ಬೆಂಗಳೂರು: ಕನ್ನಡ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ದಿಟ್ಟತನ ತೋರದಿದ್ದರೆ ಮುಂದೊಂದು ದಿನ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕನ್ನಡ ಭಾಷಣಕಾರರು ಬೇಕಾಗಿದ್ದಾರೆ ಎಂಬ ಜಾಹೀರಾತು ನೀಡುವ ದುರ್ದೆವ ಎದುರಾದೀತು ಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.
ಸಪ್ನ ಬುಕ್ ಹೌಸ್ ಬುಧವಾರ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ “ನುಡಿ ನಮನ-2017′ ಕನ್ನಡ ರಾಜ್ಯೋತ್ಸವ ಮತ್ತು ಸಪ್ನ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ಶೇ.24ರಷ್ಟು ಮಂದಿ ಮಾತ್ರವೇ ಕನ್ನಡ ಮಾತನಾಡಲು ಹಾಗೂ ಬರೆಯಲು ಬಲ್ಲವರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಕನ್ನಡದ ಗಂಭೀರ ಸ್ಥಿತಿ ಎದುರಾಗಲಿದೆ ಎಂದರು.
ಕನ್ನಡ ಭಾಷೆ ಬಗ್ಗೆ ಅಲಕ್ಷ್ಯ ತೋರುವ ಶಾಲೆಗಳಿಂದ ಕನ್ನಡ ಉಳಿಯುವುದು ಸಾಧ್ಯವಿಲ್ಲ. ಹಾಗಾಗಿ, ಕನ್ನಡ ಮಾತನಾಡಿದರೆ ದಂಡ ವಿಧಿಸುವ ಮತ್ತು ಕನ್ನಡದ ಬಗ್ಗೆ ಕೀಳರಿಮೆ ಮೂಡಿಸುವ ಶಾಲೆಗಳಲ್ಲಿ ಕನ್ನಡ ಬಗ್ಗೆ ಅರಿವು ಮೂಡಿಸಬೇಕು. ಮಾತೃಭೂಮಿ ಮತ್ತು ಮಾತೃಭಾಷೆಯ ಬಗ್ಗೆ ಮಕ್ಕಳಲ್ಲಿ ಮಾತೆಯರು ಒಲವು ಮೂಡಿಸಿದಾಗ ಭಾಷೆ ಉಳಿಯುತ್ತದೆ. ಪುಸ್ತಕ ಓದುವಾಗ ಸಿಗುವ ಸಂತೋಷ ಇ-ಸಾಹಿತ್ಯದಿಂದ ದೊರೆಯುವುದಿಲ್ಲ.
ಪುಸ್ತಕಗಳನ್ನ ಓದಿದಾಗ ಶತಮಾನಗಳ ಪಯಣ ಮಾಡಿದ ಅನುಭವ ಸಿಗುತ್ತದೆ ಎಂದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ಒಂದರಿಂದ ಹತ್ತನೆ ತರಗತಿವರೆಗಿನ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ದೊರೆಯದಿದ್ದರೆ ಕನ್ನಡ ಉದ್ಧಾರವಾಗುವುದಿಲ್ಲ ಎಂದರು.
ಕನ್ನಡ ರಾಜ್ಯೋತ್ಸವ ಸಂಭ್ರಮ ಆಚರಣೆಯ ಅಂಗವಾಗಿ ಸಪ್ನ ಬುಕ್ ಹೌಸ್ ಹೊರ ತಂದಿರುವ ಕನ್ನಡದ 50 ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ. ಮರುಳ ಸಿದ್ದಪ್ಪ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಸಪ್ನ ಬುಕ್ ಹೌಸ್ ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಇತರರಿದ್ದರು.