Advertisement

ಚರ್ಮಗಂಟು ರೋಗಕ್ಕೆ 5120 ಜಾನುವಾರು ಬಲಿ

06:34 PM Dec 21, 2022 | Team Udayavani |

ಬೆಳಗಾವಿ: ಜಾನುವಾರುಗಳಿಗೆ ಅಂಟಿ ಕೊಂಡಿರುವ ಚರ್ಮಗಂಟು ರೋಗ ಸಾಕಷ್ಟು ಅನಾಹುತಗಳಿಗೆ ಕಾರಣವಾಗುವುದರ ಜತೆಗೆ ಜಾನುವಾರು ಮತ್ತು ಅದರ ಮಾಲೀಕರಿಗೆ ಬಹಳ ಸಂಕಷ್ಟ ತಂದೊಡ್ಡಿದೆ. ರೋಗ ನಿಯಂತ್ರಣಕ್ಕೆ ಬಂದಿದೆ ಎಂದು ಸರಕಾರ ಹೇಳುತ್ತಿದೆಯಾದರೂ ರೈತ ಸಮುದಾಯದಲ್ಲಿ ಮೂಡಿರುವ ಆತಂಕ ಇನ್ನೂ ದೂರವಾಗಿಲ್ಲ.

Advertisement

ಇದಕ್ಕೆ ಗಡಿ ಜಿಲ್ಲೆ ಬೆಳಗಾವಿ ಸಹ ಹೊರತಾಗಿಲ್ಲ. ಕಳೆದ ಐದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಚರ್ಮರೋಗದಿಂದ 5120 ಜಾನುವಾರುಗಳು ಮೃತಪಟ್ಟಿರುವದೇ ಈ ಆತಂಕಕ್ಕೆ ಸಾಕ್ಷಿ. ರೋಗದ ನಿಯಂತ್ರಣಕ್ಕೆ ಪಶುಪಾಲನಾ ಇಲಾಖೆ ಸಮರೋಪಾದಿಯಲ್ಲಿ ಲಸಿಕಾ ವಿತರಣೆ ಕಾರ್ಯಕ್ರಮ ಜಾರಿಗೊಳಿಸಿದ್ದರಿಂದ ಸಾವಿನ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ದುಗುಡ ಮಾತ್ರ ಇನ್ನೂ ಉಳಿದುಕೊಂಡಿದೆ.

ಲಭ್ಯ ಮಾಹಿತಿಯಂತೆ ಈಗ ಜಿಲ್ಲೆಯಲ್ಲಿ ಪ್ರತಿನಿತ್ಯ 488 ಜಾನುವಾರುಗಳಲ್ಲಿ ಈ ರೋಗ ಕಾಣಿಸಿಕೊಳ್ಳುತ್ತಿದೆ. ಈ ಮೊದಲು ದಿನಕ್ಕೆ 1000 ಕ್ಕೂ ಹೆಚ್ಚು ಜಾನುವಾರುಗಳಲ್ಲಿ ಚರ್ಮರೋಗ ಕಾಣಿಸಿಕೊಳ್ಳುತ್ತಿತ್ತು. ಸಾವಿನ ಸಂಖ್ಯೆ 100 ರ ಗಡಿಯಲ್ಲಿತ್ತು. ಈಗ ಇದರ ಪ್ರಮಾಣ 76 ಕ್ಕೆ ಇಳಿಕೆಯಾಗಿದೆ. ಸಕಾಲಕ್ಕೆ ಲಸಿಕೆ ವಿತರಣೆಯಿಂದ ರೋಗ ಹತೋಟಿಗೆ ಬರುತ್ತಿದೆ ಎಂಬುದು ಪಶುವೈದ್ಯಾಧಿಕಾರಿಗಳ ವಿಶ್ವಾಸ.

ಜಿಲ್ಲೆಯಾದ್ಯಂತ ಲಸಿಕಾಕರಣವನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗಿದೆ. ಲಸಿಕೆ ಸಂಗ್ರಹದಲ್ಲಿ ಯಾವುದೇ ಕೊರತೆ ಇಲ್ಲ. ಅನುದಾನದ ಕೊರತೆಯ ಸಮಸ್ಯೆಯೂ ಇಲ್ಲ. ಜಿಲ್ಲೆಯಲ್ಲಿ ಈಗ ಪ್ರತಿನಿತ್ಯ 13342 ಜಾನುವಾರುಗಳಿಗೆ ಲಸಿಕೆ ಹಾಕಲಾಗುತ್ತಿದೆ. ಇದುವರೆಗೆ 7,42,997 ಜಾನುವಾರುಗಳಿಗೆ ಲಸಿಕೆ ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ 5.93 ಲಕ್ಷ ಡೋಸ್‌ ಲಸಿಕೆ ಲಭ್ಯವಿದೆ ಎಂಬುದು ಅಧಿಕಾರಿಗಳ ಹೇಳಿಕೆ.

13 ಲಕ್ಷ ಜಾನುವಾರು: ಜಿಲ್ಲೆಯಲ್ಲಿ ಆಕಳು, ಎಮ್ಮೆ, ಎತ್ತು ಸೇರಿದಂತೆ ಒಟ್ಟು 13,93,711 ಜಾನುವಾರುಗಳಿವೆ. ಕಳೆದ ಆ. 1 ರಿಂದ ಡಿ. 16 ರವರೆಗೆ ವರದಿಯಾದಂತೆ ಜಿಲ್ಲೆಯ 1,077 ಗ್ರಾಮಗಳಲ್ಲಿ 42,225 ಜಾನುವಾರುಗಳಲ್ಲಿ ಈ ಚರ್ಮರೋಗ ಕಾಣಿಸಿಕೊಂಡಿದೆ. ಅದರಲ್ಲಿ 23,763 ಜಾನುವಾರು ಚೇತರಿಸಿಕೊಂಡಿವೆ. ಆದರೆ ಕಳೆದ ಐದು ತಿಂಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿರುವದು ಸಹಜವಾಗಿಯೇ ಆತಂಕ ಉಂಟುಮಾಡಿದೆ.

Advertisement

ಕಳೆದ 15 ದಿನಗಳ ಹಿಂದೆ ಜಿಲ್ಲೆಯಲ್ಲಿ ಪ್ರತಿನಿತ್ಯ 130 ಜಾನುವಾರು ಅಸುನೀಗುತ್ತಿದ್ದವು. ಇದರ ಪ್ರಮಾಣ ಈಗ 70 ರಿಂದ 76 ಕ್ಕೆ ಇಳಿಕೆಯಾಗಿದೆ. ಇದುವರೆಗೆ 7.42 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಿರುವದರಿಂದ ರೋಗವು ಸಹ ನಿಯಂತ್ರಣಕ್ಕೆ ಬಂದಿದೆ ಎಂಬುದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳ ಹೇಳಿಕೆ. ಬೆಳಗಾವಿ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 6272 ಜಾನುವಾರುಗಳು ಈ ರೋಗಕ್ಕೆ ತುತ್ತಾಗಿದ್ದರೆ ಅಥಣಿಯಲ್ಲಿ 3207,
ಕಾಗವಾಡದಲ್ಲಿ 2088, ಬೆ„ಲಹೊಂಗಲದಲ್ಲಿ 3549, ಚಿಕ್ಕೋಡಿಯಲ್ಲಿ 1774, ಗೋಕಾಕದಲ್ಲಿ 4562, ಹುಕ್ಕೇರಿಯಲ್ಲಿ 1483, ಕಿತ್ತೂರಿನಲ್ಲಿ 1909, ಖಾನಾಪುರದಲ್ಲಿ 1459, ಮೂಡಲಗಿಯಲ್ಲಿ 1696, ರಾಮದುರ್ಗದಲ್ಲಿ 4254, ನಿಪ್ಪಾಣಿಯಲ್ಲಿ 1027, ಸವದತ್ತಿಯಲ್ಲಿ 5061 ಮತ್ತು ರಾಯಬಾಗ ತಾಲೂಕಿನಲ್ಲಿ 3884 ಜಾನುವಾರುಗಳಿಗೆ ಈ ರೋಗ ಅಂಟಿಕೊಂಡಿದೆ.

ಅದರಂತೆ ಬೆಳಗಾವಿ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 751 ಜಾನುವಾರುಗಳು ಮೃತಪಟ್ಟಿವೆ. ಅತೀ ಕಡಿಮೆ ಅಂದರೆ 103 ಜಾನುವಾರುಗಳು ನಿಪ್ಪಾಣಿಯಲ್ಲಿ ಮೃತಪಟ್ಟಿವೆ.

ಚರ್ಮಗಂಟು ರೋಗದಿಂದ ಮೃತಪಟ್ಟಿದ್ದ 230 ಜಾನುವಾರುಗಳ ಮಾಲೀಕರಿಗೆ ಪ್ರಥಮ ಹಂತವಾಗಿ ಒಟ್ಟು 55 ಲಕ್ಷ ಪರಿಹಾರ ಕೊಡಲಾಗಿದೆ. ಬಾಕಿ ಉಳಿದ ಜಾನುವಾರು ಮಾಲೀಕರಿಗೆ ಪರಿಹಾರ ವಿತರಿಸಲು ಸರ್ಕಾರದಿಂದ 9.13 ಕೋಟಿ ಹಣ ಬಿಡುಗಡೆಯಾಗಿದೆ. ಹಂತ ಹಂತವಾಗಿ ರೈತರ ಬ್ಯಾಂಕ್‌ ಖಾತೆಗೆ ಪರಿಹಾರದ ಹಣ ಜಮಾ ಆಗಲಿದೆ.
ಡಾ|ರಾಜೀವ ಕೊಲೇರ,
ಉಪನಿರ್ದೇಶಕ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ

ಚರ್ಮಗಂಟು ರೋಗ ಜಿಲ್ಲೆಯ ರೈತರಲ್ಲಿ ಸಾಕಷ್ಟು ಆತಂಕ ಉಂಟುಮಾಡಿದೆ. ಸಾವಿರಾರು ಜಾನುವಾರುಗಳು ಈ ರೋಗಕ್ಕೆ ಬಲಿಯಾಗಿವೆ. ಆದರೆ ಸರಕಾರ ಮಾತ್ರ ಬಲಿಯಾದ ಜಾನುವಾರುಗಳ ಮಾಲೀಕರಿಗೆ ಅತ್ಯಲ್ಪ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿರುವುದು ಸರಿಯಲ್ಲ. ಈ ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ 80 ಸಾವಿರದಿಂದ ಒಂದು ಲಕ್ಷ ರೂ ವರೆಗೆ ಪರಿಹಾರ ನೀಡಬೇಕು.
ಸಿದಗೌಡ ಮೋದಗಿ,
ಅಧ್ಯಕ್ಷ, ಭಾರತೀಯ ಕೃಷಿಕ ಸಮಾಜ

ಕೇಶವ ಆದಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next