Advertisement

ಬೆಳಕಿನ ನಿರೀಕ್ಷೆಯಲ್ಲಿ 5,221 ಮನೆ

11:18 AM May 08, 2022 | Team Udayavani |

ಉಡುಪಿ: ಜಿಲ್ಲೆಯಲ್ಲಿ ಬೆಳಕು ಯೋಜನೆಯ ಮೊದಲ ಮತ್ತು 2ನೇ ಹಂತದಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಲು 8,341 ಮನೆಗಳನ್ನು ಗುರುತಿಸಿದ್ದು ಅದರಲ್ಲಿ 3,120 ಮನೆಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸಲಾಗಿದೆ. ಇನ್ನೂ 5,221 ಮನೆಗಳು ವಿದ್ಯುದ್ದೀಕರಣಕ್ಕೆ ಬಾಕಿಯಿದೆ.

Advertisement

ಪ್ರತೀ ಮನೆಗೂ ವಿದ್ಯುತ್‌ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಬೆಳಕು ಯೋಜನೆಯನ್ನು ಜಾರಿಗೆ ತರಲಾಗಿದೆ. ಅದರಂತೆ ವಿದ್ಯುದ್ದೀಕರಣಕ್ಕೆ ಬಾಕಿ ಇರುವ ಮನೆಗಳನ್ನು ತಾಲೂಕುವಾರು ಪತ್ತೆ ಹಚ್ಚಿ, ವಿದ್ಯುತ್‌ ಸಂಪರ್ಕ ಒದಗಿಸುವ ಕಾರ್ಯ ಇಂಧನ ಇಲಾಖೆಯಿಂದ ನಡೆಯುತ್ತಿದೆ.

ಉಡುಪಿ, ಕಾರ್ಕಳ ಹಾಗೂ ಕುಂದಾಪುರ ತಾಲೂಕಿನಲ್ಲಿ ಮೊದಲ ಹಂತದಲ್ಲಿ 4,066 ಮನೆಗಳನ್ನು ಗುರುತಿಸಲಾಗಿತ್ತು. ಅದರಲ್ಲಿ 3,120 ಮನೆಗಳನ್ನು 8.25 ಕೋ. ರೂ. ವೆಚ್ಚದಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. 946 ಮನೆಗಳಿಗೆ ಇನ್ನೂ ವಿದ್ಯುತ್‌ ಸಂಪರ್ಕ ನೀಡಿಲ್ಲ. ಹಾಗೆಯೇ 2ನೇ ಹಂತದಲ್ಲಿ 4,275 ಮನೆಗಳನ್ನು ಗುರುತಿಸಲಾಗಿದ್ದು, ಇನ್ನೂ ಒಂದು ಮನೆಗೂ ಸಂಪರ್ಕ ಕಲ್ಪಿಸಿಲ್ಲ, ಟೆಂಡರ್‌ ಪ್ರಕ್ರಿಯೆ ಇತ್ಯಾದಿ ಪೂರ್ಣಗೊಂಡ ಅನಂತರ ಸಂಪರ್ಕ ಒದಗಿಸುವ ಕಾರ್ಯ ಆಗಿದೆ.

‘ಬೆಳಕು’ ಪಡೆಯುವುದು ಹೇಗೆ?

ಬೆಳಕು ಯೋಜನೆಯಡಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ವಿದ್ಯುತ್‌ ಸಂಪರ್ಕವನ್ನು ಉಚಿತವಾಗಿ ಸರಕಾರದಿಂದ ನೀಡಲಾಗುತ್ತದೆ. ಇದಕ್ಕೆ ಸಂಬಂಧಪಟ್ಟ ಗ್ರಾ.ಪಂ.ನಿಂದ ಎನ್‌ ಒಸಿ ಕೂಡ ಬೇಕಾಗುವುದಿಲ್ಲ. ಈ ಹಿಂದೆ ಕನ್ವರ್ಶನ್‌, ಡೋರ್‌ ನಂಬರ್‌ ಇತ್ಯಾದಿ ಮಾಹಿತಿಗಳನ್ನು ಕೇಳುತ್ತಿದ್ದರು. ಈಗ ಅದ್ಯಾವೂದು ಬೇಕಾಗಿಲ್ಲ. ರೇಷನ್‌ ಕಾರ್ಡ್‌ ಮತ್ತು ಆಧಾರ್‌ ಕಾರ್ಡ್‌ ಹೊಂದಿದ್ದು, ಕುಟುಂಬದೊಂದಿಗೆ ವಾಸವಾಗಿರುವ ಮನೆ(ಲಕ್ಷುರಿಯಾಗಿರಬಾರದು)ಯಿದ್ದರೆ ಯೋಜನೆ ಪಡೆಯಬಹುದು. ಮೆಸ್ಕಾಂನ ತಮ್ಮ ವ್ಯಾಪ್ತಿಯ ಉಪವಿಭಾಗಕ್ಕೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದು. ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಬೆಳಕು ಯೋಜನೆಯಡಿ ವಿದ್ಯುತ್‌ ಸಂಪರ್ಕ ಪಡೆಯಲು ಅರ್ಹರಿದ್ದರೆ ತತ್‌ಕ್ಷಣವೇ ಒದಗಿಸುವ ಕಾರ್ಯ ಆಗಲಿದೆ ಎಂದು ಮೆಸ್ಕಾಂನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement

ವಿದ್ಯುತ್‌ ಸಂಪರ್ಕ ಬಾಕಿ ಇರಲು ಕಾರಣ

ಜಿಲ್ಲೆಯ ಬಹುತೇಕ ಮನೆಗಳಿಗೆ ಇಂಧನ ಇಲಾಖೆಯ ವಿವಿಧ ಯೋಜನೆಯಡಿ ಈಗಾಗಲೇ ವಿದ್ಯುತ್‌ ಸಂಪರ್ಕ ನೀಡಲಾಗಿದೆ. ಅದಾಗ್ಯೂ 5 ಸಾವಿರಕ್ಕೂ ಅಧಿಕ ಮನೆಗಳು ಇನ್ನು ಕತ್ತಲಲ್ಲೆ ಇವೆ. ಇದಕ್ಕೆ ಪ್ರಮುಖ ಕಾರಣ, ವಿದ್ಯುತ್‌ ಲೈನ್‌ ಅಳವಡಿಸಲು ಸಾಧ್ಯವಿರದ ಗುಡ್ಡಗಾಡು ಪ್ರದೇಶ, ಕುದ್ರು ಇತ್ಯಾದಿ ಪ್ರದೇಶ. ಹೊಸ ಮನೆ ನಿರ್ಮಾಣವಾಗಿರುವುದು ಸೇರಿದಂತೆ ವಿದ್ಯುತ್‌ ಸಂಪರ್ಕ ನೀಡಲು ಸಾಧ್ಯವಾಗದ ಹಳ್ಳಿಗಳಲ್ಲಿ ಮಾತ್ರ ಈ ರೀತಿಯ ಮನೆಯಿದ್ದು, ಅದನ್ನು ಗುರುತಿಸಲಾಗುತ್ತಿದೆ.

ಶೆಡ್‌ಗಳಿಗೆ ನೀಡುವುದಿಲ್ಲ

ಈ ಯೋಜನೆಯ ಲಾಭ ಪಡೆಯಬೇಕು ಎಂಬ ದುರಾಸೆಯಿಂದ ಅಥವಾ ಅನ್ಯ ಉದ್ದೇಶಕ್ಕೆ ಇದನ್ನು ಬಳಸಲು ಕೆಲವರು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಾಣ ಮಾಡಿ, ಬೆಳಕು ಯೋಜನೆಯಡಿ ವಿದ್ಯುತ್‌ಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಅಂತಹ ಯಾವುದೇ ಅರ್ಜಿಗಳನ್ನು ಬೆಳಕು ಯೋಜನೆಯಡಿ ಪರಿಗಣಿಸುವುದಿಲ್ಲ. ಖಾಸಗಿ ಶೆಡ್‌ಗಳಿಗೂ ಈ ಯೋಜನೆಯಡಿ ವಿದ್ಯುತ್‌ ನೀಡುವುದಿಲ್ಲ. ಕುಟುಂಬ ವಾಸಿಸುವ ಮನೆಗೆ ಮಾತ್ರ ವಿದ್ಯುತ್‌ ನೀಡಲಾಗುತ್ತದೆ ಎಂದು ಮೆಸ್ಕಾಂ ಅಧೀಕ್ಷಕ ನರಸಿಂಹ ಪಂಡಿತ್‌ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next