾರೆ. 14 ದಿನದ ಬಳಿಕವೂ ತಾಯಿ ಸೋಂಕು ಪರೀಕ್ಷಾ ವರದಿ ಪಾಸಿಟಿವ್ ಬಂದರೆ ಅಥವಾ ಸೋಂಕು ಲಕ್ಷಣಗಳಿದ್ದರೆ ಮಗುವನ್ನು ಸಂಬಂಧಿಕರೆ ಮನೆಗೆ ಕರೆದೊಯ್ಯಿದು ಆರೈಕೆ ಮಾಡಬುದು ಎಂದು ವೈದ್ಯರು ತಿಳಿಸಿದ್ದಾರೆ.

ಗರ್ಭಿಣಿಯರಿಗೆ ಸೋಂಕು ತಗುಲಿದರೆ ಭಯಪಡುವ ಅಗತ್ಯವಿಲ್ಲ. ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಹೆರಿಗೆ ಮಾಡಿಸಲಾಗುತ್ತಿದೆ. ಸೋಂಕಿತ ಗರ್ಭಿಣಿಯರಂತೆ ಸಾಮಾನ್ಯರಂತೆಯೇ ಹೆರಿಗೆಯಾಗುತ್ತಿದೆ. ಈವರೆಗೂ ಮೂವರಿಗೆ ಅವಳಿ ಜವಳಿ ಮಕ್ಕಳು ಜನಿಸಿದ್ದು, 13 ಸಾಮಾನ್ಯ ಹೆರಿಗೆ ಆಗಿದೆ. ಗರ್ಭಿಣಿಯರ ಗುಣಮುಖ ದರವು ಅತ್ಯುತ್ತಮವಾಗಿದೆ.
-ಡಾ.ಎಸ್.ಬಾಲಾಜಿ ಪೈ, ವಿಶೇಷ ಅಧಿಕಾರಿ, ಟ್ರಾಮಾ ತುರ್ತು ಆರೈಕೆ ಕೇಂದ್ರ

* ಜಯಪ್ರಕಾಶ್ ಬಿರಾದಾರ್

Advertisement

Udayavani is now on Telegram. Click here to join our channel and stay updated with the latest news.

Next