Advertisement

ಅಕ್ರಮ ಶೇಖರಣೆ ಮಾಡಿದ್ದ 510 ಚೀಲ ರಸಗೊಬ್ದರ ವಶ

04:25 PM Oct 04, 2022 | Team Udayavani |

ಗುಂಡ್ಲುಪೇಟೆ: ಜಮೀನೊಂದರಲ್ಲಿ ಅಕ್ರಮ ವಾಗಿ ಶೇಖರಿಸಿಟ್ಟಿದ್ದ 510 ಚೀಲ ರಸಗೊಬ್ಬರ ವಶವನ್ನು ಪೊಲೀಸರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಶಿವಪುರ ಗ್ರಾಮ ಹೊರವಲಯ ದಲ್ಲಿ ಭಾನುವಾರ ರಾತ್ರಿ ನಡೆದಿದೆ.

Advertisement

ಗ್ರಾಮದ ಹೊರವಲಯದ ಗೌರಮ್ಮ ಮಹೇಶ್‌ಗೆ ಸೇರಿದ ಜಮೀನಿನಲ್ಲಿ ಕರ್ನಾಟಕದ ರಸಗೊಬ್ಬರವಾದ ನಾಗಾರ್ಜುನ್‌, ಸ್ಪಿಕ್‌, ಉಜ್ವಲ್‌ ಮೂಟೆಗಳನ್ನು ದಾಸ್ತಾನಿರಿಸಿ ಅಕ್ರಮವಾಗಿ ತಮಿಳುನಾಡು, ಕೇರಳಕ್ಕೆ ಸಾಗಿಸಲು ಸಿದ್ಧತೆ ನಡೆಸುತ್ತಿದ್ದರು. ಆ ವೇಳೆ ಪೊಲೀಸರು, ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ 2 ಲಕ್ಷ ರೂ.ನ 510 ಗೊಬ್ಬರದ ಚೀಲ, ಲಾರಿ, ಅದರ ಚಾಲಕ, ಕೆಲಸಗಾರರನ್ನು ವಶಕ್ಕೆ ಪಡೆದಿದ್ದಾರೆ.

ಗೊಬ್ಬರ ಚೀಲ ಬದಲಾಯಿಸಿ ಸಾಗಣೆ: ರಾಜ್ಯದಲ್ಲಿ ಸಮರ್ಪಕವಾಗಿ ಯೂರಿಯಾ, ರಸಗೊಬ್ಬರ ಸಿಗದೆ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಸಬ್ಸಿಡಿ ದರದಲ್ಲಿ ನೀಡುವ ಕರ್ನಾಟಕದ ರಸಗೊಬ್ಬರವನ್ನು ಪ್ಯಾರಾಪಿನ್‌ ಬಾಂಡ್‌ ಎಂಬ ಹೆಸರಿನ ಚೀಲಕ್ಕೆ ಬದಲಾಯಿಸಿ ಕೇರಳ ಮತ್ತು ತಮಿಳುನಾಡಿಗೆ ದುಪ್ಪಟ್ಟು ಬೆಲೆಗೆ ಸಾಗಣೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಇದರ ವಿರುದ್ಧ ಜಿಲ್ಲಾಧಿಕಾರಿ ಕೂಡಲೇ ಗಮನ ಹರಿಸಬೇಕೆಂದು ರೈತ ಮುಖಂಡ ಹಂಗಳ ಮಾಧು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಘಟನಾ ಸ್ಥಳಕ್ಕೆ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಮಧುಸೂಧನ್‌, ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್‌, ಪೊಲೀಸ್‌ ಇನ್ಸ್‌ ಪೆಕ್ಟರ್‌ ಮುದ್ದುರಾಜು ಭೇಟಿ ನೀಡಿ ಪರಿಶೀಲನೆ ನಡೆಸಿ ದಾಸ್ತಾನಿಸಿದ್ದ ರಸಗೊಬ್ಬರವನ್ನು ವಶಕ್ಕೆ ಪಡೆದು ತೋಟಗಾರಿಗೆ ಬೆಳೆಗಾರರ ಸಹಕಾರ ಸಂಘದ ಗೋಡನ್‌ಗೆ ರವಾನಿಸಲಾಗಿದೆ. ಈ ಕುರಿತು ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈತರಿಗೆ ಸಬ್ಸಿಡಿ ದರದಲ್ಲಿ ನೀಡುವ ನೂರಾರು ಮೂಟೆ ರಸ ಗೊಬ್ಬರವನ್ನು ಅಕ್ರಮವಾಗಿ ಕೇರಳ ಮತ್ತು ತಮಿಳುನಾಡಿಗೆ ಸಾಗಣೆ ಮಾಡಲಾಗುತ್ತಿದೆ. ಇದರ ಹಿಂದೆ ರಾಜಕೀಯ ವ್ಯಕ್ತಿಗಳ ಕೈವಾಡವಿದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ, ರೈತರಿಗೆ ಆಗುತ್ತಿರುವ ಅನ್ಯಾಯ ನಿಲ್ಲಿಸಬೇಕು. ಇಲ್ಲದಿದ್ದರೆ ಕೃಷಿ ಇಲಾಖೆ ಕಚೇರಿ ಎದುರು ಪ್ರತಿಭಟಿಸಲಾಗುವುದು. -ಶಿವಪುರ ಮಹದೇವಪ್ಪ, ರೈತ ಮುಖಂಡ

Advertisement

ರಸಗೊಬ್ಬರ ಅಕ್ರಮ ದಾಸ್ತಾನಿರಿಸಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 500ಕ್ಕೂ ಅಧಿಕ ಮೂಟೆ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಪೊಲೀಸ್‌ ಇಲಾಖೆಗೆ ದೂರು ನೀಡಿದ್ದು, ತನಿಖೆ ನಂತರ ಸತ್ಯಾಸತ್ಯತೆ ಹೊರಬೀಳಲಿದೆ. -ಪ್ರವೀಣ್‌, ಕೃಷಿ ಇಲಾಖೆ ಸಹಾಯಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next